ಜಿಲ್ಲೆ

ಡೀಮ್ಡ್ ಅರಣ್ಯ ಪ್ರದೇಶದಲ್ಲಿ ಕಲ್ಲು ಗಣಿಕಾರಿಕೆ ಸ್ಥಗಿತ

ಲಲಾಟಾಕ್ಷ ಎಸ್

ಅರಕಲಗೂಡು: ತಾಲೂಕಿನ ಮುದಗನೂರು ಕಾವಲ್ ಮತ್ತು ಅರಸೀಕಟ್ಟೆ ಕಾವಲ್ ಡೀಮ್ಡ್ ಅರಣ್ಯ ಪ್ರದೇಶದಲ್ಲಿ ನಡೆಯುತ್ತಿದ್ದ ಕಲ್ಲು ಗಣಿಕಾರಿಕೆಯನ್ನು ಸ್ಥಗಿತಗೊಳಿಸಿರುವುದಾಗಿ ಸಕಲೇಶಪುರ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಪಿ.ಮಹದೇವ್ ತಿಳಿಸಿದರು.
ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಕಲ್ಲುಗಣಿಕಾರಿಕೆ ನಡೆಸಬಾರದು ಎಂಬ ಸುಪ್ರೀಂಕೋರ್ಟ್‌ನ ನಿರ್ದೇಶನದಂತೆ ಹಾಗೂ ಹಿರಿಯ ಅಧಿಕಾರಿಗಳ ಸೂಚನೆಯಂತೆ ಕ್ರಮ ಕೈಗೊಳ್ಳಲಾಗಿದೆ. ಎರಡು ಕ್ರಷರ್‌ಗಳನ್ನು ವಲಯ ಅರಣ್ಯಾಧಿಕಾರಿಗಳು ಮತ್ತು ಸಿಬ್ಬಂದಿ ಬಂದ್ ಮಾಡಿಸಿದ್ದು ಯಾವುದೇ ಚಟುವಟಿಕೆ ನಡೆಸದಂತೆ ಹಾಗೂ ವಾಹನಗಳು ಸಂಚರಿಸದಂತೆ ಟ್ರಂಚ್ ತೆಗೆಸಲಾಗಿದೆ. ಎರಡು ಗಣಿಗಾರಿಕೆ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ ಎಂದು ಗುರುವಾರ ಸುದ್ದಿಗಾರರಿಗೆ ತಿಳಿಸಿದರು.

ಡೀಮ್ಡ್ ಅರಣ್ಯ ಪ್ರದೇಶದಲ್ಲಿ ಗಣಿಕಾರಿಕೆ ನಡೆಸಬಾರದು ಎಂಬ ಸುಪ್ರೀಂಕೋರ್ಟ್ ನಿರ್ದೇಶನದಂತೆ ಕ್ರಮ ಕೈಗೊಳ್ಳಲಾಗಿದೆ. ಕಂದಾಯ ಇಲಾಖೆ ಮತ್ತು ಗಣಿ ಮತ್ತು ಭೂ ವಿಜ್ಞಾನ ಇಲಾಖೆಗಳಿಗೂ ಸೂಚನೆ ಹೋಗಿದೆ. ಹಾಸನ ಅರಣ್ಯ ವಿಭಾಗದ ಅರಸೀಕೆರೆ, ಚನ್ನರಾಯಪಟ್ಟಣ ಸೇರಿದಂತೆ ಎಲ್ಲ ಕಡೆಗಳಲ್ಲಿ ಈ ಕುರಿತು ಕ್ರಮ ಜರುಗಿಸಲಾಗಿದೆ ಎಂದರು.

ಗಿಡಗಳ ವಿತರಣೆ: ಅರಣ್ಯ ಇಲಾಖೆ ಕೃಷಿ ಪ್ರೋತ್ಸಾಹ ಯೋಜನೆಯಡಿ ಜಿಲ್ಲೆಯಲ್ಲಿ 1.5 ಲಕ್ಷ ಗಿಡಗಳನ್ನು ಬೆಳೆಸಿ ಸಾರ್ವಜನಿಕರಿಗೆ ಸಬ್ಸಿಡಿ ದರದಲ್ಲಿ ವಿತರಿಸುವ ಕಾರ್ಯಕೈಗೊಂಡಿದೆ. ವಿವಿಧ ಜಾತಿಯ ಗಿಡಗಳನ್ನು ಬೆಳೆಸಿದ್ದು ಇದಕ್ಕೆ ದರ ನಿಗದಿಪಡಿಸಲಾಗಿದೆ. ಗಿಡವೊಂದನ್ನು ಬೆಳೆಸಲು ಮೊದಲ ವರ್ಷ 35ರೂ., ಎರಡನೇ ವರ್ಷ 45ರೂ., ಮೂರನೇ ವರ್ಷ 50 ರೂ. ಪ್ರೋತ್ಸಾಹ ಧನ ನೀಡಲಾಗುವುದು. ಪಟ್ಟಣದ ಅರಣ್ಯ ಇಲಾಖೆ ಕಚೇರಿಯನ್ನು ಸದ್ಯದಲ್ಲೇ ಹೊಳೆನರಸೀಪುರ ರಸ್ತೆ ತಿಮ್ಮಕ್ಕ ಪಾರ್ಕ್ ಸಮೀಪ ನಿರ್ಮಿಸಿರುವ ನೂತನ ಕಟ್ಟಡಕ್ಕೆ ಸ್ಥಳಾಂತರಿಸಲಾಗುವುದು ಎಂದು ಹೇಳಿದರು. ವಲಯ ಅರಣ್ಯಾಧಿಕಾರಿ ಯಶ್ಮಾ ಮಾಚಮ್ಮ ಇದ್ದರು.