ಹುನಗುಂದ: ಶರಣರು ಕೊಟ್ಟ ಇಷ್ಟಲಿಂಗವನ್ನು ಏಕಾಗ್ರತೆಯಿಂದ ಪೂಜಿಸಿದರೆ ಮಾತ್ರ ಮನಸ್ಸಿನ ನಿಯಂತ್ರಣ ಸಾಧ್ಯ ಎಂದು ಚಿತ್ತರಗಿ ಇಳಕಲ್ಲ ಸಂಸ್ಥಾನಮಠದ ಗುರುಮಹಾಂತ ಸ್ವಾಮಿಗಳು ಹೇಳಿದರು.
ಪಟ್ಟಣದ ನಾಗಲಿಂಗನಗರದ ಲಕ್ಷ್ಮಿಬಾಯಿ ಜಗದೀಶ ಹುನಗುಂದ ಅವರ ಮನೆಯಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್, ಕದಳಿ ಮಹಿಳಾ ವೇದಿಕೆ, ಕರ್ನಾಟಕ ವಚನ ಸಾಹಿತ್ಯ ಪರಿಷತ್ ಸಹಯೋಗದಲ್ಲಿ 30ನೇ ಮನೆ ಮನಗಳಿಗೆ ವಚನ ಸೌರಭ ಕಾರ್ಯಕ್ರಮವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದ ಅವರು, ಇಂದು ನಮ್ಮ ಮನಸ್ಸನ್ನು ಹತೋಟಿಯಲ್ಲಿಡುವುದು ಸುಲಭವಲ್ಲ. ಮಂಗನಂತಿರುವ ಮನಸ್ಸು ಹಾಗೂ ಆಸೆಗಳನ್ನು ನಿಯಂತ್ರಣಕ್ಕೆ ತರಲು ಇಷ್ಟಲಿಂಗ ನಮ್ಮ ಮನಸ್ಸನ್ನು ಸೆಳೆಯುತ್ತದೆ ಎಂದರು.
ಶಿಕ್ಷಕಿ ಗೀತಾ ಇದ್ದಲಗಿ ಮಾತನಾಡಿ, ಬಸವಾದಿ ಶರಣರ ವಚನಗಳನ್ನು ಮೈಗೂಡಿಸಿಕೊಂಡರೆ ಸಂಸಾರದ ಬಂಧನದಿಂದ ಮುಕ್ತಿ ಪಡೆಯಲು ಸಾಧ್ಯವಿದೆ ಎಂದರು.
ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಡಾ.ಶಿವಗಂಗಾ ರಂಜಣಗಿ ಮಾತನಾಡಿದರು. ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರೊ.ಎಸ್.ಎನ್. ಹಾದಿಮನಿ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ವಚನ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರಭು ಮಾಲಗಿತ್ತಿಮಠ ಸ್ವಾಗತಿಸಿ, ವಂದಿಸಿದರು. ಪರಿಷತ್ ಪ್ರಧಾನ ಕಾರ್ಯದರ್ಶಿ ಸಂಗಮೇಶ ಹೊದ್ಲೂರ ನಿರೂಪಿಸಿದರು.