ಜಿಲ್ಲೆ

ದೇಶ, ಭಾಷೆ ವಿಚಾರದಲ್ಲಿ ರಾಜಿ ಪ್ರಶ್ನೆಯಿಲ್ಲ: ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಹೇಳಿಕೆ

ಮಂಡ್ಯ: ದೇಶ, ಭಾಷೆ, ನೆಲದ ವಿಚಾರ ಬಂದಾಗ ಯಾವುದೇ ಪಕ್ಷ ಅಥವಾ ವ್ಯಕ್ತಿ ಇರಲಿ ರಾಜಿಯಾಗುವ ಪ್ರಶ್ನೆ ಇಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.

ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ಕೂಗಿದ್ದಾರೆನ್ನುವ ಆರೋಪಕ್ಕೆ ಸಂಬಂಧಿಸಿದಂತೆ ಶ್ರೀರಂಗಪಟ್ಟಣದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರಿಗೆ ಕ್ರಮ ಬೇಕಿಲ್ಲ. ಬದಲಿಗೆ ಲೋಕಸಭಾ ಚುನಾವಣೆಗೆ ವಿಚಾರ ಬೇಕಾಗಿದೆ. ಅದರಂತೆ ಇದಲ್ಲದೆ ರಾಜಕಾರಣ ಬೆರಸುವ ವಿಚಾರ ಅಲ್ಲ. ಪಾಕ್ ಪರ ಯಾರೇ ಘೋಷಣೆ ಕೂಗಿದ್ದರೂ ಸಹಿಸುವ ಪ್ರಶ್ನೆ ಇಲ್ಲ. ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳುತ್ತೇವೆ. ಆದರೆ ಮುಂದೆ ಎಂಪಿ ಚುನಾವಣೆ ಇದೆ. ಈ ಕಾರಣಕ್ಕೆ ಬಿಜೆಪಿಯವರು ಇದನ್ನು ಪ್ರಮುಖ ವಿಚಾರವಾಗಿ ತೆಗೆದುಕೊಂಡಿದ್ದಾರೆ. ಮೊದಲು ಇದನ್ನು ಅವರು ಬಿಡಬೇಕು. ಸರ್ಕಾರ ಇದರ ಬಗ್ಗೆ ಗಂಭೀರವಾಗಿ ಕ್ರಮ ಕೈಗೊಳ್ಳಲಿದೆ ಎಂದರು.

ಎಂಪಿ ಚುನಾವಣೆಗೆ ಮಂಡ್ಯದಿಂದ ಸ್ಟಾರ್ ಚಂದ್ರು ಪಕ್ಷದಿಂದ ಸ್ಪರ್ಧೆ ಮಾಡುತ್ತಾರೆನ್ನುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಎಂಎಲ್‌ಸಿ ದಿನೇಶ್ ಗೂಳಿಗೌಡ ಚುನಾವಣೆ ಎದುರಿಸಿದಾಗ ಹೊಸ ಮುಖ. ನನಗೂ ಪರಿಚಯ ಇರಲಿಲ್ಲ. ಸ್ಟಾರ್ ಚಂದ್ರು ನಮ್ಮ ಜತೆಯಲ್ಲಿ ಇಲ್ಲದಿದ್ದರೂ ಪಕ್ಷಕ್ಕಾಗಿ ದುಡಿದ್ದಿದ್ದಾರೆ. ಅವರ ಸಹೋದರ ಗೌರಿಬಿದನೂರಲ್ಲಿ ಶಾಸಕರಾಗಿ ನಮ್ಮ ಜತೆ ಇದ್ದಾರೆ. ಅವರಿಗೆ ಕಾಂಗ್ರೆಸ್‌ನಿಂದಲೇ ಅವಕಾಶ ಕೊಡಬೇಕಿತ್ತು. ಹಿರಿಯ ನಾಯಕರಿದ್ದ ಕಾರಣಕ್ಕೆ ಬಿ ಫಾರ್ಮ್ ಕೈತಪ್ಪಿತು. ಆದಾಗ್ಯ ನಮ್ಮ ಪಕ್ಷಕ್ಕೆ ಅವರ ಕುಟುಂಬ ಸಹಕಾರ ನೀಡಿದೆ. ಇನ್ನು ರಾಜ್ಯದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಈ ಸಂಬಂಧ ಕ್ರಮ ವಹಿಸುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ. ಬೋರ್‌ವೆಲ್, ಟ್ಯಾಂಕರ್ ಮೂಲಕ ನೀರೊದಗಿಸುವ ಕೆಲಸ ಮಾಡುತ್ತೇವೆ. ಸಮಸ್ಯೆ ಎದುರಾಗದಂತೆ ಜಿಲ್ಲಾಡಳಿತ, ತಾಲೂಕು ಆಡಳಿತ ಜವಾಬ್ದಾರಿ ನಿರ್ವಹಣೆ ಮಾಡಲಿದೆ ಎಂದು ಹೇಳಿದರು.