ಚಿಕ್ಕಬಳ್ಳಾಪುರ: ಚಿಂತಾಮಣಿ ನಗರದಲ್ಲಿ ಅಂಬೇಡ್ಕರ್ ಪುತ್ಥಳಿ ಅನಾವರಣಕ್ಕೆ ಅಡ್ಡಿಪಡಿಸುವ ಕಾಣದ ಕೈಗಳ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವ ಡಾ ಎಂ.ಸಿ.ಸುಧಾಕರ್ ಇದ್ದಾರೆ. ಸರ್ಕಾರಿ ಶಾಲೆ ಜಾಗವನ್ನು ಅವರ ಖಾಸಗಿ ಟ್ರಸ್ಟ್ಗೆ ಪಡೆದುಕೊಳ್ಳುವ ಹುನ್ನಾರ ಇದೆ. ಇದನ್ನು ಹೇಳಲು ಯಾವುದೇ ಮುಚ್ಚು ಮರೆ ಇಲ್ಲ ಎಂದು ಸಂಸದ ಡಾ ಕೆ.ಸುಧಾಕರ್ ಆರೋಪಿಸಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದ ಆವರಣದಲ್ಲಿ ದಲಿತ ಪರ ಸಂಘಟನೆಗಳು ಕೈಗೊಂಡಿದ್ದ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಅವರು, ಹಿಂದೆ ಜೆ.ಕೆ.ಕೃಷ್ಣಾರೆಡ್ಡಿ ಶಾಸಕರಾಗಿದ್ದ ಅವಧಿಯಲ್ಲಿ ಅಂಬೇಡ್ಕರ್ ಪುತ್ಥಳಿ ಅನಾವರಣಕ್ಕೆ ಅಧಿಕಾರಿಗಳು ಅನುಮತಿ ನೀಡಿದ್ದರು. ಆದರೆ, ಈಗ ನಿರಾಕರಿಸಲಾಗುತ್ತಿದೆ. ಇದಕ್ಕೆ ದಲಿತ ಪರ ಸಂಘಟನೆಗಳ ನ್ಯಾಯಯುತ ಹೋರಾಟ ನಡೆಸುತ್ತಿವೆ ಎಂದು ತಿಳಿಸಿದ್ದಾರೆ.
ವೈಯಕ್ತಿಕ ಖಾಸಗಿ ಟ್ರಸ್ಟ್ ಅನುಕೂಲಕ್ಕಾಗಿ ಸಚಿವರ ತೋರುತ್ತಿರುವ ಧೋರಣೆಯ ಬಗ್ಗೆ ಜನರಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ಇದರ ಪರಿಣಾಮವನ್ನು ಅವರು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.