ಮಸ್ಕಿಯಲ್ಲಿ ತಾಪಂ ವ್ಯವಸ್ಥಾಪಕ ಗಂಗಾಧರಗೆ ನಮ್ಮ ಕರವೇ ನೇತೃತ್ವದಲ್ಲಿ ಬುದ್ದಿನ್ನಿ ಗ್ರಾಮಸ್ಥರು ಮನವಿ ಸಲ್ಲಿಸಿದರು. ಪ್ರಮುಖರಾದ ಬಸವರಾಜ ಉದ್ಬಾಳ, ಹನುಮೇಶ, ಪ್ರದೀಪ ಸಾಗರ, ಗಂಗಪ್ಪ, ಮಲ್ಲಪ್ಪ, ಮಹಾದೇವಮ್ಮ, ದುರುಗಮ್ಮ, ತಿಮಮ್ಮ ಇತರರಿದ್ದರು. 
ಜಿಲ್ಲೆ

ಬುದ್ದಿನ್ನಿಯಲ್ಲಿ ಜೀವಜಲ ಸಮಸ್ಯೆ ಬಗೆಹರಿಸಿ

Kopala - Desk - Eraveni

ಮಸ್ಕಿ: ತಾಲೂಕಿನ ಬುದ್ದಿನ್ನಿ (ಉಪ್ಪಾರ) ಗ್ರಾಮದಲ್ಲಿ ಕುಡಿವ ನೀರಿನ ಸಮಸ್ಯೆ ಉಲ್ಬಣಿಸಿದ್ದು ನಿವಾರಿಸಬೇಕೆಂದು ಒತ್ತಾಯಿಸಿ ನಮ್ಮ ಕರ್ನಾಟಕ ರಕ್ಷಣಾ ವೇದಿಕೆ ನೇತೃತ್ವದಲ್ಲಿ ಗ್ರಾಮಸ್ಥರು ಗುರುವಾರ ತಾಪಂ ವ್ಯವಸ್ಥಾಪಕ ಗಂಗಾಧರಗೆ ಮನವಿ ಸಲ್ಲಿಸಿದರು.

ವೇದಿಕೆ ತಾಲೂಕು ಅಧ್ಯಕ್ಷ ಬಸವರಾಜ ಉದ್ಬಾಳ ಮಾತನಾಡಿ, ಬುದ್ದಿನ್ನಿ ಗ್ರಾಮದಲ್ಲಿ ಕಳೆದೊಂದು ತಿಂಗಳಿನಿಂದ ಕುಡಿವ ನೀರಿನ ಸಮಸ್ಯೆ ತಲೆದೋರಿದೆ. ಈ ಬಗ್ಗೆ ಗೌಡನಬಾವಿ ಗ್ರಾಪಂ ಪಿಡಿಒ ಗಮನಕ್ಕೆ ತಂದರೆ ಹಾರಿಕೆ ಉತ್ತರ ನೀಡುತ್ತಿದ್ದಾರೆ.

ಗ್ರಾಮ ಸಭೆ ನಡೆದಾಗ ಕುಡಿವ ನೀರಿನ ಸಮಸ್ಯೆ ಎರಡು ದಿನಗಳಲ್ಲಿ ಬಗೆಹರಿಸುವುದಾಗಿ ಪಿಡಿಒ ತಿಳಿಸಿದ್ದರು. ಆದರೆ, ಸಭೆ ಮುಗಿದು 15 ದಿನ ಕಳೆದರೂ ಸಮಸ್ಯೆ ಪರಿಹಾರವಾಗಿಲ್ಲ. ನಿರ್ಲಕ್ಷೃ ತೋರಿದ ಗ್ರಾಪಂ ಪಿಡಿಒ ವಿರುದ್ಧ ಕ್ರಮಕೈಗೊಳ್ಳಬೇಕು.

ಜಲ ಸಮಸ್ಯೆ ಬಗೆಹರಿಸಬೇಕು. ವಾಟರ್‌ಟ್ಯಾಂಕ್ ಶುಚಿಗೊಳಿಸುವುದು ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿದರು. ಎರಡ್ಮೂರು ದಿನಗಳಲ್ಲಿ ಸಮಸ್ಯೆ ಬಗೆಹರಿಸದಿದ್ದರೆ ತಾಪಂ ಕಚೇರಿ ಮುಂದೆ ಗ್ರಾಮಸ್ಥರೊಂದಿಗೆ ಅನಿರ್ದಿಷ್ಟಾವಧಿ ಧರಣಿ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸಂಘಟನೆಯ ಗ್ರಾಮ ಘಟಕದ ಅಧ್ಯಕ್ಷ ಹನುಮೇಶ, ಗ್ರಾಮಸ್ಥರಾದ ಪ್ರದೀಪ ಸಾಗರ, ಗಂಗಪ್ಪ, ಮಲ್ಲಪ್ಪ, ಮಹಾದೇವಮ್ಮ, ದುರುಗಮ್ಮ, ತಿಮಮ್ಮ, ದೇವಮ್ಮ, ಗಂಗಮ್ಮ, ಯಂಕಪ್ಪ ಇತರರಿದ್ದರು.