ಜಿಲ್ಲೆ

ಸುರೇಶ್‌ಗೌಡ ಜೆಡಿಎಸ್‌ನ ಪ್ರಬಲ ಅಭ್ಯರ್ಥಿ: ನಾವು ಅಭ್ಯರ್ಥಿ ಹುಡುಕುವುದು ಕಷ್ಟ ಎಂದ ಕಾಂಗ್ರೆಸ್ ನಾಯಕ

ಮಂಡ್ಯ: ಲೋಕಸಭೆ ಚುನಾವಣೆಯಲ್ಲಿ ನಾಗಮಂಗಲ ಮಾಜಿ ಶಾಸಕ ಸುರೇಶ್‌ಗೌಡ ವಿರುದ್ಧ ಗೆಲ್ಲುವುದಕ್ಕೆ ಆಗುತ್ತಾ?. ಎಲ್ಲದರೂ ಉಂಟಾ ಎಂದು ಸಚಿವ ಎನ್.ಚಲುವರಾಯಸ್ವಾಮಿ ವ್ಯಂಗ್ಯವಾಡಿದರು.

ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಂಪಿ ಚುನಾವಣೆಯಲ್ಲಿ ತನ್ನ ವಿರುದ್ಧ ಚಲುವರಾಯಸ್ವಾಮಿ ಪ್ರತಿ ಸ್ಪರ್ಧಿಯಾಗಿ ಗೆಲ್ಲಲ್ಲಿ ಎಂಬ ಸುರೇಶ್‌ಗೌಡ ಸವಾಲಿಗೆ ತಿರುಗೇಟು ನೀಡಿದ ಸಚಿವರು, ಸುರೇಶ್‌ಗೌಡ ಜೆಡಿಎಸ್‌ನ ಪ್ರಬಲ ಅಭ್ಯರ್ಥಿ. ನಾವು ಅಭ್ಯರ್ಥಿ ಹುಡುಕುವುದು ಕಷ್ಟ. ಇನ್ನು ನಾವು ತೀರ್ಮಾನಕ್ಕೆ ಬಂದಿಲ್ಲ. ಬೇರೆಯವರು ಯಾರಾದರೂ ಆದರೆ ಸುಲಭವಾಗಿ ಅಭ್ಯರ್ಥಿ ಹಾಕುತ್ತೇವೆ. ಒಂದು ವೇಳೆ ಸುರೇಶ್‌ಗೌಡ ಅಭ್ಯರ್ಥಿಯಾದರೆ ನಾವು ಯೋಚನೆ ಮಾಡಬೇಕು ಎಂದು ಲೇವಡಿ ಮಾಡಿದರು.

ರಾಷ್ಟ್ರದಲ್ಲಿ ಮೈತ್ರಿ ಧರ್ಮವನ್ನು ಬಹಳ ಚೆನ್ನಾಗಿ ಪಾಲನೆ ಮಾಡುವುದು ಜೆಡಿಎಸ್ ಮಾತ್ರ. ಬಿಜೆಪಿ ಜತೆಗೆ ಮೈತ್ರಿ ಮಾಡಿಕೊಳ್ಳುತ್ತಿರುವ ಜೆಡಿಎಸ್‌ಗೆ ಒಳ್ಳೆಯದಾಗಲಿ. 50-50, 40-50, 30-70 ಎಷ್ಟಾದರೂ ಸಂತೋಷ. ನಮಗೆ ಯಾವುದೇ ದ್ವೇಷ ಇಲ್ಲ. ಜೆಡಿಎಸ್‌ನವರು ನಮ್ಮ ಹಳೆಯ ಸ್ನೇಹಿತರು. ಬಿಜೆಪಿ ಅವರು ಅವರಿಗೆ ಅವಕಾಶ ಕೊಟ್ಟಿದ್ದಾರೆಂದರೆ ಖುಷಿಪಡುತ್ತೇವೆ ಎಂದರು.

ಬಿಜೆಪಿ, ಯಡಿಯೂರಪ್ಪ ಅವರ ಜತೆ ಹಿಂದೆ ಜೆಡಿಎಸ್ ಇದ್ದು ಬಂದಿದ್ದು ಗೊತ್ತಿದೆ. ಕಾಂಗ್ರೆಸ್, ಧರ್ಮಸಿಂಗ್ ಜತೆ ಇದ್ದು ಬಂದಿದ್ದು ಗೊತ್ತಿದೆ. ಮೈತ್ರಿ ಧರ್ಮನಾ ಜೆಡಿಎಸ್ ಮಾತ್ರ ಎಲ್ಲರಿಗಿಂತ ನಡೆಸುತ್ತಾರೆ. ಕಾಂಗ್ರೆಸ್‌ನವರು ನಮಗೆ ಅನ್ಯಾಯ ಮಾಡಿದ್ದಾರೆಂದು ಮಾಜಿ ಸಿಎ ಎಚ್.ಡಿ.ಕುಮಾರಸ್ವಾಮಿ ಹೇಳುತ್ತಾರೆ. ಆದ್ದರಿಂದ ಜೆಡಿಎಸ್ ಮತ್ತು ಕುಮಾರಸ್ವಾಮಿ ಮಾತ್ರ ಮೈತ್ರಿ ಧರ್ಮ ಪಾಲಕರು ಎಂದು ವಾಗ್ದಾಳಿ ನಡೆಸಿದರು.

ರಾಜ್ಯದಲ್ಲಿ ಕರೊನಾ ಉಲ್ಬಣದ ವಿಚಾರಕ್ಕೆ ಪ್ರತಿಕ್ರಿಯಿಸಿ, ವೈರಸ್ ರೂಪಾಂತರ ಆಗಿದೆ. ಕೇರಳದಿಂದ ಪ್ರಕರಣ ಹೆಚ್ಚಾಗುತ್ತಿದ್ದು, ನಮ್ಮ ರಾಜ್ಯಕ್ಕೆ ಬರುತ್ತಿದೆ ಎನ್ನುವ ಆತಂಕ ಇದೆ. ನಮ್ಮ ಸರ್ಕಾರ ಹಾಗೂ ಆರೋಗ್ಯ ಇಲಾಖೆ ಎಚ್ಚರಿಕೆ ವಹಿಸಿದೆ. ಆರೋಗ್ಯ ಇಲಾಖೆ ಅಧಿಕಾರಿಗಳ ಜತೆ ಮಾತನಾಡಿ ಮುನ್ನೆಚ್ಚರಿಕೆ ಕ್ರಮಕ್ಕೆ ಸೂಚನೆ ನೀಡಲಾಗಿದೆ. ಜನರು ಸಹ ನಿರ್ಲಕ್ಷೃ ಮಾಡದೆ ಎಚ್ಚರಿಕೆ ವಹಿಸಿ ಎಂದು ಸಚಿವರು ಮನವಿ ಮಾಡಿದರು.

ದೆಹಲಿಯಲ್ಲಿ ಪ್ರಧಾನಿ ಭೇಟಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ರಾಜ್ಯದ ಅನೇಕ ಸಮಸ್ಯೆಗಳ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೊಂದಿಗೆ ಮಾತಾಡಿದ್ದೇವೆ. ಬರ ಪ್ರಮುಖ ವಿಚಾರವಾಗಿರುವುದರಿಂದ ಅದರ ಬಗ್ಗೆ ಚರ್ಚೆ ಮಾಡಿದ್ದೇವೆ. ಆದಷ್ಟು ಬೇಗ ಬರ ಪರಿಹಾರ ನೀಡುವಂತೆ ಕೇಳಿದ್ದೇವೆ. ಒಕ್ಕೂಟದ ವ್ಯವಸ್ಥೆಯಲ್ಲಿ ಇರುವ ಕಾರಣ ಅವರಿಂದ ನಮಗೆ ನಿರೀಕ್ಷೆ ಇದೆ. ಬರ ಪರಿಹಾರ ಎಷ್ಟು ಕೊಡುತ್ತಾರೆಂದು ನೋಡಬೇಕು. ನಮ್ಮ ಪರಿಸ್ಥಿತಿಯನ್ನು ವಿವರವಾಗಿ ಹೇಳಿದ್ದೇವೆ ಎಂದರು.

ಕೆಆರ್‌ಎಸ್ ಡ್ಯಾಂನಿಂದ ನದಿಗೆ ಒಂದು ಕ್ಯೂಸೆಕ್ ನೀರು ಬಿಡುಗಡೆ ವಿಚಾರದ ಬಗ್ಗೆ ಮಾತನಾಡಿದ ಚಲುವರಾಯಸ್ವಾಮಿ, ಒಂದು ಸಾವಿರ ಕ್ಯೂಸೆಕ್ ಬಿಡಿ ಎಂದು ಹೇಳಿದ್ದಾರೆ. ಆಗಿದ್ದರೂ ನಾವು ನೀರು ಬಿಟ್ಟಿಲ್ಲ, ಸೀಪೇಜ್ ವಾಟರ್ ಹೋಗುತ್ತಿದೆ. ನಾಲೆಗಳಿಗೆ ನೀರು ಬಿಡುವ ಬಗ್ಗೆ ಡಿ.22ರಂದು ಸಭೆ ಇದ್ದು, ಅಲ್ಲಿ ಚರ್ಚಿಸಿ ತೀರ್ಮಾನ ಮಾಡುತ್ತೇವೆ. ನಿಗಮ ಮಂಡಳಿ ನೇಮಕ ವಿಚಾರದಲ್ಲಿ ಯಾವುದೇ ಗೊಂದಲವಿಲ್ಲ. ಶೀಘ್ರ ಪಟ್ಟಿ ಘೋಷಣೆಯಾಗಲಿದೆ ಎಂದು ಹೇಳಿದರು.