ಮಂಡ್ಯ: ಕಾವೇರಿ ನದಿ ನೀರಿನ ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಈ ಹಿಂದೆ ಅನೇಕ ಬಾರಿ ಸರ್ವಪಕ್ಷಗಳ ಸಭೆ ಕರೆಯಲಾಗಿದೆ. ಆ ಸಂದರ್ಭ ಬಂದಾಗ ಮುಖ್ಯಮಂತ್ರಿ ನಿರ್ಧಾರ ತೆಗೆದುಕೊಳ್ಳುತ್ತಾರೆಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿಗೆ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಟಾಂಗ್ ನೀಡಿದರು.
ಕೆಆರ್‌ಎಸ್ ಡ್ಯಾಂನಿಂದ ತಮಿಳುನಾಡಿಗೆ ನೀರು ಹರಿಸುತ್ತಿರುವ ಹಿನ್ನೆಲೆಯಲ್ಲಿ ಸರ್ವ ಪಕ್ಷ ಸಭೆ ಕರೆಯುವಂತೆ ಎಚ್‌ಡಿಕೆ ಸಲಹೆ ನೀಡಿದ್ದ ಹಿನ್ನೆಲೆಯಲ್ಲಿ ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದ ಅವರು, ಕಾವೇರಿ ನೀರಿನ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರ ಸದಾ ರೈತರ ಪರ ಇದೆ. ಸಿಡಬ್ಲುೃಎಸ್ ಕಮಿಟಿ ಕೇಂದ್ರದಲ್ಲಿದೆ. ಆದರೂ ಕೇಂದ್ರ ಸರ್ಕಾರವನ್ನು ಮನವೊಲಿಸಿ ರೈತರ ರಕ್ಷಣೆಗೆ ಮುಂದಾಗಿದ್ದೇವೆ. ಕಮಿಟಿಯಲ್ಲಿ ರಾಜ್ಯ ಸರ್ಕಾರ ನೀರಾವರಿ ಇಲಾಖೆ ಸಮರ್ಥವಾಗಿ ವಾದ ಮಂಡಿಸಿದೆ. ಆದರೆ ತೀರ್ಮಾನ ಒಪ್ಪದೇ ತಮಿಳುನಾಡು ಸುಪ್ರೀಂಕೋರ್ಟ್‌ಗೆ ಹೋಗಿದೆ. ಸುಪ್ರೀಂಕೋರ್ಟ್‌ನಲ್ಲಿ ಕೇಸ್ ದಾಖಲು ಆಗಿದ್ದು, ಇನ್ನೂ ತೀರ್ಪು ಬಂದಿಲ್ಲ. ಕಾವೇರಿ ಅಚ್ಚುಕಟ್ಟು ಪ್ರದೇಶದಲ್ಲಿರುವ ಬೆಳೆಗಳ ರಕ್ಷಣೆ ಹಾಗೂ ಕುಡಿಯುವ ನೀರಿಗೆ ಕ್ರಮ ವಹಿಸಿದ್ದೇವೆ. ಕೋರ್ಟ್ ಏನು ತೀರ್ಮಾನ ಏನು ಹೇಳುತ್ತದೋ ಅದರ ಮೇಲೆ ಮುಂದೆ ನಾವು ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದರು.