ಜಿಲ್ಲೆ

ಮೊನ್ನೆ ಶಾಸಕರ ಕಾರಿಗೆ ಮಹಿಳೆ ಬಲಿ; ಇಂದು ಸಚಿವರ ಕಾರು ಅಪಘಾತ, ಬೈಕ್ ಸವಾರನ ಕಾಲು ಮುರಿತ..

ಮೈಸೂರು: ಮೊನ್ನೆಯಷ್ಟೇ ಶಾಸಕರೊಬ್ಬರ ಕಾರಿಗೆ ಮಹಿಳೆಯೊಬ್ಬಳು ಬಲಿಯಾಗಿದ್ದು, ಇಂದು ಸಚಿವರೊಬ್ಬರ ಕಾರು ಹಾಗೂ ಬೈಕೊಂದರ ನಡುವೆ ಅಪಘಾತ ಸಂಭವಿಸಿದೆ. ಈ ಅಪಘಾತದಲ್ಲಿ ದ್ವಿಚಕ್ರವಾಹನ ಸವಾರನ ಕಾಲು ಮುರಿದಿದೆ.

ಮೈಸೂರಿನ ಬಂಬೂ ಬಜಾರ್ ಬಳಿ ಈ ಅಪಘಾತ ಸಂಭವಿಸಿದೆ. ದ್ವಿಚಕ್ರ ವಾಹನ ಸವಾರ ರವಿಕುಮಾರ್​ (45) ಗಾಯಾಳು. ಪಾನಮತ್ತನಾಗಿದ್ದ ಸವಾರನ ಬೈಕ್​ ಎದುರಿನಿಂದ ಬರುತ್ತಿದ್ದ ಸಚಿವ ಸಿ.ಸಿ. ಪಾಟೀಲ್ ಅವರ ಕಾರಿಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಕೆ.ಆರ್‌. ಕ್ಷೇತ್ರದ ಮೋದಿ ಯುಗ ಉತ್ಸವ್ ಕಾರ್ಯಕ್ರಮಕ್ಕೆ ಸಚಿವರು ಆಗಮಿಸುತ್ತಿದ್ದಾಗ ಈ ಅಪಘಾತ ಉಂಟಾಗಿದೆ.

ಈ ಸಂದರ್ಭದಲ್ಲಿ ಸಚಿವರು ಹಾಗೂ ಡ್ರೈವರ್‌ ಇಬ್ಬರನ್ನೂ ತರಾಟೆಗೆ ತೆಗೆದುಕೊಂಡ ಸ್ಥಳೀಯರು‌, ಗಾಯಾಳುವನ್ನು ಆಸ್ಪತ್ರೆಗೆ ಸೇರಿಸುವುದನ್ನು ಬಿಟ್ಟು ಕಾರಿನ ಮುಂಭಾಗದಲ್ಲಿನ ಧ್ವಜ ತೆಗೆಯಲು ಮುಂದಾದರು. ಸಚಿವರನ್ನು ಪಾರು ಮಾಡಿ ಕಳುಹಿಸಲು ಮುಂದಾದ ಪೊಲೀಸರನ್ನೂ ಸಾರ್ವಜನಿಕರು ತರಾಟೆಗೆ ತೆಗೆದುಕೊಂಡರು.

ಈ ಸಂದರ್ಭ ಪೊಲೀಸರು ಹಾಗೂ ಸಾರ್ವಜನಿಕರ ನಡುವೆ ಮಾತಿನ ಚಕಮಕಿ ಸಂಭವಿಸಿದ್ದು, ಪೊಲೀಸರು, ಸಚಿವರು ಹಾಗೂ ಸಿಬ್ಬಂದಿ ವರ್ತನೆಗೆ ಸಾರ್ವಜನಿಕರ ಗರಂ ಆದರು. ಕೊನೆಗೆ ಬೈಕ್ ಸವಾರನನ್ನ ಪೊಲೀಸರ ವಾಹನದಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಎನ್​.ಆರ್. ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ಉಂಟಾಗಿದ್ದು, ಸ್ಥಳದಲ್ಲಿ ಕೆಲಕಾಲ ಗೊಂದಲ ವಾತಾವರಣ ನಿರ್ಮಾಣವಾಗಿತ್ತು.