ಮಂಡ್ಯ: ರೈತರೊಂದಿಗೆ ಚರ್ಚಿಸಿ ಹಾಗೂ ಪರಿಸ್ಥಿತಿ ಅವಲೋಕಿಸಿ ಕೆಆರ್‌ಎಸ್ ಡ್ಯಾಂನಿಂದ ನಾಲೆಗಳಿಗೆ ನೀರು ಬಿಡುಗಡೆ ಮಾಡಲಾಗುವುದು. ರೈತರು ಬೆಳೆ ಬೆಳೆಯಲು ಅನಕೂಲವಾಗುವಂತೆ ಯಾವುದೇ ಕ್ಷಣದಲ್ಲಾದರೂ ನಾಲೆಗೆ ನೀರು ಬಿಡಲು ಸಿದ್ಧರಿದ್ದೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಅಣೆಕಟ್ಟೆಯಲ್ಲಿ 100 ಅಡಿ ಮೇಲ್ಪಟ್ಟು ನೀರು ಇದ್ದಾಗ ಮಾತ್ರ ಬೆಳೆ ಬೆಳೆಯಲು ನೀರು ಹರಿಸುವುದು ವಾಡಿಕೆ. ಪ್ರಸ್ತುತ ಕೆಆರ್‌ಎಸ್ ಅಣೆಕಟ್ಟೆಯಲ್ಲಿ 95 ಅಡಿ ನೀರಿದೆ. ಅಲ್ಲದೆ ಅಣೆಕಟ್ಟೆಗೆ ಹರಿದುಬರುತ್ತಿದ್ದ ನೀರಿನ ಪ್ರಮಾಣವೂ ಕಡಿಮೆಯಾಗಿದೆ. ಈ ಹಿನ್ನೆಲೆಯಲ್ಲಿ ರೈತ ಮುಖಂಡರೊಂದಿಗೆ ಚರ್ಚಿಸಲಾಗುವುದು ಎಂದರು.
ಕೆಆರ್‌ಎಸ್‌ನಲ್ಲಿ 110 ಅಡಿ ನೀರು ಸಂಗ್ರಹವಾದ ಬಳಿಕ ಬೆಳೆ ನಾಟಿ ಮಾಡಲು ನೀರು ಹರಿಸಲು ಪರಿಶೀಲನೆ ನಡೆಸಲಾಗುವುದು. ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ನೀರುಣಿಸಲು ವಿಶ್ವೇಶ್ವರಯ್ಯ ನಾಲೆಗೆ 10 ದಿನಗಳ ಕಾಲ ನೀರು ಬಿಡಲು ತೀರ್ಮಾನಿಸಲಾಗಿತ್ತು. ಆದರೆ ರೈತರ ಸಲಹೆ ಪಡೆದು ಜು.15ರ ನಂತರ ಪರಿಸ್ಥಿತಿ ಅವಲೋಕಿಸಿ ನಾಲೆಗೆ ನೀರು ಬಿಡುತ್ತೇವೆ. ವಿಶ್ವೇಶ್ವರಯ್ಯ ನಾಲಾ ಕಾಮಗಾರಿ ಮುಖ್ಯವಲ್ಲ. ಸಂಬಂಧಿಸಿದ ಗುತ್ತಿಗೆದಾರರಿಗೆ ಈಗಾಗಲೇ ನೀರು ಹರಿಸುವ ಸಂಬಂಧ ತಿಳಿಸಲಾಗಿದೆ. ಯಾವುದೇ ಕ್ಷಣದಲ್ಲಾದರೂ ಕಾಮಗಾರಿ ಸ್ಥಗಿತಗೊಳಿಸಿ ನೀರು ಬಿಡುಗಡೆ ಮಾಡಲಾಗುವುದು. ನೀರು ಸ್ಥಗಿತ ನಂತರ ಕಾಮಗಾರಿ ಆರಂಭಿಸಲು ಸೂಚಿಸಲಾಗಿದೆ ಎಂದು ಮಾಹಿತಿ ನೀಡಿದರು.
ಎಂಡಿ ನೇಮಿಸಿ: ಇದೇ ವೇಳೆ ಸಚಿವರಿಗೆ ಮನವಿ ಸಲ್ಲಿಸಿದ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಸಂಘಟನಾ ಕಾರ್ಯದರ್ಶಿ ಸುನಂದಾ ಜಯರಾಂ, ಮೈಷುಗರ್‌ಗೆ ಕಾಯಂ ವ್ಯವಸ್ಥಾಪಕ ನಿರ್ದೇಶಕರನ್ನು ನೇಮಕಗೊಳಿಸುವ ಮೂಲಕ ಕಾರ್ಖಾನೆಯನ್ನು ಉತ್ತಮವಾಗಿ ಮುನ್ನಡೆಸುವಂತೆ ಮಾಡಬೇಕು. ಈ ಹಿಂದೆ ಇದ್ದ ಎಂಡಿ ಕಳೆದ ಸಾಲಿನಲ್ಲಿ 1.50 ಲಕ್ಷ ಟನ್ ಕಬ್ಬು ಸರಬರಾಜು ಆಗದಂತೆ ನಿರ್ಲಕ್ಷ್ಯ ವಹಿಸಿದ ಪರಿಣಾಮ ಕಾರ್ಖಾನೆಯಲ್ಲಿ 4 ಲಕ್ಷ ಟನ್ ಕಬ್ಬು ಅರೆಯುವುದು ತಪ್ಪಿದಂತಾಯಿತು. ಹೀಗಾಗಿ ಅವರ ವಿರುದ್ಧ ಶಿಸ್ತು ಕ್ರಮಕೈಗೊಳ್ಳಬೇಕು.
ಕಾರ್ಖಾನೆ ಬಾಯ್ಲರ್‌ಗೆ ಪೂಜಾ ಕಾರ್ಯಕ್ರಮ ವಿಳಂಬ ಮಾಡಿದ್ದರಿಂದ ರೈತರಿಗೆ ತೊಂದರೆಯಾಗಿದೆ. ಈ ಹಿಂದೆ ನಿಗದಿಯಾಗಿದಂತೆ ಜೂ. 23ರಂದು ಬಾಯ್ಲರ್ ಪೂಜೆ ನಡೆಸಬೇಕಿತ್ತು. ಈಗ ಒಂದು ವಾರ ವಿಳಂಬವಾಗಿ ಪೂಜೆ ಮಾಡಿದ್ದರಿಂದ ರೈತರಿಗೆ ತೊಂದರೆಯಾಗಿದೆ. ಸಕಾಲಕ್ಕೆ ಕಬ್ಬು ನುರಿಸುವಿಕೆ ಪ್ರಾರಂಭಿಸುವಂತೆ ಕೋರಿದರು.
ಮೈಶುಗರ್ ಅಧ್ಯಕ್ಷರು, ರೈತ ಮುಖಂಡರು ಹಾಗೂ ರೈತರ ನಡುವೆ ಉತ್ತಮ ಬಾಂಧವ್ಯ ಇದೆ. ಇದಲ್ಲದೆ ನಾಲೆಗೆ ಕೂಡಲೇ ನೀರು ಹರಿಸಬೇಕು. ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿ ಮಾಡಬೇಕು. ಕಬ್ಬು ಸರಬರಾಜು ಮಾಡಿದ ರೈತರಿಗೆ ಸಕಾಲದಲ್ಲಿ ಹಣ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದರು.
ಶಾಸಕ ರವಿಕುಮಾರ್ ಗಣಿಗ, ಎಂಎಲ್‌ಸಿ ದಿನೇಶ್ ಗೂಳಿಗೌಡ, ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ, ಮಾಜಿ ಶಾಸಕರಾದ ಎಚ್.ಬಿ.ರಾಮು, ಕೆ.ಬಿ.ಚಂದ್ರಶೇಖರ್, ತಾಪಂ ಮಾಜಿ ಅಧ್ಯಕ್ಷ ಸಿ.ತ್ಯಾಗರಾಜು, ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಅಂಜನಾ ಶ್ರೀಕಾಂತ್, ಕಿಸಾನ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಆರ್.ಮೋಹನ್ ಕುಮಾರ್, ಪಾಂಡವಪುರ ಕಿಸಾನ್ ಅಧ್ಯಕ್ಷ ಸಿ.ಆರ್. ರಮೇಶ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ನಿರ್ದೇಶಕ ಎನ್.ಕೃಷ್ಣೇಗೌಡ, ಕೆಡಿಪಿ ನಿರ್ದೇಶಕ ಸಿ.ಎಂ.ದ್ಯಾವಪ್ಪ, ಮುಖಂಡರಾದ ಕಂಬದಹಳ್ಳಿ ಪುಟ್ಟಸ್ವಾಮಿ, ಕೊತ್ತತ್ತಿ ರಾಜು, ಸಾತನೂರು ಕೃಷ್ಣ, ಸುಂಡಹಳ್ಳಿ ಮಂಜುನಾಥ್, ಚಂದಗಾಲು ವಿಜಯ ಕುಮಾರ್ ಇದ್ದರು.