ಜಿಲ್ಲೆ

ಜನರ ಸಮಸ್ಯೆಗಳ ಪರಿಹಾರಕ್ಕೆ ಗಮನ ನೀಡಿ- ಸಚಿವ ಬೋಸರಾಜು ಸೂಚನೆ

ಎ. ಆರ್. ರಘುರಾಮ

ಸಿದ್ದಾಪುರ : ಜನರ ಸಮಸ್ಯೆಗಳ ಪರಿಹಾರಕ್ಕೆ ವಿಶೇಷ ಗಮನ ನೀಡಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬೋಸರಾಜು ಹೇಳಿದರು. ವಿರಾಜಪೇಟೆ ತಾಲೂಕು ಅಮ್ಮತ್ತಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಸಭಾಂಗಣದಲ್ಲಿ ಜಿಲ್ಲಾ ಮತ್ತು ತಾಲೂಕು ಮಟ್ಟದ ಸಾರ್ವಜನಿಕರ ಅಹವಾಲುಗಳಿಗೆ ಸೂಕ್ತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಹಮ್ಮಿ ಕೊಂಡಿದ್ದ ಜನತಾ ದರ್ಶನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಅರ್ಜಿಗಳಿಗೆ ಸಂಬಂಧಿಸಿದಂತೆ ಸ್ಥಳದಲ್ಲಿಯೇ ಆಯಾ ಇಲಾಖೆ ಅಧಿಕಾರಿಗಳು ಪರಿಹರಿಸಬೇಕು ಎಂದು ಅವರು ಹೇಳಿದರು. ನಿವೇಶನ ಒದಗಿಸುವಂತೆ ಸಾಕಷ್ಟು ಅರ್ಜಿಗಳು ಸಲ್ಲಿಕೆಯಾಗಿವೆ. ಅರ್ಹರಿಗೆ ಆಯಾಯ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿವೇಶನ ಒದಗಿಸಿ ವಸತಿ ಕಲ್ಪಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಸುಮಾರು 70 ಕ್ಕೂ ಹೆಚ್ಚು ಅರ್ಜಿಗಳು ಸಾರ್ವಜನಿಕರಿಂದ ಸಲ್ಲಿಕೆಯಾಗಿದ್ದು, ಇಲಾಖೆಯ ಅಧಿಕಾರಿಗಳು ಕೂಡಲೇ ಕ್ರಮ ವಹಿಸಿ ಸರ್ಕಾರಕ್ಕೆ ಒಳ್ಳೆಯ ಹೆಸರು ತರಬೇಕು. ಯಾವುದೇ ಕಾರಣಕ್ಕೂ ಸಾರ್ವಜನಿಕರನ್ನು ಕಚೇರಿಗಳಿಗೆ ಅಲೆಸಬಾರದು ಎಂದು ಸಚಿವರು ಕಟ್ಟುನಿಟ್ಟಿನ ಸೂಚನೆ ನೀಡಿದರು. ಈಗಾಗಲೇ ನನ್ನ ನೇತೃತ್ವದಲ್ಲಿ 3 ಜನಸ್ಪಂದನಾ ಸಭೆಗಳು ನಡೆದಿದೆ. ಹಾಗೆಯೇ ಶಾಸಕರ ನೇತೃತ್ವದಲ್ಲಿಯೂ ಜನಸ್ಪಂದನಾ ಸಭೆಗಳು ನಡೆದಿವೆ. ಸಾರ್ವಜನಿಕರ ಸಮಸ್ಯೆಗಳಿಗೆ ಅಧಿಕಾರಿಗಳು ಕಿವಿಗೊಡಬೇಕು. ಆತ್ಮ ಪೂರಕವಾಗಿ ಕಾರ್ಯನಿರ್ವಹಿಸಬೇಕು ಅಧಿಕಾರಿಗಳಿಗೆ ಕಿವಿಮಾತು ಹೇಳಿದರು.

ಜನರಿಗೆ ಸ್ಪಂದಿಸಿ: ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಮತ್ತು ಶಾಸಕ ಪೊನ್ನಣ್ಣ ಮಾತನಾಡಿ, ಸರ್ಕಾರ ಬಡವರು ಹಾಗೂ ಶೋಷಿತರ ಏಳಿಗೆಗೆ ಹಲವು ಯೋಜನೆ ಜಾರಿಗೊಳಿಸಿದೆ. ಅವುಗಳನ್ನು ಕಾಲಮಿತಿಯಲ್ಲಿ ಅರ್ಹರಿಗೆ ತಲುಪಿಸಬೇಕು. ಸರ್ಕಾರದ ಆಶಯವನ್ನು ಅರ್ಥಮಾಡಿಕೊಂಡು ಅಧಿಕಾರಿಗಳು ಜನರಿಗೆ ಸ್ಪಂದಿಸಬೇಕು ಎಂದು ಸಲಹೆ ಮಾಡಿದರು.

ಸಾರ್ವಜನಿಕರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಅಧಿಕಾರಿಗಳ ಕಾಳಜಿ ಮತ್ತು ಬದ್ಧತೆ ಅತಿ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಹೇಗೆ ಸ್ಪಂದಿಸುತ್ತಾರೋ ಅದರಂತೆ ಅಧಿಕಾರಿಗಳೂ ಸಾರ್ವಜನಿಕರಿಗೆ ಸ್ಪಂದಿಸಬೇಕು. ಇದರಿಂದ ಉತ್ತಮ ಆಡಳಿತ ಮತ್ತು ಅಭಿವೃದ್ಧಿ ಕಾಣಲು ಸಾಧ್ಯ ಎಂದು ಪೊನ್ನಣ್ಣ ಅಭಿಪ್ರಾಯಪಟ್ಟರು.

ತಕ್ಷಣ ಬಗೆಹರಿಸಲು ಕ್ರಮ: ಜಿಲ್ಲಾಧಿಕಾರಿ ವೆಂಕಟ್ ರಾಜಾ ಮಾತನಾಡಿ, ಸರ್ಕಾರಿ ಆಡಳಿತ ಯಂತ್ರವೇ ಜನರ ಬಳಿಗೆ ತೆರಳಿ ಸಾರ್ವಜನಿಕರಿಗೆ ಆಗಬೇಕಿರುವ ಕಾರ್ಯಗಳನ್ನು ತಕ್ಷಣ ಮಾಡಿಕೊಡಲು ಮುಂದಾಗಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಕ್ರಮ ವಹಿಸಿದೆ. ಜನಸ್ಪಂದನಾ ಸಭೆಗಳು ಸಮಸ್ಯೆ ಪರಿಹಾರಕ್ಕೆ ಪೂರಕವಾಗಿವೆ ಎಂದರು. ಕಂದಾಯ, ಗ್ರಾಮೀಣಾಭಿವೃದ್ಧಿ, ಸೆಸ್ಕ್, ಅರಣ್ಯ, ಸಮಗ್ರ ಗಿರಿಜನ ಕಲ್ಯಾಣ ಇಲಾಖೆ, ವಸತಿ ಯೋಜನೆ, ವಿವಿಧ ಸಾಮಾಜಿಕ ಭದ್ರತಾ ಯೋಜನೆ ಸೇರಿದಂತೆ 74 ಅರ್ಜಿಗಳು ಸಲ್ಲಿಕೆಯಾದವು.