ಜಿಲ್ಲೆ

ಮುನ್ನಲೆಗೆ ಬಂದ ಸಚಿವ ಸ್ಥಾನದ ಚರ್ಚೆ

ಸುನಿಲ್ ಪೊನ್ನೇಟಿ

ಮಡಿಕೇರಿ:

ರಾಜ್ಯ ಸಚಿವ ಸಂಪುಟ ಪುನರ್‌ರಚನೆ ವಿಷಯ ರಾಜಕೀಯದಲ್ಲಿ ಸದ್ದು ಮಾಡುತ್ತಿದ್ದಂತೆಯೇ ಕೊಡಗಿನಲ್ಲೂ ನಿರೀಕ್ಷೆಗಳು ಗರಿಗೆದರಿದೆ. ಜಿಲ್ಲೆಯನ್ನು ಕಾಡುತ್ತಿರುವ ಮಂತ್ರಿ ಸ್ಥಾನದ ಕೊರತೆ ಈ ಬಾರಿಯಾದರೂ ತುಂಬಲಿದೆ ಎನ್ನುವ ಬಗ್ಗೆ ಚರ್ಚೆಗಳೂ ನಡೆಯುತ್ತಿದೆ. ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಅವರೇ ಸ್ವತಃ ಸಚಿವ ಸ್ಥಾನ ಕೇಳುವುದಾಗಿ ಹೇಳಿಕೆಯನ್ನೂ ಕೊಟ್ಟಿದ್ದಾರೆ.

ಪ್ರತಿ ಸಲವೂ ಸಚಿವ ಸಂಪುಟ ರಚನೆ, ಪುನರ್‌ರಚನೆ ಅಥವಾ ವಿಸ್ತರಣೆ ಸಂದರ್ಭ ಈ ಬಾರಿಯಾದರೂ ನಮ್ಮ ಜಿಲ್ಲೆಗೆ ಒಂದು ಸಚಿವ ಸ್ಥಾನ ಸಿಗಲಿ ಎನ್ನುವ ಬೇಡಿಕೆ ರಾಜಕೀಯರಹಿತವಾಗಿ ಕೊಡಗಿನಿಂದ ಕೇಳಿಬರುವುದು ಸಾಮಾನ್ಯ. ಭೌಗೋಳಿಕವಾಗಿ ಪುಟ್ಟ ಜಿಲ್ಲೆಯಾಗಿರುವ ಕೊಡಗನ್ನು ಕಳೆದ ಕೆಲವು ದಶಕಗಳಿಂದ ರಾಜಕೀಯವಾಗಿ ನಿರ್ಲಕ್ಷಿಸಿಕೊಂಡು ಬರಲಾಗುತ್ತಿದೆ ಎನ್ನುವ ಆರೋಪವೇ ಇದಕ್ಕೆ ಕಾರಣ. ಬಿಜೆಪಿಯಿಂದ ಶಾಸಕರಾಗಿದ್ದ ಎಂ.ಪಿ. ಅಪ್ಪಚ್ಚುರಂಜನ್ 2012ರಲ್ಲಿ ಅಲ್ಪಾವಧಿಗೆ ಕ್ರೀಡಾ ಮತ್ತು ಯುವಜನ ಸೇವೆ ಸಚಿವರಾದ ನಂತರ ಇಲ್ಲಿಯ ತನಕ ಕೊಡಗಿನಿಂದ ಗೆದ್ದವರಿಗೆ ಸಚಿವರಾಗುವ ಯೋಗ ಕೂಡಿ ಬಂದಿಲ್ಲ.

ಇದಕ್ಕೂ ಮೊದಲು 1999ರಲ್ಲಿ ಕಾಂಗ್ರೆಸ್‌ನಿAದ ಎಸ್.ಎಂ. ಕÊಷ್ಣ ಮುಖ್ಯಮಂತ್ರಿ ಆಗಿದ್ದ ವೇಳೆ ಜಿಲ್ಲೆಗೆ ಲಾಟರಿ ಹೊಡೆದಂತಾಗಿತ್ತು. ಅಬಕಾರಿ ಖಾತೆ ಜತೆ ಜಿಲ್ಲಾ ಉಸ್ತುವಾರಿ ಸಚಿವರಾಗಿ ಎಂ.ಎA. ನಾಣಯ್ಯ ಕಾರ್ಯರ್ವಹಿಸಿದ್ದರೆ, ಸುಮಾವಸಂತ್ ಮುಜರಾಯಿ ಹಾಗೂ ಟಿ. ಜಾನ್ ನಾಗರಿಕ ವಿಮಾನಯಾನ ಖಾತೆ ಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು.

ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೊಡಗಿನಿಂದ ಇಬ್ಬರು ಬಿಜೆಪಿ ಶಾಸಕರು ಪ್ರತಿನಿಧಿಸುತ್ತಿದ್ದರು. 5 ಬಾರಿ ಗೆದ್ದಿದ್ದ ಎಂ.ಪಿ. ಅಪ್ಪಚ್ಚು ರಂಜನ್ ಮತ್ತು 4 ಸಲ ಗೆದ್ದಿದ್ದ ಕೆ.ಜಿ. ಬೋಪಯ್ಯ ಶಾಸಕರಾಗಿ ಸುದೀರ್ಘ ಕಾಲದ ಅನುಭವ ಪಡೆದುಕೊಂಡಿದ್ದಲ್ಲದೆ ರಾಜಕೀಯವಾಗಿಯೂ ಬಲಾಢ್ಯರಾಗಿದ್ದರು. ಹಾಗಾಗಿ ಇವರಲ್ಲಿ ಒಬ್ಬರು ಸಚಿವರು ಆಗಬಹುದು ಎನ್ನುವ ನಿರೀಕ್ಷೆ ಬಿಜೆಪಿ ಸರ್ಕಾರದ ಕಾಲದಲ್ಲಿ ಈಡೇರಲೇ ಇಲ್ಲ. ಇದೀಗ ಬದಲಾದ ಕಾಲಘಟ್ಟದಲ್ಲಿ ಜಿಲ್ಲೆಯಲ್ಲಿ ಕಾಂಗ್ರೆಸ್‌ನ ಇಬ್ಬರು ಶಾಸಕರು ಇದ್ದಾರೆ. ಹಾಗಾಗಿ ನವೆಂಬರ್‌ನಲ್ಲಿ ನಡೆಯುತ್ತದೆ ಎನ್ನಲಾಗುತ್ತಿರುವ ಸಚಿವ ಸಂಪುಟ ಪುರ್‌ರಚನೆ ವೇಳೆ ಕೊಡಗಿಗೆ ಸಚಿವ ಸ್ಥಾನ ಸಿಗಬಹುದು ಎನ್ನುವ ಬಗ್ಗೆ ಮತ್ತೊಮ್ಮೆ ನಿರೀಕ್ಷೆಗಳು ಗರಿಗೆದರಿದೆ.

ಕೊಡಗಿಗೆ ಮಂತ್ರಿ ಸ್ಥಾನ ಸಿಗಬೇಕು ಎನ್ನುವ ಬಗ್ಗೆ ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಸಹಮತ ವ್ಯಕ್ತಪಡಿಸಿದ್ದಾರೆ. ಕೊಡಗಿಗೆ ಹಲವು ವರ್ಷಗಳಿಂದ ಸಚಿವ ಸಂಪುಟದಲ್ಲಿ ಸ್ಥಾನ ದೊರೆತಿಲ್ಲ. ಅಪ್ಪಚ್ಚು ರಂಜನ್ ಅಲ್ಪಾವಧಿಗೆ ಸಚಿವರಾಗಿದ್ದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಈ ನಿರ್ಲಕ್ಷö್ಯ ಇರಬಾರದು. ಇದನ್ನು ಮುಂದಿಟ್ಟುಕೊAಡು ಸಚಿವ ಸ್ಥಾನ ಕೇಳಲಾಗುವುದು ಎನ್ನುವ ಮೂಲಕ ಜಿಲ್ಲೆಗೆ ನ್ಯಾಯಯುತವಾಗಿ ಬರಬೇಕಾಗಿರುವ ಹುದ್ದೆಗಾಗಿ ಹಕ್ಕು ಮಂಡನೆಗೆ ಮುಂದಾಗಿದ್ದಾರೆ. ಸಂಪುಟ ಪುನರ್‌ರಚನೆ ಪ್ರಕ್ರಿಯೆ ಶುರುವಾಗುತ್ತಿದ್ದಂತೆಯೇ ಸಿಎಂ ಗಮನಕ್ಕೆ ವಿಷಯ ತರುವುದಾಗಿಯೂ ಹೇಳಿದ್ದಾರೆ.

ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಸಚಿವ ಸ್ಥಾನದ ರೇಸ್‌ನಲ್ಲಿ ಇದ್ದಂತಿಲ್ಲ. ಈ ಹಿಂದೆಯೇ ಅವರು ಈ ವಿಷಯದಲ್ಲಿ ಸ್ಪಷ್ಟನೆ ನೀಡಿದ್ದಾರೆ. ರಾಜಕೀಯದಲ್ಲಿ ನಾನಿನ್ನೂ ಚಿಕ್ಕವನು. ಆಡಳಿತದಲ್ಲಿ ಇನ್ನಷ್ಟು ಅನುಭವ ಪಡೆಯುವ ನಿಟ್ಟಿನಲ್ಲಿ ಕಲಿಯುತ್ತಿದ್ದೇನೆ ಎನ್ನುವ ಹೇಳಿಕೆ ನೀಡಿದ್ದರು. ಆದರೆ ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ತಾವು ಸಚಿವ ಸ್ಥಾನದ ಆಕಾಂಕ್ಷಿ ಎಂದು ನೇರವಾಗಿ ಹೇಳಿರದಿದ್ದರೂ ಸಚಿವ ಸಂಪುಟದಲ್ಲಿ ಕೊಡಗಿಗೆ ಪ್ರಾತಿನಿಧ್ಯ ಬೇಕು ಎನ್ನುವುದನ್ನು ಮೊದಲಿನಿಂದಲೂ ಪ್ರತಿಪಾದಿಸಿಕೊಂಡು ಬಂದಿದ್ದಾರೆ. ಈಗಲೂ ಅದನ್ನೇ ಹೇಳುತ್ತಿದ್ದಾರೆ.

ಕೊಡಗಿಗೆ ಒಂದು ಸಚಿವ ಸ್ಥಾನ ಕೊಡುವುದು ಮಾತ್ರವಲ್ಲ ಜಿಲ್ಲೆಯವರನ್ನೇ ಉಸ್ತುವಾರಿ ಸಚಿವರನ್ನಾಗಿ ಮಾಡಬೇಕು ಎನ್ನುವ ಒತ್ತಾಯವೂ ಕೇಳಿಬರುತ್ತಿದೆ. 2012ರಿಂದ ಈಚೆಗೆ ಹೊರ ಜಿಲ್ಲೆಯಲ್ಲಿ ಆಯ್ಕೆ ಆದ ಜನಪ್ರತಿನಿಧಿಗಳೇ ಕೊಡಗಿನ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಭೌಗೋಳಿಕವಾಗಿ ಮತ್ತು ಸಾಂಸ್ಕೃತಿಕವಾಗಿ ವಿಭಿನ್ನವಾಗಿರುವ ಕೊಡಗಿಗೆ ಬಯಲು ಸೀಮೆ ಕೋಲಾರದವರು, ಕರಾವಳಿಯ ದಕ್ಷಿಣಕನ್ನಡ, ಉಡುಪಿಯವರು, ಉತ್ತರ ಕರ್ನಾಟಕ ಭಾಗದವರನ್ನು ಉಸ್ತುವಾರಿ ಮಾಡಿದರೆ ಅವರು ಇಲ್ಲಿಯ ಸ್ಥಳೀಯ ವಿಷಯಗಳನ್ನು ಅರ್ಥ ಮಾಡಿಕೊಂಡು ಹೇಗೆ ಸ್ಪಂದಿಸುತ್ತಾರೆ ಎನ್ನುವುದು ಸ್ಥಳೀಯರ ಪ್ರಶ್ನೆ.

1999ರಲ್ಲಿ ಎಸ್.ಎಂ. ಕÊಷ್ಣ ಮುಖ್ಯಮಂತ್ರಿ ಆಗಿದ್ದ ವೇಳೆ ಅಬಕಾರಿ ಖಾತೆ ಮಂತ್ರಿಯಾಗಿದ್ದ ಎಂ.ಎA. ನಾಣಯ್ಯ ಕೊಡಗಿನ ಉಸ್ತುವಾರಿ ಜವಾಬ್ದಾರಿ ಪೂರ್ಣಾವಧಿಗೆ ನಿಭಾಯಿಸಿದ್ದರು. ಜಿಲ್ಲೆಯಿಂದ ಆಯ್ಕೆಯಾದ ಜನಪ್ರತಿನಿಧಿಯೊಬ್ಬರು ಉಸ್ತುವಾರಿ ಸಚಿವರಾಗಿ ಪೂರ್ಣಾವಧಿಗೆ ಕೆಲಸ ಮಾಡಿದ್ದು ಇದೇ ಕೊನೆ. ನಂತರ 2012ರಲ್ಲಿ ಯುವಜನ ಸೇವೆ ಮತ್ತು ಕ್ರೀಡಾಮಂತ್ರಿ ಆಗಿದ್ದ ಎಂ.ಪಿ. ಅಪ್ಪಚ್ಚು ರಂಜನ್ ಜಿಲ್ಲಾ ಉಸ್ತುವಾರಿ ಸಚಿವರಾದರೂ ಅವರಿಗೆ ಸಿಕ್ಕ ಅವಕಾಶ ತುಂಬಾ ಕಡಿಮೆ. ಕೊಡಗಿನವರಿಗೇ ಜಿಲ್ಲೆಯ ಉಸ್ತುವಾರಿ ಕೊಡುವುದರಿಂದ ಅಭಿವÊದ್ಧಿಗೆ ಕೆಲಸಗಳಿಗೆ ವೇಗ ಸಿಗುತ್ತದೆ. ಈ ಮೂಲಕ ಮುಂದಿನ ಚುನಾವಣೆಗೆ ಅನುಕೂಲಕರ ವಾತಾವರಣ ಸÊಷ್ಟಿ ಮಾಡಿಕೊಳ್ಳಬಹುದು ಎನ್ನುವ ಲೆಕ್ಕಾಚಾರ ಕಾಂಗ್ರೆಸ್ ಒಳಗೆ ನಡೆದಿದೆ.

ಕೊಡಗು ಕಾಂಗ್ರೆಸ್ ವಲಯದಲ್ಲಿ ಎ.ಎಸ್. ಪೊನ್ನಣ್ಣ ಸಚಿವರಾಗಬೇಕು ಎನ್ನುವ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ. ಪೊನ್ನಣ್ಣ ಅವರಿಗೆ ಸಚಿವ ಸ್ಥಾನ ಕೊಡುವ ಮೂಲಕ ಜನಸಂಖ್ಯೆಯಲ್ಲಿ ಚಿಕ್ಕದಾಗಿರುವ ಸಮುದಾಯವೊಂದಕ್ಕೆ ಪ್ರಾತಿನಿಧ್ಯ ಕೊಟ್ಟಂತೆ ಆಗುತ್ತದೆ. ಅಭಿವೃದ್ಧಿ ಪರ ಚಿಂತನೆ ಜತೆಗೆ ರಾಜ್ಯ ಮತ್ತು ರಾಷ್ಟçಮಟ್ಟದಲ್ಲಿ ಉತ್ತಮ ಸಂಪರ್ಕ ಹೊಂದಿರುವ ಪೊನ್ನಣ್ಣ ಸಂಪುಟ ದರ್ಜೆ ಸಚಿವರಾಗುವುದರ ಜತೆಗೆ ಕೊಡಗು ಉಸ್ತುವಾರಿ ಸಚಿವರೂ ಆದರೆ ಜಿಲ್ಲೆಯ ಪಾಲಿಗೆ ಉತ್ತಮ ಬೆಳವಣಿಗೆ ಆಗಲಿದೆ ಎನ್ನುವ ಮಾತುಗಳು ಪಕ್ಷದೊಳಗೆ ಕೇಳಿಬರುತ್ತಿದೆ.

ನವೆಂಬರ್‌ನಲ್ಲಿ ಸಚಿವ ಸಂಪುಟ ಪುನರ್‌ರಚನೆ ಆಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟವಾಗಿ ಹೇಳಿದ್ದಾರೆ. ಈ ಪ್ರಕ್ರಿಯೆ ಆರಂಭವಾದ ನಂತರ ಕೊಡಗಿಗೆ ಸಚಿವ ಸ್ಥಾನಕ್ಕೆ ಬೇಡಿಕೆ ಸಲ್ಲಿಸಲಾಗುವುದು. ರಾಜಕೀಯದಲ್ಲಿ ಹೊಸ ಮುಖಗಳು ಬರಬೇಕು. ಆಡಳಿತದ ಅನುಭವ ಪಡೆಯಬೇಕು. ಕೊಡಗಿಗೆ ಹಲವು ವರ್ಷಗಳಿಂದ ಸಚಿವ ಸಂಪುಟದಲ್ಲಿ ಸ್ಥಾನ ದೊರೆತಿಲ್ಲ. ಅಪ್ಪಚ್ಚು ರಂಜನ್ ಅಲ್ಪಾವಧಿಗೆ ಸಚಿವರಾಗಿದ್ದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಈ ನಿರ್ಲಕ್ಷö್ಯ ಇರಬಾರದು. ಇದನ್ನು ಮುಂದಿಟ್ಟುಕೊAಡು ಸಚಿವ ಸ್ಥಾನ ಕೇಳಲಾಗುವುದು.

ಎ.ಎಸ್. ಪೊನ್ನಣ್ಣ, ವಿರಾಜಪೇಟೆ ಶಾಸಕ (10ಎಂಡಿಕೆ01)

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಾನೂನು ಸಲಹೆಗಾರ ಆಗಿರುವ ಪೊನ್ನಣ್ಣ ಸಂಪುಟ ದರ್ಜೆ ಸ್ಥಾನ ಮಾನ ಹೊಂದಿದ್ದಾರೆ. ಸಿಎಂಗೆ ನಿಕಟವಾಗಿ ಇರುವ ಈ ಹುದ್ದೆಯಲ್ಲಿ ಇದ್ದುಕೊಂಡು ಎಲ್ಲಾ ಇಲಾಖೆಗಳಲ್ಲೂ ವ್ಯವಹರಿಸುವ ಸ್ವಾತಂತ್ರö್ಯ ಪೊನ್ನಣ್ಣ ಅವರಿಗೆ ಇದೆ. ಪೊನ್ನಣ್ಣ ಅವರಿಗೆ ಮಂತ್ರಿ ಸ್ಥಾನ ಸಿಕ್ಕಿದರೆ ಅವರು ಒಂದು ಇಲಾಖೆಗೆ ಸೀಮಿತ ಆಗಿಬಿಡುತ್ತಾರೆ. ಕೊಡಗಿಗೆ ಮಂತ್ರಿ ಸ್ಥಾನ ಬೇಕು. ಒಂದು ವೇಳೆ ಪೊನ್ನಣ್ಣ ತಮಗಾಗಿ ಇದಕ್ಕೆ ಬೇಡಿಕೆ ಇಟ್ಟರೆ ರಾಜಕೀಯವಾಗಿ ಅಷ್ಟು ಉತ್ತಮ ನಡೆ ಅಗಲಿಕ್ಕಿಲ್ಲ.

ಭಾರದ್ವಾಜ್ ಕೆ. ಆನಂದತೀರ್ಥ, ರಾಜಕೀಯ ವಿಶ್ಲೇಷಕ, ಕಣಿವೆ (10ಎಂಡಿಕೆ02)