ಕೊಪ್ಪಳ: ಕಳೆದ ಹತ್ತು ವರ್ಷದಲ್ಲಿ ಕೇಂದ್ರ ಸರ್ಕಾರ ಉದ್ಯೋಗ ಸೃಷ್ಟಿ ಬಗ್ಗೆ ಪ್ರಸ್ತಾಪಿಸಿಲ್ಲ, ಪೊಳ್ಳು ಭರವಸೆಗಳನ್ನು ವಿತ್ತ ಸಚಿವರು ಮುಂದುವರೆಸಿದ್ದಾರೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದ್ದಾರೆ.
ಕೇಂದ್ರ ಸರ್ಕಾರ ಬಿಹಾರ ಮತ್ತು ಆಂಧ್ರ ರಾಜ್ಯಗಳಿಗೆ ವಿಶೇಷ ಅನುದಾನದ ಪ್ಯಾಕೇಜ್ ಘೋಷಿಸುವ ಮೂಲಕ ತಮ್ಮ ಸರ್ಕಾರವನ್ನು ಉಳಿಸಿಕೊಳ್ಳುವ ರಾಜಕೀಯ ಯೋಜನೆಯನ್ನು ನರೇಂದ್ರ ಮೋದಿ ಅವರ ಸರ್ಕಾರ ಘೋಷಿಸಿದೆ. ನಿರ್ಮಲಾ ಸೀತರಾಮನ್ ಅವರು ಕೇವಲ ಬಜೆಟ್ ಮಂಡಿಸಿರುವುದರಲ್ಲಿ ಮಾತ್ರ ಸಾಧನೆ ಮಾಡಿದ್ದಾರೆ. ಕರ್ನಾಟಕದಿಂದ ಎನ್ ಡಿಎ ಪಕ್ಷದ 19 ಮಂದಿಯನ್ನು ರಾಜ್ಯದ ಜನತೆ ಆಯ್ಕೆ ಮಾಡಿ ಕಳುಹಿಸಿದ್ದು, ಆದರೆ ರಾಜ್ಯಕ್ಕೆ ಒಂದೇ ಒಂದು ಯೋಜನೆಯನ್ನು ನೀಡದೆ, ಮಲತಾಯಿ ಧೋರಣೆಯನ್ನು ತೋರಿದೆ.
ಈ ಮೂಲಕ ಕನ್ನಡಿಗರಿಗೆ ಕೇಂದ್ರ ಸರ್ಕಾರ ಬಜೆಟ್ ನಲ್ಲಿ ಅನ್ಯಾಯ ಮಾಡಿದೆ. ಬಜೆಟ್ ನಲ್ಲಿ ಯುವಕರಿಗೆ, ಮಧ್ಯಮ ವರ್ಗ ಹಾಗೂ ಬಡ ವರ್ಗದವರಿಗೆ ಏನನ್ನು ನೀಡಿಲ್ಲ. ಇದೊಂದು ಬಡವರ, ದೀನ ದಲಿತರ ಹಾಗೂ ಮಧ್ಯಮ ವರ್ಗದವರ ವಿರೋಧಿ ಬಜೆಟ್ ಎಂದು ಟೀಕಿಸಿದ್ದಾರೆ.