ತುಮಕೂರು: ಸಿಎಂ ಯಡಿಯೂರಪ್ಪ ಅವರ ಬಳಿ ಯಾವ ಖಾತೆಯನ್ನು ಕೇಳಿಲ್ಲ. ನನಗೆ ಯಾವ ಖಾತೆ ನಿಭಾಯಿಸುವ ಶಕ್ತಿ ಇದೆ ಎಂಬುದನ್ನು ಮನಗಂಡು ಹಂಚಿಕೆ ಮಾಡಲಿದ್ದಾರೆ ಎಂದು ನೂತನ ಸಚಿವ ಬಿ.ಸಿ.ಪಾಟೀಲ್ ಹೇಳಿದರು.
ಸಿದ್ಧಗಂಗಾ ಮಠಕ್ಕೆ ಶನಿವಾರ ಭೇಟಿ ನೀಡಿ ಶಿವಕುಮಾರ ಶ್ರೀಗಳ ಗದ್ದುಗೆ ದರ್ಶನ ಪಡೆದ ಬಳಿಕ ಮಠಾಧ್ಯಕ್ಷ ಸಿದ್ದಲಿಂಗ ಶ್ರೀಗಳ ಆಶೀರ್ವಾದ ಪಡೆದು ಸುದ್ದಿಗಾರರೊಂದಿಗೆ ಮಾತನಾಡಿದರು.
ಯಾವ ಖಾತೆ ಕೊಟ್ಟರು ನಿಭಾಯಿಸುತ್ತೇನೆ. ಪೊಲೀಸ್ ಇಲಾಖೆಯಲ್ಲಿ ಇದ್ದಿದ್ದರಿಂದ ಗೃಹ ಖಾತೆ ಕೊಡ್ತಾರೆ. ಸುಧಾಕರ್ ಡಾಕ್ಟರ್ ಆಗಿರುವುದರಿಂದ ವೈದ್ಯಕೀಯ ಶಿಕ್ಷಣ ಖಾತೆ ಸಿಗುತ್ತೆ. ಕಾನೂನು ಪದವಿ ಪಡೆದಿದ್ದರೆ ಕಾನೂನು ಮತ್ತು ಸಂಸದೀಯ ಮಂಡಳಿ ಸಚಿವರಾಗ್ತಾರೆ ಅಂತ ನೀವೇ (ಮಾಧ್ಯಮದವರೇ) ಹೇಳ್ತೀರಾ. ನಾವ್ಯಾರೂ ಇಂತಹದ್ದೇ ಖಾತೆಗೆ ಬೇಡಿಕೆ ಇಟ್ಟಿಲ್ಲ ಎಂದು ಪ್ರತಿಕ್ರಿಯಿಸಿದರು.
ಸುಭದ್ರ ಸರ್ಕಾರ: ಸಂದಿಗ್ಧ ಪರಿಸ್ಥಿತಿಯಲ್ಲಿ ಬಿಜೆಪಿ ಸರ್ಕಾರ ರಚನೆ ಆಗಿದ್ದು, 117 ಶಾಸಕರ ಮೂಲಕ ಸುಭದ್ರವಾಗಿದೆ. ಯಡಿಯೂರಪ್ಪ ನೇತೃತ್ವದಲ್ಲಿ ರಾಜ್ಯವು ಸಮಗ್ರ ಅಭಿವೃದ್ಧಿ ಪಥದಲ್ಲಿ ಸಾಗಿದ್ದು, ಇನ್ನೂ ಮೂರೂಕಾಲು ವರ್ಷ ಅವರ ಜತೆ ನಾವೆಲ್ಲಾ ಕೈ ಜೋಡಿಸುತ್ತೇವೆ ಎಂದು ಬಿ.ಸಿ.ಪಾಟೀಲ್ ಹೇಳಿದರು.
ನಾವೆಲ್ಲ ಸಮಾನ ಮನಸ್ಕರು: ಬಿಜೆಪಿ ಸೇರುವ ಸಂದರ್ಭದಲ್ಲಿ ನಾವು ನಮ್ಮಲ್ಲಿ ಯಾರನ್ನೂ ನಾಯಕರೆಂದು ಬಿಂಬಿಸಿಕೊಂಡಿರಲಿಲ್ಲ. ಸಮಾನ ಮನಸ್ಕರಾಗಿ ಹೋಗಿದ್ದೇವೆ. ವೈಯಕ್ತಿಕವಾಗಿ ನಾವೆಲ್ಲರೂ ಉತ್ತಮ ಸ್ನೇಹಿತರು. ನಾಲ್ಕೈದು ಜಿಲ್ಲೆಗಳಿಗೆ ಸೀಮಿತವಾದಂತೆ ಸರ್ಕಾರ ನಡೆಸಿದಂತಹ ದುರಾಡಳಿತ ವಿರೋಧಿಸಿ ನಾವೆಲ್ಲರೂ ಒಟ್ಟಾಗಿದ್ದೆವು. ಪ್ರತಿದಿನ ಸಮ್ಮಿಶ್ರ ಸರ್ಕಾರ ಅಲುಗಾಡುತ್ತಿತ್ತು. ಇಂತಹ ಸರ್ಕಾರ ಇದ್ದರೆ ಅಭಿವೃದ್ಧಿಯಾಗುವುದಿಲ್ಲ. ಅಲ್ಲದೆ ತಮಗೆಲ್ಲರಿಗೂ ವೈಯಕ್ತಿಕವಾಗಿ ಅನ್ಯಾಯವಾಗಿದೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ರಾಜೀನಾಮೆ ಕೊಟ್ಟೆವು ಎಂದು ಸಮರ್ಥಿಸಿಕೊಂಡರು.
ಹಳ್ಳಿಹಕ್ಕಿ, ಕುಮಟಳ್ಳಿ ಒಂಟಿ ಅಲ್ಲ!: ಎಚ್.ವಿಶ್ವನಾಥ್, ಮಹೇಶ್ ಕುಮಟಳ್ಳಿ ಯಾರೂ ಒಂಟಿ ಅಲ್ಲ. ಚುನಾವಣೆಯಲ್ಲಿ ಸೋತಿರುವ ವಿಶ್ವನಾಥ್, ಎಂಟಿಬಿ ನಾಗರಾಜ್ ಹಾಗೂ ಶಾಸಕರಾಗಿರುವ ಮಹೇಶ್ ಕುಮಟಳ್ಳಿ ಅವರಿಗೂ ಸಿಎಂ ಸೂಕ್ತ ಸ್ಥಾನಮಾನ ನೀಡಲಿದ್ದಾರೆ
ಎಂದು ಬಿ.ಸಿ.ಪಾಟೀಲ್ ಹೇಳಿದರು.
9 ಲಕ್ಕಿ ನಂಬರ್!: ಸರ್ಕಾರದಿಂದ ಪಡೆದಿರುವ ಕಾರಿನ ನಂಬರ್ ಬಗ್ಗೆ ಮಾತನಾಡಿ. ಮನಸ್ಸು ಚೆನ್ನಾಗಿದ್ದರೆ ಎಲ್ಲ ಚೆನ್ನಾಗಿರುತ್ತೆ. ಕಾರಿಗೆ 9ನೇ ನಂಬರಿತ್ತು. ಜತೆಗೆ 1.15 ಲಕ್ಷ ಕಿ.ಮೀ., ಓಡಿತ್ತಾದರೂ ನೋಡಲಿಕ್ಕೆ ಹೊಸದಂತೆ ಕಾಣುತ್ತಿತ್ತು. ಅದಕ್ಕೆ ತೆಗೆದುಕೊಂಡೆ ಎಂದರು. ಸರ್ಕಾರಿ ಈ ಹಿಂದೆ 555 ಮತಗಳಿಂದ ಗೆದ್ದಿದ್ದಾಗ ಅದೇ ನಂಬರ್ ಅನ್ನು ನನ್ನ ಕಾರಿಗೆ ಪಡೆದುಕೊಂಡಿದ್ದೆ. ಈಗ 9 ನಂಬರ್ ಸಿಕ್ಕಿದೆ. ಇನ್ನು ಅಧಿಕಾರ ನೀಡುವ ವಿಚಾರದಲ್ಲಿ ಸತಾಯಿಸಿಲ್ಲ. ಪಕ್ಷ, ಸರ್ಕಾರವನ್ನು ನಡೆಸುವಾಗ ಹಲವು ತೊಂದರೆ ಎದುರಾಗುವುದು ಸಹಜ. ಹೊರಗಿನಿಂದ ಬಂದವರು, ಒಳಗಿನವರು ಎಲ್ಲರನ್ನು ಸಂಭಾಳಿಸಿಕೊಂಡು ಹೋಗಬೇಕಾಗಿತ್ತು. ಹಾಗಾಗಿ ಅಧಿಕಾರ ಹಂಚಿಕೆ ವಿಳಂಬವಾಯಿತು. ಯಾರು ಸತಾಯಿಸಿಲ್ಲ ಎಂದು ಬಿ.ಸಿ.ಪಾಟೀಲ್ ಸಮರ್ಥಿಸಿಕೊಂಡರು.