ಜಿಲ್ಲೆ

ಸಂಭ್ರಮದಲ್ಲಿ ಮಿಂದ ಹಿರಿಯರು, ವಿಶೇಷ ಚೇತನರು

ಆರ್.ಕೃಷ್ಣ

ಮೈಸೂರು: ವಿಶೇಷ ಚೇತನರು ತಮ್ಮಲ್ಲೇನು ಪ್ರತಿಭೆಗೆ ಕೊರತೆ ಇಲ್ಲ ಎನ್ನುವಂತೆ ತಮ್ಮಲ್ಲಿರುವ ಕಲೆ ಪ್ರದರ್ಶಿಸಿದರೆ, ಇಳಿವಯಸ್ಸಿನಲ್ಲಿಯೂ ನಮ್ಮಲ್ಲಿ ಉತ್ಸಾಹ ಬತ್ತಿಲ್ಲ ಎನ್ನುವುದನ್ನು ಹಿರಿಯರು ತೋರಿಸಿ ಚಪ್ಪಾಳೆ ಗಿಟ್ಟಿಸಿದರು.
ದಸರಾ ಅಂಗವಾಗಿ ನಗರದ ಜೆ.ಕೆ.ಮೈದಾನದಲ್ಲಿ ಸೋಮವಾರ ಆಯೋಜಿಸಿದ್ದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿಶೇಷ ಚೇತನರು, ಹಿರಿಯರು ನಡೆಸಿಕೊಟ್ಟ ಕಾರ್ಯಕ್ರಮ, ಆಟೋಟ ನೋಡುಗರನ್ನು ಹುಬ್ಬೇರಿಸುವಂತೆ ಮಾಡಿತು.
ಸಾಂಸ್ಕೃತಿಕ ನಗರಿಯ ಮೈಸೂರು ದಸರಾ 5ನೇ ದಿನಕ್ಕೆ ಕಾಲಿಟ್ಟಿದ್ದು, ಅಂಗವಾಗಿ ಮಹಿಳಾ ಮತ್ತು ಮಕ್ಕಳ ದಸರಾ ಉಪ ಸಮಿತಿಯಿಂದ ಜೆ.ಕೆ. ಮೈದಾನದಲ್ಲಿ ಆಯೋಜಿಸಿದ್ದ ವಿಶೇಷ ಚೇತನ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಹಿರಿಯ ನಾಗರಿಕರಿಗೆ ಆಟೋಟ ಸ್ಪರ್ಧೆ ಗಮನ ಸೆಳೆದರೆ, ರೈತ ದಸರಾ ಉಪ ಸಮಿತಿಯಿಂದ ಏರ್ಪಡಿಸಿದ್ದ ಹಾಲು ಕರೆಯುವ ಸ್ಪರ್ಧೆ ದಸರಾ ಉತ್ಸವಕ್ಕೆ ಮೆರುಗು ನೀಡಿತು.
ಹಿರಿಯ ಮಹಿಳೆಯರಿಗಾಗಿ ಮ್ಯೂಸಿಕಲ್ ಚೇರ್, ಬಾಲ್ ಇನ್ ದ ಬಕೆಟ್, ಪುರುಷರಿಗೆ 100 ಮೀಟರ್ ವಾಕಿಂಗ್, ಗುಂಡು ಎಸೆತ ಸ್ಪರ್ಧೆ ನಡೆದವು. ಹಲವು ವೃದ್ಧರು ಸ್ಪರ್ಧೆೆಗಳಲ್ಲಿ ಭಾಗವಹಿಸಿ ತಮ್ಮ ಹದಿಯರೆಯದ ದಿನಗಳನ್ನು ಮೆಲುಕು ಹಾಕಿದರು. ಕಣ್ಣಿಗೆ ಬಟ್ಟೆ ಕಟ್ಟಿ ಬಕೆಟ್‌ಗೆ ಹೊಡೆಯುವುದು ಹಿಂಬಂದಿಯವರಿಗೆ ಪಾಸ್ ಮಾಡುವುದು, ವಾಟರ್ ಶಿಫ್ಟಿಂಗ್ ಗೇಮ್, ಮ್ಯಾಜಿಕ್ ಕಾರ್ಪೆಟ್ ರೇಸ್‌ನಂತಹ ಕ್ರೀಡೆಗಳು ಮುದ ನೀಡಿದವು.
ಮೈಸೂರು ನಾಗ ಮಾರ್ಷಲ್ ಆರ್ಟ್‌ನಿಂದ ಮಹಿಳೆಯರಿಗೆ ರಕ್ಷಣಾ ಕಲೆ ಪ್ರದರ್ಶನ ಮಾಡಲಾಯಿತು. ಭರತನಾಟ್ಯ, ಸಾಂಪ್ರದಾಯಿಕ ನೃತ್ಯಗಳನ್ನು ಪ್ರದರ್ಶನ ಮಾಡಿ ರಂಜಿಸಿದರು. ಭಾವಗೀತೆ, ಭಕ್ತಿಗೀತೆ, ನಾಟಕಗಳು ಮೇಳೈಸಿದವು. ವಿವಿಧ ವಿಶೇಷ ಚೇತನರ ಶಾಲೆಗಳಿಂದ ಆಗಮಿಸಿದ್ದ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟು ತಮ್ಮ ಪ್ರತಿಭೆ ಪ್ರದರ್ಶಿಸಿದರು.