ಶ್ರವಣ್ ಕುಮಾರ್ ನಾಳ, ಪುತ್ತೂರು
ಅದು ಪುಷ್ಪಗಿರಿ ರಾಷ್ಟ್ರೀಯ ಉದ್ಯಾನವನದ ತಳಪ್ರದೇಶ, ಇತಿಹಾಸ ಪ್ರಸಿದ್ಧ ಬಂಟಮಲೆಯ ಮಾರುದ್ದದಲ್ಲಿರುವ ಹಚ್ಚಹಸುರಿನ ಸರ್ಕಾರಿ ಭೂಮಿ ಗುತ್ತಿಗಾರು. ಆದರೆ 8 ವರ್ಷಗಳಿಂದ ಗುತ್ತಿಗಾರು ಕಾನನದ ಮಧ್ಯೆ ಸದ್ದಿಲ್ಲದೆ ನಡೆಯುತ್ತಿದ್ದ ಅನಧಿಕೃತ ಗಣಿಗಾರಿಕೆಯಿಂದ ಪುಷ್ಪಗಿರಿ ರಾಷ್ಟ್ರೀಯ ಉದ್ಯಾನವನ, ಬಂಟಮಲೆ, ಗುತ್ತಿಗಾರಿನ ಬೆಟ್ಟಗಳು ಆಪತ್ತಿಗೊಳಗಾಗಿವೆ.
ಎರಡು ವರ್ಷದ ಹಿಂದೆ ಕೊಡಗು ಹಾಗೂ ಸುಳ್ಯ ಗಡಿಭಾಗದ ಬೆಟ್ಟಗಳು ಕುಸಿದು ಉಂಟಾದ ಮಹಾದುರಂತ ಈಭಾಗದ ಕೊಲ್ಲಮುಗ್ರು ಭಾಗಕ್ಕೂ ಪರಿಣಾಮ ಬೀರಿದೆ. ಗುತ್ತಿಗಾರು ಸರ್ಕಾರಿ ಅರಣ್ಯ ವ್ಯಾಪ್ತಿಯ 50 ಎಕರೆಗೂ ಅಧಿಕ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಅನಧಿಕೃತ ಗಣಿಗಾರಿಕೆಯಿಂದಲೇ ಇಂತಹ ದುರಂತ ಸಂಭವಿಸಿದೆ. ಆದರೆ ಸುಳ್ಯ ತಾಲೂಕು ಆಡಳಿತ, ಜಿಲ್ಲಾಡಳಿತ, ಜಿಲ್ಲಾ ಗಣಿ ಹಾಗೂ ಭೂ ವಿಜ್ಞಾನ ಇಲಾಖೆ ಈವರೆಗೆ ಕ್ರಮ ಕೈಗೊಂಡಿಲ್ಲ.
ಸರ್ಕಾರಿ ಭೂಮಿಯಲ್ಲಿ ಗಣಿಗಾರಿಕೆ
8 ವರ್ಷಗಳಿಂದ ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಪಂ ವ್ಯಾಪ್ತಿಯ ಸರ್ಕಾರಿ ಅರಣ್ಯ ಕಾಡು ಭೂಮಿಯಲ್ಲಿ ಸ್ಥಳೀಯ ಪ್ರಭಾವಿಯೊಬ್ಬರು ಅಕ್ರಮ ಕೆಂಪುಕಲ್ಲು ಕ್ವಾರಿ ನಡೆಸುತ್ತಿದ್ದು, ಈ ಬಗ್ಗೆ 2018ರಲ್ಲಿ ಗುತ್ತಿಗಾರು ಗ್ರಾಮ ಪಂಚಾಯಿತಿ ಅಧ್ಯಕ್ಷ ಅಚ್ಚುತ ಎಂಬುವರು ಜಿಲ್ಲಾಧಿಕಾರಿಗೆ ದೂರು ನೀಡಿದ್ದರು. ಈ ಪ್ರದೇಶಕ್ಕೆ ಸ್ಥಳೀಯರಿಗೆ ಪ್ರವೇಶ ನಿಷೇಧವಿದ್ದು, ಮಾಲೀಕರಿಂದ ಅನುಮತಿ ಪಡೆಯದೆ ತೆರಳಿದರೆ ಜೀವಂತವಾಗಿ ಬರುವುದು ಕನಸು. ಈ ಗಣಿಗಾರಿಕೆ ಆರಂಭದಲ್ಲಿ ಸಣ್ಣ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಸ್ತುತ 50 ಎಕರೆಗೂ ಅಧಿಕ ವ್ಯಾಪ್ತಿಯಲ್ಲಿ ನಡೆಯುತ್ತಿದೆ. ಬಾಲಕಾರ್ಮಿಕ ಹಾಗೂ ಮಹಿಳೆಯರು ಇಲ್ಲಿನ ಕೆಲಸಗಾರರು, ರಾತ್ರಿ ಪಾಳಿಯಲ್ಲಿ ಮಾತ್ರ ಇಲ್ಲಿ ಕಾರ್ಯನಿರ್ವಹಣೆ. ಮಿತಿಗಿಂತ ಹೆಚ್ಚಿನ ಆಳದಲ್ಲಿ ಗಣಿಗಾರಿಕೆ ನಡೆಯುತ್ತಿದ್ದು, ಮಳೆಗಾಲದಲ್ಲಿ ಇಲ್ಲಿ 40 ಅಡಿ ಆಳದಲ್ಲಿ ನೀರು ನಿಲ್ಲುತ್ತದೆ.
ಪುಷ್ಪಗಿರಿ, ಬಂಟಮಲೆಗೆ ಕಾದಿದೆ ಆಪತ್ತು
ಗುತ್ತಿಗಾರು ಗಣಿಗಾರಿಕಾ ಪ್ರದೇಶಕ್ಕೆ ಬಂಟಮಲೆ, ಇದಕ್ಕೆ ಎದುರುಮುಖವಾಗಿ ಪಶ್ಚಿಮಘಟ್ಟ ವ್ಯಾಪ್ತಿಯ ಪುಷ್ಪಗಿರಿ ಬೆಟ್ಟ ವ್ಯಾಪ್ತಿಗಳಿವೆ. ಗುತ್ತಿಗಾರಿನ ಅನಧಿಕೃತ ಗಣಿಗಾರಿಕಾ ವ್ಯಾಪ್ತಿಯಲ್ಲೇ ಕೊಲ್ಲಮುಗ್ರು ಅರಣ್ಯ ಭಾಗವಿದೆ. ಕಳೆದ 2ವರ್ಷದ ಹಿಂದೆ ಕೊಲ್ಲಮುಗ್ರು ಭಾಗ ಭೀಕರ ಭೂ ಕುಸಿತಕ್ಕೊಳಗಾಗಿತ್ತು. ಗಣಿಗಾರಿಕಾ ಪ್ರದೇಶಕ್ಕೆ ರಾತ್ರಿ ವೇಳೆ 50ಕ್ಕೂ ಅಧಿಕ ಲಾರಿಗಳ ಮೂಲಕ ಕೆಂಪುಕಲ್ಲು ಸಾಗಾಟ ನಡೆಸಲಾಗುತ್ತಿದೆ. ಬೃಹತ್ ಕಾಡಿನ ಮಧ್ಯ ಭಾಗದಲ್ಲಿ ಈ ಕೆಂಪುಕಲ್ಲು ಗಣಿಗಾರಿಕೆ ನಡೆಯುವುದರಿಂದ ಈ ಬಗ್ಗೆ ಯಾರಿಗೂ ಮಾಹಿತಿ ಇಲ್ಲ.
ಗೂಗಲ್ ಸ್ಯಾಟ್‌ಲೈಟ್‌ನಲ್ಲೂ ಪತ್ತೆ 2015ರಲ್ಲಿ ಗೂಗಲ್ ಮ್ಯಾಪ್ ಸ್ಯಾಟ್‌ಲೈಟ್ ಇಮೇಜಿಂಗ್‌ನಲ್ಲಿ ಗುತ್ತಿಗಾರು ಬೆಟ್ಟ ಹಚ್ಚಹಸುರಾಗಿದ್ದು, 2020ರ ಜನವರಿಯಲ್ಲಿನ ಸ್ಯಾಟ್‌ಲೈಟ್ ಇಮೇಜಿಂಗ್ ಭೂಮಿಯ ಒಡಲು ಬಗೆದಂತಿದೆ. ಇದೇ ಆಧಾರದಲ್ಲಿ ಸ್ಥಳೀಯರೋರ್ವರು ಜಿಲ್ಲಾ ಗಣಿ ಇಲಾಖೆಗೆ ದೂರು ನೀಡಿದ್ದರೂ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ. ಗುತ್ತಿಗಾರು ಗ್ರಾಪಂ ಅಧಿಕಾರಿಗಳಿಗೆ ಮಾಹಿತಿಯಿದ್ದರೂ ಈ ಭೂಮಿ ಗ್ರಾಪಂ ವ್ಯಾಪ್ತಿಗೆ ಬರುವುದಿಲ್ಲ ಎಂಬ ನೆಪವೊಡ್ಡಿ ಸುಮ್ಮನಾಗಿದ್ದಾರೆ. ನಿಗದಿತ ವ್ಯಾಪ್ತಿಗಿಂತ ಅಧಿಕ ಪ್ರಮಾಣದಲ್ಲಿ ಗಣಿಗಾರಿಕೆ, ಬೆಟ್ಟದ ಆಳದವರೆಗೂ ಭೂಮಿಯನ್ನು ಗಣಿಗಾರಿಕೆಗಾಗಿ ಕೊರೆದ ಪರಿಣಾಮ ಸಮೀಪದ ಕೊಲ್ಲಮುಗ್ರು ಭಾಗ 2ವರ್ಷದ ಹಿಂದೆ ಭೀಕರ ಭೂ ಕುಸಿತಕ್ಕೊಳಗಾಗಿತ್ತು.
ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಪಂ ವ್ಯಾಪ್ತಿಯಲ್ಲಿ ಅನಧಿಕೃತ ಗಣಿಗಾರಿಕೆ ಬಗ್ಗೆ ಸ್ಥಳ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಈ ಬಗ್ಗೆ ಸ್ಥಳೀಯ ಮಟ್ಟದ ಅಧಿಕಾರಿಗಳಿಂದಲೂ ಮಾಹಿತಿ ಕೇಳಲಾಗುವುದು. ಒಂದು ವೇಳೆ ಪರವಾನಗಿ ರಹಿತ ಗಣಿಗಾರಿಕೆ ಕಂಡುಬಂದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ನಿರಂಜನ್, ಉಪ ನಿರ್ದೇಶಕರು ದ.ಕ ಜಿಲ್ಲಾ ಗಣಿ ಹಾಗೂ ಭೂವಿಜ್ಞಾನ ಇಲಾಖೆ ಮಂಗಳೂರು