ಮಂಜುನಾಥ ಅಂಗಡಿ ಧಾರವಾಡ
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಗ್ರಾಮೀಣ ಪ್ರದೇಶಗಳ ಬಡವರಿಗೆ ಸೂರು ಒದಗಿಸಲು ಹಲವಾರು ವಸತಿ ಯೋಜನೆಗಳನ್ನು ಜಾರಿಗೆ ತಂದಿವೆ. ಫಲಾನುಭವಿಗಳಿಗೆ ಮೀಸಲಾಗಿರುವ ಅನುದಾನ ವರ್ಷಾನುಗಟ್ಟಲೇ ಹೆಚ್ಚಳವಾಗಿಲ್ಲ. ದುಬಾರಿ ಕಾಲಮಾನದಲ್ಲಿ ತಗಡಿನ ಶೆಡ್ ನಿರ್ಮಾಣವೂ ಕಷ್ಟದಾಯಕವಾಗಿದೆ.
ಬಸವ ವಸತಿ ಯೋಜನೆ ಸಾಮಾನ್ಯ ವರ್ಗಗಳಿಗೆ ಮೀಸಲಿದ್ದು ಫಲಾನುಭವಿಗಳಿಗೆ ೧.೨೦ ಲಕ್ಷ ರೂ. ಅನುದಾನ ಮೀಸಲಿದೆ. ಅದೇರೀತಿ ಪರಿಶಿಷ್ಟ ಜಾತಿ, ಪಂಗಡದ ಫಲಾನುಭವಿಗಳಿಗೆ ಅಂಬೇಡ್ಕರ್ ವಸತಿ ಯೋಜನೆ ಜಾರಿಯಲ್ಲಿದೆ. ಇದರಡಿ ೧.೭೫ ಲಕ್ಷ ರೂ. ಅನುದಾನ ಸಿಗುತ್ತದೆ. ಪ್ರಧಾನಮಂತ್ರಿ ಆವಾಸ್ ಯೋಜನೆ ಅಡಿ ಸಾಮಾನ್ಯ ಫಲಾನುಭವಿಗಳಿಗೆ ೧.೨೦ ಲಕ್ಷ ರೂ. ಹಾಗೂ ಎಸ್‌ಸಿ- ಎಸ್‌ಟಿ ಫಲಾನುಭವಿಗಳಿಗೆ ೧.೭೫ ಲಕ್ಷ ರೂ. ಅನುದಾನ ಮೀಸಲಿದೆ.
ಇನ್ನು ದೇವರಾಜ ಅರಸು ಅಭಿವೃದ್ಧಿ ನಿಗಮದಿಂದ ಕೂಡ ವಸತಿ ಯೋಜನೆ ಜಾರಿಯಲ್ಲಿದೆ. ಇದರಡಿ ವಿಧವೆಯರು, ಅಂಗವಿಕಲರು, ಚರ್ಮಗಾರಿಕೆ ವೃತ್ತಿಯವರು, ಹಿರಿಯ ನಾಗರಿಕರು, ಇತರ ವಿಶೇಷ ವರ್ಗಗಳಿಗೆ ೧.೨೦ ಲಕ್ಷ ರೂ. ನೀಡಲಾಗುತ್ತದೆ. ಈ ಎಲ್ಲ ಯೋಜನೆಗಳನ್ನು ಉದ್ಯೋಗ ಖಾತ್ರಿ ಯೋಜನೆಯಡಿ ಅನುಷ್ಠಾನಗೊಳಿಸಲಾಗುತ್ತದೆ. ಅದರಂತೆ ದಿನಕ್ಕೆ ೩೦೯ ರೂ.ಗಳಂತೆ ೯೦ ದಿನಗಳ ಮಾನವ ದಿನ ವೇತನ ಉದ್ಯೋಗ ಚೀಟಿ ಹೊಂದಿರುವವರ ಖಾತೆಗೆ ಜಮೆಯಾಗುತ್ತದೆ.
ವಸತಿ ಯೋಜನೆಗಳಿಗೆ ನಿಗದಿಪಡಿಸಿರುವ ಅನುದಾನ ತೀರ ಕಡಿಮೆ. ಹಂಚಿನ ಅಥವಾ ತಗಡಿನ ಮನೆ ನಿರ್ಮಿಸಬೇಕೆಂದರೂ ನಿಗದಿತ ಮೊತ್ತ ಕನಿಷ್ಠ. ಹೀಗಾಗಿ ಹಿಂದಿನ ವಸತಿ ಸಚಿವರಾಗಿದ್ದ ವಿ. ಸೋಮಣ್ಣ ಅವರು ವಸತಿ ಯೋಜನೆಗಳ ಅನುದಾನವನ್ನು ಕನಿಷ್ಠ ೩ ಲಕ್ಷಕ್ಕೆ ಏರಿಸುವ ಭರವಸೆ ನೀಡಿದ್ದರು. ಇದು ಗ್ರಾಮೀಣ ಫಲಾನುಭವಿಗಳಲ್ಲಿ ಆಶಾಭಾವನೆ ಮೂಡಿಸಿತ್ತು. ಆದರೆ, ಅವರ ಅಽಕಾರ ಅವಽ ಮುಗಿಯುವವರೆಗೆ ಅನುದಾನ ಹೆಚ್ಚಳ ಸಾಧ್ಯವಾಗಲಿಲ್ಲ.
ಅನುದಾನ ಹೆಚ್ಚಳ ಮಾಡಬೇಕು ಎಂಬ ಕೂಗು ೫- ೬ ವರ್ಷಗಳಿಂದ ಕೇಳಿಬರುತ್ತಿದೆ. ದಶಕದ ಮೀಸಲಾದ ಅನುದಾನದ ಮೊತ್ತ ಅಷ್ಟೇ ಇದೆ. ಆದರೆ, ನಿರ್ಮಾಣ ಕೂಲಿಕಾರರ ದಿನಗೂಲಿ, ಕಬ್ಬಿಣ, ಮರಳು, ಸಿಮೆಂಟ್ ದರ ದುಪ್ಪಟ್ಟಾಗಿದೆ. ಹೀಗಾಗಿ ಅನುದಾನ ಹೆಚ್ಚಳದ ಬಗ್ಗೆ ಕಾಂಗ್ರೆಸ್ ಸರ್ಕಾರವಾದರೂ ಕ್ರಮ ಕೈಗೊಳ್ಳಲಿ ಎಂಬುದು ಫಲಾನುಭವಿಗಳ ಆಶಯ.
ಗ್ರಾ.ಪಂ.ಗಳಿAದ ಅನುಷ್ಠಾನ
ವಸತಿ ಯೋಜನೆಗಳು ಜಿಲ್ಲಾ ಪಂಚಾಯಿತಿಗಳ ಮೂಲಕ ತಾಲೂಕುವಾರ ಆಯಾ ಗ್ರಾ.ಪಂ.ಗಳ ಮೂಲಕ ಅನುಷ್ಠಾನಗೊಳ್ಳುತ್ತವೆ. ಗ್ರಾ.ಪಂ.ಗಳಿಗೆ ಮನೆಗಳನ್ನು ನಿಗದಿಪಡಿಸಿ ಗುರಿಯ ನಿಗದಿಪಡಿಸಲಾಗುತ್ತದೆ. ವಾರ್ಡ್ ಸಭೆಗಳಲ್ಲಿ ವ್ಯಕ್ತವಾಗುವ ಬೇಡಿಕೆಗೆ ಅನುಗುಣವಾಗಿ ಗ್ರಾ.ಪಂ. ಸದಸ್ಯರಿಗೆ ವಾರ್ಡ್ವಾರು ಮನೆಗಳ ಹಂಚಿಕೆಯಾಗುತ್ತವೆ. ಕ್ರಿಯಾಯೋಜನೆ ರೂಪಿಸಿ ಉದ್ಯೋಗ ಖಾತ್ರಿ ಯೋಜನೆಯಡಿ ಫಲಾನುಭವಿಗಳಿಗೆ ಆದೇಶಪತ್ರ ನೀಡಿ ಮನೆ ಕಟ್ಟಿಕೊಳ್ಳಲು ಅನುಮತಿ ನೀಡಲಾಗುತ್ತದೆ.
ವಸತಿ ಯೋಜನೆಗಳ ಕ್ರಿಯಾಯೋಜನೆ ಸಿದ್ಧಪಡಿಸಲಾಗುತ್ತಿದೆ. ಮನೆಗಳ ಅನುದಾನ ಹೆಚ್ಚಳದ ಬಗ್ಗೆ ಸರ್ಕಾರದಿಂದ ಇನ್ನೂ ಅಽಕೃತ ಆದೇಶ ಬಂದಿಲ್ಲ. ಸರ್ಕಾರದ ಮಾರ್ಗಸೂಚಿಯಂತೆ ಅನುದಾನ ನಿಗದಿಪಡಿಸಿ ಆಯ್ಕೆಯಾದ ಫಲಾನುಭವಿಗಳಿಗೆ ಆದೇಶ ಪತ್ರ ನೀಡಲಾಗುವುದು.