ಜಿಲ್ಲೆ

ವಿರೋಧವಾಗಿ ಮಾತನಾಡುವುದೇ ವಿಪಕ್ಷಗಳ ಉದ್ಯೋಗ: ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ವ್ಯಂಗ್ಯ

ಮಂಡ್ಯ: ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳು ಯಾವುದೇ ಕಾರಣಕ್ಕೂ ನಿಲ್ಲಲ್ಲ. ಅದನ್ನು ನಿಲ್ಲಿಸುವಂತೆ ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ಒತ್ತಡವಾಗಿದೆ. ಶ್ರೀಮಂತರು ಸುಳ್ಳು ದಾಖಲೆ ನೀಡಿ ನಕಲಿ ಬಿಪಿಎಲ್ ಕಾರ್ಡ್ ಮಾಡಿ ಯೋಜನೆ ಉಪಯೋಗ ಪಡೆಯುತ್ತಿದ್ದಾರೆ. ಅದಕ್ಕಾಗಿ ಪರಿಷ್ಕರಣೆ ಮಾಡಲು ಇಕೆವೈಸಿ ಮಾಡಿಸಲು ಹೇಳಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಸ್ಪಷ್ಟಪಡಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಡಿದ ಅವರು, ಗ್ಯಾರಂಟಿ ನಿಲ್ಲಿಸದಂತೆ ಬಿಜೆಪಿ ಮತ್ತು ಜೆಡಿಎಸ್ ಈಗ ಒತ್ತಾಯಿಸುತ್ತಿವೆ. ಅವರು ಆರು ಅಂದರೆ ಮೂರು, ಮೂರು ಅಂದರೆ ಆರು ಎನ್ನುತ್ತಾರೆ. ವಿರೋಧವಾಗಿ ಮಾತನಾಡುವುದು ಅವರಿಗೆ ರುಚಿ, ಅದೇ ಉದ್ಯೋಗ. ಅವರಿಗೆ ಸಿಎಂ, ಡಿಸಿಎಂ ನೋಡಿಕೊಂಡು ಇರುವುದಕ್ಕೆ ಆಗುತ್ತಿಲ್ಲ. ಬಿಜೆಪಿ ಮತ್ತು ಜೆಡಿಎಸ್‌ನವರಿಗೆ ನಾಚಿಕೆ, ಮಾನ ಮರ್ಯಾದೆ ಇದ್ಯಾ ಎಂದು ವಾಗ್ದಾಳಿ ನಡೆಸಿದರು.

ನಮ್ಮ ಸಚಿವರು ಬಿಪಿಎಲ್ ಕಾರ್ಡ್‌ಗಳು ಪರಿಷ್ಕರಣೆ ಆಗಬೇಕು ಎಂದು ಹೇಳಿದ್ದಾರೆ. ಐದು ವರ್ಷಗಳ ಕಾಲ ನಮ್ಮ ಸರ್ಕಾರ ಮುಂದುವರಿಯುತ್ತದೆ. ಅದೇ ರೀತಿ ಗ್ಯಾರಂಟಿ ಯೋಜನೆಗಳು ಇರುತ್ತವೆ. ಈ ಹಿಂದೆಯ ಸರ್ಕಾರದ ಕಾಮಗಾರಿ ಹಾಗೂ ಈಗ ನಡೆಯುತ್ತಿರುವ ಕಾಮಗಾರಿಗಳ ಪಟ್ಟಿ ನೋಡಿ. ನಮ್ಮ ಕಾಲದಲ್ಲಿ ಹೆಚ್ಚು ಕಾಮಗಾರಿಯನ್ನು ಮಂಜೂರು ಮಾಡಲಾಗಿದೆ. ಗ್ಯಾರಂಟಿಗೂ ಅಭಿವೃದ್ಧಿಗೂ ಸಂಬಂಧವಿಲ್ಲ. ನಮ್ಮ ಸರ್ಕಾರದಿಂದ ಗ್ಯಾರಂಟಿ ಯೋಜನೆ ಸಿಗುತ್ತದೆ, ಅಭಿವೃದ್ಧಿಯೂ ಆಗುತ್ತದೆ. ಬಿಜೆಪಿ ಅವರು ನಮ್ಮ ಸರ್ಕಾರದ ವಿರುದ್ಧ ಸುಳ್ಳು ಹೇಳುತ್ತಿದ್ದಾರೆ. 30 ವರ್ಷದ ಬಳಿಕ ನಮ್ಮ ಸರ್ಕಾರಕ್ಕೆ ಹೆಚ್ಚಿನ ಸೀಟ್ ಬಂದಿದೆ. ಮತ್ತೊಂದೆಡೆ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯಿಂದ ಅವರಿಗೆ ಲಾಭ ಆಗಿಲ್ಲ. ಜೆಡಿಎಸ್ ಅವರು ಯಾವಾಗಲೂ ಎಂಪಿ ಚುನಾವಣೆಯಲ್ಲಿ ಎರಡು ಅಥವಾ ಮೂರು ಗೆಲ್ಲುತ್ತಾರೆ. ಈಗ ಎರಡು ಕ್ಷೇತ್ರದಲ್ಲಿ ಗೆದ್ದಿದ್ದಾರೆ. ಹೀಗಾಗಿ ಗ್ಯಾರಂಟಿ ನಿಲ್ಲುತ್ತದೆ ಎಂದು ಸುಳ್ಳು ಹೇಳುತ್ತಿದ್ದಾರೆ. ಆದರೆ ನಮ್ಮ ಸರ್ಕಾರದಲ್ಲಿ ಎಲ್ಲಾ ಕೆಲಸಗಳು ಆಗುತ್ತಿವೆ ಎಂದರು.

ವಿಪಕ್ಷಗಳು ಎನ್‌ಡಿಆರ್‌ಎಫ್ ಹಣ ಕೊಡಿಸಿದರೆ?. ಸುಪ್ರೀಂ ಕೋರ್ಟ್‌ಗೆ ಹೋಗಿ ನಾವು ಹಣ ಪಡೆದುಕೊಳ್ಳಬೇಕಾಯಿತು. ಹಣೆ ಚಚ್ಚಿಕೊಂಡರೂ ನಮ್ಮ ಮನವಿಗೆ ಸ್ಪಂದಿಸಲಿಲ್ಲ, ಅಮಿತ್ ಷಾ ಸಭೆ ನಡೆಸಲಿಲ್ಲ. ನೀರಾವರಿ ಯೋಜನೆಗೆ 5 ಸಾವಿರ ಕೋಟಿ ರೂ ಕೊಡುತ್ತೇವೆ ಎಂದರು. ಬೆಂಗಳೂರಿಗೆ 5 ಕೋಟಿ ರೂ ಕೊಡುತ್ತೇವೆ ಎಂದು ಕೊಟ್ಟರೆ?. ಅಷ್ಟಾದರೂ ನಾವು ಅಭಿವೃದ್ದಿಗೆ ತೊಂದರೆಯಾಗದಂತೆ ಆಡಳಿತ ನಡೆಸುತ್ತಿದ್ದೇವೆ ಎಂದು ಹೇಳಿದರು.

ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ನಾವು ಗೆಲ್ಲುತ್ತೇವೆ. 100ಕ್ಕೆ 100 ತಯಾರಿ ಆಗುತ್ತಿದ್ದೇವೆ. ಬಿಜೆಪಿ ಮತ್ತು ಜೆಡಿಎಸ್‌ನಲ್ಲಿ ಗೊಂದಲ ಇದೆ. ಯೋಗೇಶ್ವರ್ ಹಾಗೂ ಜೆಡಿಎಸ್ ನಡುವೆ ಗೊಂದಲವಿದೆ. ನಮ್ಮ ಡಿಸಿಎಂ ಶಿವಕುಮಾರ್ ಅವರ ಜಿಲ್ಲೆ ಅದು. ಯಾರು ಅಭ್ಯರ್ಥಿ ಎನ್ನುವುದನ್ನು ನೋಡುತ್ತಿದ್ದೇವೆ. ಯೋಗೇಶ್ವರ್ ವಿಚಾರ ನನಗೆ ಗೊತ್ತಿಲ್ಲ. ಅವರು ಇನ್ನೂ ಬಿಜೆಪಿ ಪಕ್ಷ ಬಿಟ್ಟಿಲ್ಲ. ನಮ್ಮ ಪಕ್ಷದ ಸಿದ್ಧಾಂತ ಒಪ್ಪಿ ಯಾರು ಬಂದರೆ ಬರಲಿ. ನಮ್ಮಲ್ಲಿ ಸಧ್ಯ ಯಾವುದೇ ಗೊಂದಲ ಇಲ್ಲ. ಆದರೆ ಬಿಜೆಪಿ ಮತ್ತು ಜೆಡಿಎಸ್ ಅವರು ಕಾಂಗ್ರೆಸ್‌ನಲ್ಲಿ ಗೊಂದಲ ಇದೆ ಎನ್ನುತ್ತಿದ್ದಾರೆ. ಬಿಜೆಪಿ ಮುಂದಿನ ಚುನಾವಣೆಯಲ್ಲಿ 40 ಸೀಟ್ ಗೆಲ್ಲುತ್ತದೆ. ಯಡಿಯೂರಪ್ಪ, ಯತ್ನಾಳ್ ಇಬ್ಬರೂ ಬೇರೆ ಆಗುತ್ತಾರೆ. ಇನ್ನು ಮಹಾನ್ ನಾಯಕ ಕುಮಾರಸ್ವಾಮಿ ಎಷ್ಟು ಗೆಲ್ಲುತ್ತಾರೆ ನೋಡೋಣಾ ಎಂದು ಛೇಡಿಸಿದರು.