ವಿಜಯವಾಣಿ ಸುದ್ದಿಜಾಲ ಚಿಕ್ಕನಾಯಕನಹಳ್ಳಿ
ತಾಲೂಕಿನ ಗಣಿ ಪ್ರದೇಶಗಳಿಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ತುಳಸಿ ಮದ್ದಿನೆನಿ ಮಂಗಳವಾರ ಭೇಟಿ ನೀಡಿ, ಪರಿಶೀಲಿಸುವ ಮೂಲಕ ಗಣಿಗಾರಿಕೆ ಪುನರಾರಂಭಗೊಳ್ಳುವ ಮೂನ್ಸೂಚನೆ ನೀಡಿದ್ದಾರೆ.
ಪಟ್ಟಣದ ತಾಲೂಕು ಕಚೇರಿಗಳ ಪ್ರಗತಿ ಪರಿಶೀಲನೆಗಾಗಿ ಆಗಮಿಸಿದ್ದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು, ಹೊನ್ನೇಬಾಗಿ ಗಣಿಗಾರಿಕೆ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿ, ಗಣಿ ಹಾಗೂ ಅರಣ್ಯ ಇಲಾಖೆಗಳ ನಡುವಿನ ಕೆಲವು ಅಡೆತಡೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ವರದಿ ನೀಡಲು ಬಂದಿರುವುದಾಗಿ ತಿಳಿಸಿದರು.
ಹತ್ತಾರು ವರ್ಷಗಳಿಂದ ಗಣಿಗಾರಿಕೆ ನಿಲ್ಲಿಸಿರುವ ಕಾರಣ ಆ ಜಾಗಗಳಲ್ಲಿ ಪ್ರಸ್ತುತ ಬೃಹತ್ ಮರಗಳು ಬೆಳೆದಿವೆ. ಈ ನಿಟ್ಟಿನಲ್ಲಿ ಗಣಿಗಾರಿಕೆ ಆರಂಭವಾಗಲು ಮರಗಳು ಅಡ್ಡಿಯಾಗಬಹುದು ಎಂಬ ಕಾರಣಕ್ಕೆ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ
ಭೇಟಿ ನೀಡಿ ಪರಿಶೀಲನೆ ನಡೆಸಿರುವುದು ಕುತೂಹಲ ಮೂಡಿಸಿದೆ.
ತಾಲೂಕು ಆಡಳಿತಸೌಧದಲ್ಲೇ ಕೆಲವು ಇಲಾಖೆಯ ಪ್ರಗತಿ ಪರಿಶೀಲನೆ ಸಭೆ ನಡೆಸಿದ ಅವರು, ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿನ ಸ್ವಚ್ಛತೆ ಹಾಗೂ ವೈದ್ಯರ ಬಗ್ಗೆ ಬೇಸರ ವ್ಯಕ್ತಪಡಿಸಿದರು.
ಆಸ್ಪತ್ರೆಯ ಶೌಚಗೃಹಗಳಲ್ಲಿ ಸ್ವಚ್ಛತೆ ಇಲ್ಲದಿರುವ ಬಗ್ಗೆ ಡಿ ಗ್ರೂಪ್ ನೌಕರರ ಮಧ್ಯೆ ಮಾತಿನ ಚಕಾಮಕಿ ನಡೆಯಿತು.
ಈ ವೇಳೆ ಮುಖ್ಯಾಧಿಕಾರಿಗೆ ಆಸ್ಪತ್ರೆಯ ಸುತ್ತಮುತ್ತ ಸ್ವಚ್ಛತೆ ಮಾಡುವ ಜತೆಗೆ ಫಾಗಿಂಗ್ ಮಾಡುವಂತೆ ಸೂಚಿಸಿದರು.
ನೆರಳು ಸಂಘಟನೆಯ ಮಹಮದ್ ಹುಸೇನ್ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗೆ ಮನವಿ ಸಲ್ಲಿಸಿ ಮಾತನಾಡಿ, ಆಸ್ಪತ್ರೆಯಲ್ಲಿ ಮೂಳೆ ಹಾಗೂ ಚರ್ಮ ತಜ್ಞರು ಇಲ್ಲ. ಕೂಡಲೇ ಅಗತ್ಯವಿರುವ ವೈದ್ಯರನ್ನು ಹಾಗೂ ಖಾಲಿಯಿರುವ ಡಿ ಗ್ರೂಪ್ ನೌಕರರನ್ನು ನೇಮಿಸುವಂತೆ ತಿಳಿಸಿದರು. ಜಿಲ್ಲಾ ಉಸ್ತವಾರಿ ಕಾರ್ಯದರ್ಶಿಗಳು ಮನವಿ ಸ್ವೀಕರಿಸಿ, ಸರ್ಕಾರಕ್ಕೆ ವರದಿ ನೀಡುವುದಾಗಿ ತಿಳಿಸಿದರು.
ಮುಖ್ಯಾಧಿಕಾರಿ ಮಂಜುಳಮ್ಮ ಮಾತನಾಡಿ, ಪ್ರತಿದಿನ ಸುಮಾರು 10 ಟನ್ ಕಸ ಪಟ್ಟಣದಲ್ಲಿ ಶೇಖರಣೆಯಾಗುತ್ತಿದೆ. ಈ ಬಗ್ಗೆ ಕಸ ವಿಲೇವಾರಿ ಘಟಕ ಹಾಗೂ ಇದರ ಕೆಲಸ ಕಾರ್ಯದ ಬಗ್ಗೆ ತಿಳಿಸಲು ಮಾರ್ಗದರ್ಶನ ಮಾಡಲು ಸರಿಯಾದ ಅಭಿಯಂತರರು ಇಲ್ಲದಿರುವ ಹಾಗೂ ನೌಕರರ
ಸಮಸ್ಯೆಯ ಬಗ್ಗೆ ಮಾಹಿತಿ ನೀಡಿದರು.
ತಹಸೀಲ್ದಾರ್ ಕೆ.ಪುರಂದರ ಅವರಿಗೆ ಆಸ್ಪತ್ರೆಯ ಸ್ವಚ್ಛತೆಯ ಬಗ್ಗೆ ಹಾಗೂ ಕಸ ವಿಲೇವಾರಿ ಘಟಕಗಳಲ್ಲಿ ಯಂತ್ರೋಪಕರಣಗಳು ಕಾರ್ಯನಿರ್ವಹಿಸುವ ಬಗ್ಗೆ ಪುರಸಭೆಗೆ ಹದಿನೈದು ದಿನದಲ್ಲಿ ವರದಿ ನೀಡುವಂತೆ ಕಾರ್ಯದರ್ಶಿ ಸೂಚಿಸಿದರು.
ವಲಯ ಅರಣ್ಯಾಧಿಕಾರಿ ಅರುಣ್ ಕುಮಾರ್ ಸೇರಿ ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಇದ್ದರು.
ಅಗತ್ಯ ಸಿಬ್ಬಂದಿ ನೇಮಕಕ್ಕೆ ಸೂಚನೆ
ಪಟ್ಟಣದ ಪುರಸಭೆ ವ್ಯಾಪ್ತಿಯ ಕಸ ವಿಲೇವಾರಿ ಘಟಕಕ್ಕೆ ಭೇಟಿ ನೀಡಿ ಅಲ್ಲಿ ಸಮರ್ಪಕ ಕಸ ವಿಲೇವಾರಿಯಾಗದಿರುವ ಬಗ್ಗೆ ಅಧಿಕಾರಿಯ ವಿರುದ್ಧ ತುಳಸಿ ಮದ್ದಿದೆನಿ ಗುಡುಗಿದರು. ಹತ್ತಾರು ಕೋಟಿ ರೂ. ವೆಚ್ಚದಲ್ಲಿ ಬೃಹತ್ ಯಂತ್ರೋಪಕರಣಗಳನ್ನು ನೀಡಿದ್ದರೂ ಅವುಗಳನ್ನು ಸಮರ್ಪಕವಾಗಿ ಬಳಸದಿರುವ ಬಗ್ಗೆ ಮತ್ತು ಕಸದಿಂದ ಗೊಬ್ಬರ ತಯಾರಿಕೆ ಮಾಡದಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದ ಅವರು, ಇನ್ನು ಹದಿನೈದು ದಿನಗಳಲ್ಲಿ ಎಲ್ಲ ಯಂತ್ರಗಳನ್ನು ಪ್ರಾರಂಭ ಮಾಡಿ ಅಗತ್ಯ ಸಿಬ್ಬಂದಿಯೊಂದಿಗೆ ಕಸ ವಿಲೇವಾರಿ ಮಾಡುವಂತೆ ಸೂಚಿಸಿದರು.