ಮಂಡ್ಯ: ಮಂಡ್ಯದಿಂದ ಶ್ರವಣಬೆಳಗೊಳ ರಸ್ತೆಯನ್ನು ಮೇಲ್ದರ್ಜೆಗೇರಿಸಲು ಕೆಶಿಪ್‌ಗೆ ಪ್ರಸ್ತಾವನೆ ಸಲ್ಲಿಕೆಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.
ಮಂಡ್ಯ ನಗರದಿಂದ-ಜಕ್ಕನಹಳ್ಳಿವರೆಗೆ ರಸ್ತೆ ಪರಿಶೀಲಿಸಿ ಮಾತನಾಡಿದ ಅವರು, ಮಂಡ್ಯದಿಂದ ಶ್ರವಣಬೆಳಗೊಳ ಮಾರ್ಗವನ್ನು ಚತುಷ್ಪಥ ರಸ್ತೆಯನ್ನಾಗಿ ಮಾಡುವ ಸಂಬಂಧ ಯೋಜನೆ ರೂಪಿಸಲಾಗುತ್ತಿದೆ. ಇನ್ನು ಬೆಂಗಳೂರು-ಮೈಸೂರು ದಶಪಥ ರಸ್ತೆ ಕಾಮಗಾರಿ ಸಮಯದಲ್ಲಿ ಮಂಡ್ಯದಿಂದ ಮೇಲುಕೋಟೆಗೆ ಸಂಪರ್ಕ ಕಲ್ಪಿಸುವ ಹೊಳಲು, ದುದ್ದ ರಸ್ತೆ ಹಾಳಾಗಿದೆ. ಆ ಸಮಯದಲ್ಲಿ ಮಣ್ಣನ್ನು ಸಾಗಿಸಲು ಈ ಮಾರ್ಗದಲ್ಲಿ ಹೆಚ್ಚು ಟಿಪ್ಪರ್‌ಗಳ ಸಂಚಾರವಾಗಿದ್ದು, ಪರಿಣಾಮ ಗುಂಡಿ ಬಿದ್ದಿವೆ ಎಂದರು.
ಹಾಳಾಗಿರುವ ರಸ್ತೆಯನ್ನು ಸರಿಪಡಿಸಿಕೊಡುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿತ್ತು. ಆದರೆ ಅವರು ಸರಿಪಡಿಸದೇ ನಿರ್ಲಕ್ಷೃ ತೋರಿದ ಬಗ್ಗೆ ಸಚಿವ ಎನ್.ಚಲುವರಾಯಸ್ವಾಮಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದಾಗ ಪ್ರತಿಕ್ರಿಯಿಸಿದ ಅಧಿಕಾರಿಗಳು, ಈ ಸಂಬಂಧ ಸೂಚನೆ ನೀಡಿದರೂ ಗುತ್ತಿಗೆದಾರ ಕೆಲಸ ಮಾಡಿಲ್ಲ. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಲ್ಲಿರುವ ಅನುದಾನವನ್ನು ಬಳಸಿಕೊಂಡು ಜನರಿಗೆ ಅನುಕೂಲವಾಗುವಂತೆ ರಸ್ತೆ ಮಾಡಿಕೊಡಲಾಗುವುದು ಎಂದು ಹೇಳಿದರು.
ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ, ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ರಾಹುಲ್‌ಗುಪ್ತಾ, ಪಿಡಬ್ಲುೃಡಿ ಅಧೀಕ್ಷಕ ಇಂಜಿನಿಯರ್ ವಿಜಯ್‌ಕುಮಾರ್, ಕಾರ್ಯಪಾಲಕ ಇಂಜಿನಿಯರ್ ಜಿ.ರಾಜು, ಮಾಜಿ ಶಾಸಕ ಎಚ್.ಬಿ.ರಾಮು, ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ, ತಾಪಂ ಮಾಜಿ ಅಧ್ಯಕ್ಷ ಸಿ.ತ್ಯಾಗರಾಜು, ಮುಖಂಡರಾದ ರವಿ ಭೋಜೇಗೌಡ, ಕಂಬದಹಳ್ಳಿ ಪುಟ್ಟಸ್ವಾಮಿ, ರೇವಣ್ಣ, ರಾಮಚಂದ್ರು ಇತರರಿದ್ದರು. ಇನ್ನು ರಸ್ತೆ ಪರಿಶೀಲನೆ ವೇಳೆ ಸಚಿವ ಎನ್.ಚಲುವರಾಯಸ್ವಾಮಿ ಅಲ್ಲಲ್ಲಿ ಸಾರ್ವಜನಿಕರನ್ನು ಭೇಟಿ ಮಾಡಿ ಅವರ ಸಮಸ್ಯೆ ಆಲಿಸಿದರು.