ಜಿಲ್ಲೆ

ಕುಂದೂರಿನ ಅಶ್ವತ್ಥ ಕಟ್ಟೆಯ ಮೇಲೆ ಅಶೋಕಾಯಣ

ರಮೇಶ್​ ಕುಮಾರ್​​ ಬಿ ಎಡಮೋಳೆ

ದಾವಣಗೆರೆ/ ಹೊನ್ನಾಳಿ: ಜನರ ಮನೆ ಬಾಗಿಲಿಗೆ ಅಧಿಕಾರ ಕೊಂಡೊಯ್ಯುವ ಆಶಯ ಹೊತ್ತು ಗ್ರಾಮವಾಸ್ತವ್ಯ ಆರಂಭಿಸಿರುವ ಕಂದಾಯ ಸಚಿವ ಆರ್.ಅಶೋಕ್, ಭಾನುವಾರ ಹೊನ್ನಾಳಿ ತಾಲೂಕು ಕುಂದೂರಿನ ಅಶ್ವತ್ಥ ಕಟ್ಟೆಯಲ್ಲಿ ಕುಳಿತು ಊರ ಜನರ ಕಷ್ಟ, ಸುಖಕ್ಕೆ ಕಿವಿಯಾದರು.

ಬೆಳ್ಳಂಬೆಳಗ್ಗೆ ಎದ್ದು ಗ್ರಾಮ ಪ್ರದಕ್ಷಿಣೆ ಹಾಕಿ ಹೋಟೆಲಲ್ಲಿ ಹಾಫ್ ಚಹಾ ಹೀರುತ್ತ ವ್ಯಾಪಾರ ಹೇಗಿದೆ ಎಂದು ಮಾತಿಗೆಳೆದರು. ಭತ್ತದ ಗದ್ದೆ ಬಳಿ ತೆರಳಿ ಕಳೆ ತೆಗೆದಿದ್ದೀರಾ ಎಂದು ರೈತರನ್ನು ಪ್ರಶ್ನಿಸಿದರು. ಆಂಜನೇಯ ದೇಗುಲದಲ್ಲಿ ಶನಿವಾರ ಮಧ್ಯರಾತ್ರಿ 12-30ರವರೆಗೆ ಭಜನೆ ಮಾಡಿ ನಿದ್ರೆಗೆ ಜಾರಿದ್ದ ಸಚಿವರು, ಮುಂಜಾನೆ 6-30ರ ಹೊತ್ತಿಗೆ ಗ್ರಾಮ ಸಂಚಾರ ಹೊರಟು ನಿಂತಿದ್ದರು. ಶಾಸಕ ರೇಣುಕಾಚಾರ್ಯ ಜತೆ ಎರಡು ಕಿಲೋಮೀಟರ್ ಸುತ್ತಾಡಿ ಬಂದರು. ಹೊಲಕ್ಕೆ ಹೊರಟಿದ್ದ ರೈತರನ್ನು, ಡೇರಿಗೆ ಹಾಲು ಹಾಕಲು ಬಂದವರನ್ನು, ಕೃಷಿ ಕೂಲಿಕಾರರನ್ನು, ಊರಿನ ಯಜಮಾನರನ್ನು ಕರೆದು ನಿಮ್ಮೂರಿನ ಸಮಸ್ಯೆ ಹೇಳಿ ಎಂದರು.

ಈ ಹಿಂದೆ ನಿಮ್ಮೂರಿಗೆ ಸಿಎಂ ಅಥವಾ ಕಂದಾಯ ಸಚಿವರು ಬಂದಿದ್ರಾ? ನಿಮ್ಮ ಸಮಸ್ಯೆ ಅರ್ಥ ಮಾಡ್ಕೊಂಡು ಒಳ್ಳೇದು ಮಾಡಲಿಕ್ಕೆ ಬಂದಿದ್ದೇನೆ. ಮನೆ ಬಾಗಿಲಿಗೆ ಸೌಲಭ್ಯ ತಲುಪಿಸುತ್ತೇವೆ ಎಂದು ವಾಗ್ದಾನ ಮಾಡಿದರು.

ದಲಿತರ ಮನೆಯಲ್ಲಿ ಬುತ್ತಿ ಕಟ್ಟಿಸಿಕೊಂಡ್ರು

ದಲಿತ ಕೇರಿಯ ಶಾರದಮ್ಮ, ಶಾಂತರಾಜ್ ದಂಪತಿ ಮನೆಯಲ್ಲಿ ಬೆಳಗ್ಗೆ ಇಡ್ಲಿ-ಸಾಂಬಾರ್, ರಾಗಿ ತಾಲಿಪಟ್ಟು, ಮೆಂತ್ಯ ಪಲಾವನ್ನು ಸಚಿವರು, ಶಾಸಕರು ಸೇವಿಸಿದರು. ಮಧ್ಯಾಹ್ನಕ್ಕೆ ಅವರ ಮನೆಯಿಂದಲೇ ಬುತ್ತಿ ಕಟ್ಟಿಸಿಕೊಂಡು ತೆರಳಿದ್ದು ವಿಶೇಷವಾಗಿತ್ತು. ಶನಿವಾರ ರಾತ್ರಿ ಕಸ್ತೂರಬಾ ವಿದ್ಯಾರ್ಥಿನಿಲಯದಲ್ಲಿ ರಾಗಿಮುದ್ದೆ, ಬಸ್ಸಾರು, ಜೋಳದ ರೊಟ್ಟಿ, ಮುಳುಗಾಯಿ ಎಣಗಾಯಿ ಪಲ್ಯ, ಗೋಧಿ ಹುಗ್ಗಿ ಊಟ ಸೇವಿಸಿದ್ದರು.

ಯಡಿಯೂರಪ್ಪ ನೆನೆದ ಗ್ರಾಮಸ್ಥರು

ಗ್ರಾಮದ ಹತ್ತಾರು ಮನೆಗಳಿಗೆ ತೆರಳಿ ಸರ್ಕಾರದ ಸೌಲಭ್ಯ ಸಿಗುತ್ತಿವೆಯೇ? ಆಡಳಿತ ಜನಪರ ಆಗಿದೆಯೇ? ಈಗಿನ ಮುಖ್ಯಮಂತ್ರಿ ಯಾರು ಎಂದು ಆರ್.ಅಶೋಕ್ ಪ್ರಶ್ನಿಸಿದರು. ಪ್ರಧಾನಿ ಮೋದಿ, ಹಿಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಹಾಲಿ ಸಿಎಂ ಬೊಮ್ಮಾಯಿ ಜನಪರ ಯೋಜನೆಗಳನ್ನು ಗಮನಕ್ಕೆ ತಂದರು. ಗ್ರಾಮವಾಸ್ತವ್ಯದ ಆಶಯ ಹಾಗೂ ಉದ್ದೇಶಗಳನ್ನು ವಿವರಿಸಿದರು. ಈ ವೇಳೆ ಕೆಲವರು ಮೋದಿ, ಬಿಎಸ್​ವೈ ಕಾರ್ಯವೈಖರಿ ಮತ್ತು ಅವರ ಯೋಜನೆಗಳನ್ನು ನೆನಪಿಸಿಕೊಂಡರು.

ಬಾಲಕಿಯರಿಬ್ಬರ

ಶಿಕ್ಷಣ ವೆಚ್ಚಕ್ಕೆ ವಾಗ್ದಾನ

ಅನಾರೋಗ್ಯದಿಂದ ಪಾಲಕರನ್ನು ಕಳೆದುಕೊಂಡಿರುವ, ಹಿರೇಕೆರೂರು ತಾಲೂಕು ರಟ್ಟಿಹಳ್ಳಿಯಲ್ಲಿ ಸಂಬಂಧಿಕರ ಮನೆಯಲ್ಲಿದ್ದು ಕ್ರಮವಾಗಿ 6 ಮತ್ತು 8ನೇ ತರಗತಿ ಓದುತ್ತಿರುವ ಕುಂದೂರಿನ ಮಲ್ಲಿಕಾ ಮತ್ತು ನಯನ ಅವರ ಎಸ್ಸೆಸ್ಸೆಲ್ಸಿವರೆಗಿನ ಶಿಕ್ಷಣ ವೆಚ್ಚ ಭರಿಸುವುದಾಗಿ ಆರ್.ಅಶೋಕ್ ಮಾತು ನೀಡಿದರು.