ಜಿಲ್ಲೆ

ವಿಪಕ್ಷಗಳು ಏನೇ ಟೀಕಿಸಿದರೂ ನಾವು ರೈತರ ಪರ: ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿಕೆ

ಮಂಡ್ಯ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗ ಬರಗಾಲವೆಂದು ವಿಪಕ್ಷಗಳು ಟೀಕೆ ಮಾಡುತ್ತಿದ್ದವು. ಅದಕ್ಕೆ ದೇವರ ದಯೆಯಿಂದ ಈಗ ಉತ್ತರ ಸಿಕ್ಕಿದೆ. ಕೆಆರ್‌ಎಸ್ ಡ್ಯಾಂಗೆ ಸಿಎಂ ಸಿದ್ದರಾಮಯ್ಯ ಬಾಗಿನ ಅರ್ಪಿಸಿದ್ದಾರೆ. ಆದ್ದರಿಂದ ಬಿಜೆಪಿ, ಜೆಡಿಎಸ್ ಏನೇ ಟೀಕೆ ಮಾಡಿದರೂ ನಮ್ಮ ಸರ್ಕಾರ ರೈತ ಪರ ಇರಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.

ಕೆಆರ್‌ಎಸ್‌ನಲ್ಲಿ ಮಾತನಾಡಿದ ಅವರು, ಹಿಂದೆ ಜೆಡಿಎಸ್ ಮತ್ತು ಬಿಜೆಪಿ ಆಡಳಿತ ಮಾಡಿದಾಗಲೂ ಬರಗಾಲವಿತ್ತು. ಇದನ್ನ ವಿರೋಧ ಪಕ್ಷದವರು ಆಲೋಚನೆ ಮಾಡಬೇಕು. ರಾಜಕೀಯವಾಗಿ ವಿರೋಧ ಪಕ್ಷಗಳು ಟೀಕೆ ಮಾಡುತ್ತಿವೆ. ಮಾತ್ರವಲ್ಲದೆ ಸುಳ್ಳಿನಿಂದಲೇ ಜನರನ್ನು ನಂಬಿಸುವ ಕೆಲಸ ಮಾಡುತ್ತಿವೆ. ಇದು ಅವರಿಗೆ ಶೋಭೆ ತರುವುದಿಲ್ಲ. ನಮ್ಮ ಸರ್ಕಾರ ಕೇವಲ ಆಡಳಿತ ಮಾಡಲಿಕ್ಕೆ ಮಾತ್ರ ಬಂದಿಲ್ಲ. ರೈತರ ಪರವಾದ ಯೋಜನೆಗಳನ್ನು ನೀಡಿ, ಜನತೆಯ ಅಭಿವೃದ್ಧಿಗೆ ಶ್ರಮಿಸುವ ಕೆಲಸ ಮಾಡುತ್ತೇವೆ. ಕಳೆದ ಬೇಸಿಗೆಯಲ್ಲಿ ಬರಗಾಲ ಇದ್ದರೂ ಕೂಡ ಜನರಿಗೆ ಅದರ ಬಿಸಿ ತಟ್ಟದಂತೆ 5 ಗ್ಯಾರಂಟಿ ಯೋಜನೆ ಹಾಗೂ ಅಭಿವೃದ್ಧಿ ಕಾರ್ಯಗಳನ್ನು ನೀಡುವ ಮೂಲಕ ಒಳಿತು ಮಾಡಿದ್ದೇವೆ. ರೈತರಿಗೆ ಬಿತ್ತನೆ ಬೀಜ, ಗೊಬ್ಬರ, ಕೀಟನಾಶಕ ನೀಡುವ ಮೂಲಕ ಬೇಸಿಗೆಯಲ್ಲಿ ಬಂದಂತಹ ಬರಗಾಲವನ್ನು ಯಾವುದೇ ಸಮಸ್ಯೆಯಿಲ್ಲದೆ ಬಗೆಹರಿಸಿದ್ದೇವೆ ಎಂದರು.

ಸರ್ಕಾರದಿಂದ ದೊರೆಯುವ ಎಲ್ಲ ಸೌಲಭ್ಯಗಳನ್ನು ಸಾರ್ವಜನಿಕರಿಗೆ ನೀಡುತ್ತಿದ್ದೇವೆ. ಮುಂದಿನ ದಿನಗಳಲ್ಲೂ ಸಹ ರೈತರ ಯಾವುದೇ ಸಮಸ್ಯೆಯಲ್ಲೂ ಕೂಡ ಜತೆ ನಿಂತು ಬಗೆಹರಿಸಲಾಗುವುದು. ದೇಶದ ಆಡಳಿತವನ್ನು ನಿರ್ಧಾರ ಮಾಡುವಂತದ್ದು ಜನತೆಯೇ ವಿನಃ ಯಾವುದೇ ಅಧಿಕಾರವಲ್ಲ ಎಂದ ಅವರು, ವಿಶ್ವದರ್ಜೆ ಮಟ್ಟದಲ್ಲಿ ಕೆಆರ್‌ಎಸ್ ಬೃಂದಾವನವನ್ನು ಉನ್ನತೀಕರಿಸಲಾಗುವುದು. ಮಂಡ್ಯ ರೈತರ ಜಿಲ್ಲೆಯಾಗಿದೆ. ಅವರಿಗೆ ಅನುಕೂಲ ಮಾಡಲು ನೂತನವಾಗಿ ಸಕ್ಕರೆ ಕಾರ್ಖಾನೆ ಹಾಗೂ ಕೃಷಿ ವಿಶ್ವ ವಿದ್ಯಾನಿಲಯವನ್ನು ಪ್ರಾರಂಭಿಸಲಾಗುವುದು. ಈ ವಿಚಾರದಲ್ಲೂ ನಮ್ಮ ಸರ್ಕಾರ ಬದ್ಧತೆಯನ್ನು ತೋರುತ್ತದೆ ಎಂದು ಹೇಳಿದರು.

ಸಿಎಂ ಸಿದ್ದರಾಮಯ್ಯ ಅವರು 3ನೇ ಬಾರಿ ಕೆಆರ್‌ಎಸ್‌ಗೆ ಬಾಗಿನ ಅರ್ಪಿಸುವ ಸುಯೋಗ ಬಂದಿದೆ. ಇನ್ನು ಕರ್ನಾಟಕ ಹಾಗೂ ತಮಿಳುನಾಡಿನ ನಡುವಿನ ನೀರಿನ ಸಮಸ್ಯೆಯನ್ನು ಬಗೆಹರಿಸಲು ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ 2 ಸಮಿತಿ ಮಾಡಲಾಗಿದ್ದು, ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡಲಾಗುವುದು. ಈ ನಾಡಿನಲ್ಲಿ ಹಲವು ಅಣೆಕಟ್ಟೆಗಳಿವೆ. ಈ ಪೈಕಿ ಕಾವೇರಿ ಎಂದರೆ ಅಂತಾರಾಷ್ಟ್ರೀಯ ಮಟ್ಟದಲ್ಲೂ ಹೆಸರುವಾಸಿಯಾಗಿದ್ದು, ಒಂದು ಭಾವನಾತ್ಮಕತೆ ಹೊಂದಲಾಗಿದೆ. ಇಂತಹ ಅಣೆಕಟ್ಟಿನ ನಿರ್ಮಾಣಕ್ಕೆ ಕಾರಣರಾಗಿರುವಂತಹ ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಸರ್.ಎಂ.ವಿಶ್ವೇಶ್ವರಯ್ಯ ಅವರ ಕೀರ್ತಿಯನ್ನು ಪ್ರತಿಯೊಬ್ಬರೂ ಒಪ್ಪಲೇಬೇಕು ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಶಾಸಕರೂ ಆದ ಚೆಸ್ಕಾಂ ಅಧ್ಯಕ್ಷ ರಮೇಶ ಬಂಡಿಸಿದ್ದೇಗೌಡ, ಹಿಂದೆ ನಾನು ಜೆಡಿಎಸ್ ಶಾಸಕನಾಗಿದ್ದರೂ ಸಿದ್ದರಾಮಯ್ಯ ಅವರು ನಾಲೆ ಅಭಿವೃದ್ಧಿಗೆ ಅನುದಾನ ನೀಡಿದ್ದರು. ಅದರಿಂದಾಗಿ ಸಾಕಷ್ಟು ರೈತರಿಗೆ ಅನುಕೂಲವಾಗಲಿದೆ. ಆದ್ದರಿಂದ ಈಗಲೂ ಕೂಡ ಸಿಡಿಎಸ್ ಉಪನಾಲೆ ಆಧುನೀಕರಣವಾಗಬೇಕಿದ್ದು, ಸುಮಾರು ಎರಡೂವರೆ ಕೋಟಿ ರೂ ಅಗತ್ಯವಿದೆ. ಅಂತೆಯೇ ನಿರಂತರ ಮಳೆಯಿಂದಾಗಿ ಕೊಡಗು ಜಿಲ್ಲೆಯಲ್ಲಿ 700ಕ್ಕೂ ಹೆಚ್ಚು ವಿದ್ಯುತ್ ಕಂಬ ಮುರಿದು ಹೋಗಿವೆ. ಆದ್ದರಿಂದ ಎನ್‌ಡಿಆರ್‌ಎಫ್ ಅಥವಾ ಎಸ್‌ಡಿಆರ್‌ಎಫ್‌ನಿಂದ ಅನುದಾನ ಬಿಡುಗಡೆ ಮಾಡುವಂತೆ ಮನವಿ ಮಾಡಿದರು.

ಸಚಿವರಾದ ಎಚ್.ಸಿ.ಮಹದೇವಪ್ಪ, ವೆಂಕಟೇಶ್, ಶಾಸಕರಾದ ಪಿ.ಎಂ.ನರೇಂದ್ರಸ್ವಾಮಿ, ಕೆ.ಎಂ.ಉದಯ್, ರವಿಕುಮಾರ್ ಗಣಿಗ, ತನ್ವೀರ್ ಸೇಠ್, ರವಿಶಂಕರ್, ದರ್ಶನ್ ಧ್ರುವನಾರಾಯಣ್, ಮಂಥರ್‌ಗೌಡ, ಪುಟ್ಟರಂಗಶೆಟ್ಟಿ, ಎಂಎಲ್‌ಸಿಗಳಾದ ದಿನೇಶ್ ಗೂಳಿಗೌಡ, ಮಧು ಜಿ.ಮಾದೇಗೌಡ, ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪಂಚಾಯಿತಿ ಸಿಇಒ ಶೇಖ್ ತನ್ವೀರ್ ಆಸಿಫ್, ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ, ಮಂಡ್ಯ ಮುಡಾ ಅಧ್ಯಕ್ಷ ನಹೀಂ ಇತರರಿದ್ದರು.