ಜಿಲ್ಲೆ

ಪ್ರತಿಧ್ವನಿಸಿದ ಮಿಮ್ಸ್ ಅವ್ಯವಸ್ಥೆ: ಸಾಮಾನ್ಯಸಭೆಯಲ್ಲಿ ಸಮಸ್ಯೆಗಳ ಸುರಿಮಳೆಗೈದ ನಗರಸಭೆ ಸದಸ್ಯರು

reportermys

ಮಂಡ್ಯ: ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಮಿಮ್ಸ್)ಯಲ್ಲಿನ ಅವ್ಯವಸ್ಥೆ ಬಗ್ಗೆ ಆಯೋಜಿಸಿದ್ದ ನಗರಸಭೆ ಸಾಮಾನ್ಯ ಸಭೆಯಲ್ಲಿ ಜೋರಾಗಿಯೇ ಸದ್ದು ಮಾಡಿತ್ತು. ಸದಸ್ಯರು ಮಿಮ್ಸ್ ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದರು.

ಅಧ್ಯಕ್ಷ ಎಚ್.ಎಸ್.ಮಂಜು ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಸದಸ್ಯ ಶ್ರೀಧರ್, ಮಿಮ್ಸ್‌ನಲ್ಲಿನ ಸಮಸ್ಯೆಗಳನ್ನು ಅನಾವರಣಗೊಳಿಸಿದರು. ಇದಕ್ಕೆ ದನಿಗೂಡಿಸಿದ ಸದಸ್ಯರು, ಕೋವಿಡ್ ಸಂದರ್ಭದಲ್ಲಿ ಬಳಸಿದ್ದ ಹಾಸಿಗೆಗಳು ಹೆಗ್ಗಣಗಳ ಪಾಲಾಗಿವೆ. ಹೆರಿಗೆ ವಾರ್ಡ್‌ನಲ್ಲಿನ ರೋಗಿಗಳ ಸಮಸ್ಯೆ ಕೇಳುವವರಿಲ್ಲ. ಎಂಆರ್‌ಐ ಸ್ಕ್ಯಾನಿಂಗ್ ಮಾಡಿಸಿದರೂ ಸಕಾಲಕ್ಕೆ ವರದಿ ಸಿಗುತ್ತಿಲ್ಲ. ಹೀಗಾದರೆ ಸಾರ್ವಜನಿಕರ ಕಥೆ ಏನೆಂದು ಆಕ್ರೋಶ ಹೊರಹಾಕಿದರು.

ಇದಕ್ಕೆ ಪ್ರತಿಕ್ರಿಯಿಸಿದ ಆರ್‌ಎಂಒ ಡಾ.ವೆಂಕಟೇಶ್, ಆಸ್ಪತ್ರೆಯಲ್ಲಿ ವೈದ್ಯರು, ದಾದಿಯರ ಕೊರತೆ ಬಹಳಷ್ಟಿದೆ. 280 ಶೌಚಗೃಹಗಳಿಗೆ 16 ಮಂದಿ ಸ್ವಚ್ಛತಾ ನೌಕರರಿದ್ದಾರೆ. 120 ನಾನ್ ಕ್ಲಿನಿಕಲ್ ಸಿಬ್ಬಂದಿ ನೇಮಕಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ ಎಂದು ಹೇಳಿದರು.

ಎಂಆರ್‌ಐ ಸ್ಕ್ಯಾನಿಂಗ್ ವರದಿ ನೀಡಲು ಎಷ್ಟು ಸಮಯ ಬೇಕು ಎಂದು ಸದಸ್ಯರು ಕೇಳಿದಾಗ ಉತ್ತರಿಸಿದ ವೆಂಕಟೇಶ್, ಪ್ರತಿ ದಿನಕ್ಕೆ 25 ಎಂಆರ್‌ಐ, 50 ಸಿಟಿ ಸ್ಕ್ಯಾನ್ ಆಗುತ್ತದೆ. ಮೂವರು ರೇಡಿಯಾಲಜಿ ವೈದ್ಯರು ಮಾತ್ರ ಆಸ್ಪತ್ರೆಯಲ್ಲಿದ್ದಾರೆ. ಹೀಗಾಗಿ ವರದಿ ನೀಡುವುದಕ್ಕೆ ವಿಳಂಬವಾಗುತ್ತಿದೆ ಎಂದರು.

ಇದಕ್ಕೆ ಆಕ್ಷೇಪಿಸಿದ ಸದಸ್ಯರು, ವರದಿ ಯಾವಾಗ ಸಿಗುತ್ತದೆ ಎಂಬ ಬಗ್ಗೆ ನಿಖರ ಮಾಹಿತಿ ಕೊಡುವುದಿಲ್ಲ. ಅದನ್ನು ಕೇಳುವವರ ಮೇಲೆ ಸಿಬ್ಬಂದಿ ದರ್ಪ ತೋರುತ್ತಾರೆ ಎಂದು ಆರೋಪಿಸಿದರು. ಆಗ ವೆಂಕಟೇಶ್ ಪ್ರತಿಕ್ರಿಯಿಸಿ, ಇನ್ಮುಂದೆ ಎಂಆರ್‌ಐ ಸ್ಕ್ಯಾನಿಂಗ್ ಆದ ಮೂರು ದಿನಗಳೊಳಗೆ ವರದಿ ದೊರಕಿಸಿಕೊಡುವುದಾಗಿ ಭರವಸೆ ನೀಡಿದರು.

ಸೌಭಾಗ್ಯ ಮಾತನಾಡಿ, ಮಳೆ ಬಂದರೆ ಹೆರಿಗೆ ವಾರ್ಡ್‌ನೊಳಗೆ ನೀರು ತುಂಬಿಕೊಳ್ಳುತ್ತದೆ. ಅಲ್ಲಿನ ಗರ್ಭಿಣಿಯರು, ಬಾಣಂತಿಯರ ಗತಿ ಏನು? ಈ ವ್ಯವಸ್ಥೆ ಸರಿಪಡಿಸುವಂತೆ ಹಿಂದೆ ಇದ್ದ ಮಿಮ್ಸ್ ನಿರ್ದೇಶಕರಿಗೂ ಪತ್ರದ ಮೂಲಕ ತಿಳಿಸಲಾಗಿತ್ತು. ಆದರೂ ಈವರೆಗೂ ಕ್ರಮ ವಹಿಸಿಲ್ಲ ಎಂದರು.

ಇದಕ್ಕೆ ಉತ್ತರಿಸಿದ ವೆಂಕಟೇಶ್, ಹೆರಿಗೆ ವಾರ್ಡ್‌ನಲ್ಲಿರುವುದೇ 18 ಹಾಸಿಗೆಗಳು. ಪ್ರತಿದಿನ 25ಕ್ಕೂ ಹೆಚ್ಚು ಹೆರಿಗೆಗಳಾಗುತ್ತವೆ. ಅನಿವಾರ್ಯ ಸಂದರ್ಭದಲ್ಲಷ್ಟೇ ಇಬ್ಬಿಬ್ಬರನ್ನು ಒಂದು ಹಾಸಿಗೆ ಮೇಲೆ ಮಲಗಿಸಲಾಗುತ್ತದೆ. ಉಳಿದಂತೆ ಬೇರೆಡೆ ಹಾಸಿಗೆ ಕೊಟ್ಟು ಅನುಕೂಲ ಮಾಡಿಕೊಡಲಾಗುತ್ತಿದೆ ಎಂದು ಸಮಜಾಯಿಷಿ ನೀಡಿದರು.

ಹೆರಿಗೆ ವಾರ್ಡ್ ಇರುವ ಕಲ್ಲು ಕಟ್ಟಡ ಪಾರಂಪರಿಕ ಕಟ್ಟಡವಾಗಿದೆ. ಇದನ್ನು ದುರಸ್ತಿಪಡಿಸಲು ನಿರ್ಮಿತಿ ಕೇಂದ್ರದ ಮೂಲಕ 1.17 ಕೋಟಿ ರೂ. ವೆಚ್ಚದ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳುಹಿಸಲಾಗಿದೆ. ಸರ್ಕಾರದ ಮಂಜೂರಾತಿ ದೊರಕಿದ ಕೂಡಲೇ ದುರಸ್ತಿಗೆ ಕ್ರಮ ವಹಿಸಲಾಗುವುದು. ಮುಂದಿನ ಮಳೆಗಾಲದ ವೇಳೆಗೆ ಕಟ್ಟಡವನ್ನು ಸುಸ್ಥಿತಿಗೆ ತರಲಾಗುವುದು ಎಂದರು.

ನಹೀಂ ಮಾತನಾಡಿ, ಕರೊನಾ ಸಮಯದಲ್ಲಿ ಬಂದ ನೂರಾರು ಹಾಸಿಗೆಗಳನ್ನು ಏನು ಮಾಡಿದ್ದೀರಿ? ಆ ಬೆಡ್‌ಗಳನ್ನು ಗರ್ಭಿಣಿಯರು, ಬಾಣಂತಿಯರ ಉಪಯೋಗಕ್ಕೆ ಏಕೆ ಬಳಸುತ್ತಿಲ್ಲ? ಮಂಚಗಳನ್ನು ಜೋಡಿಸಿ ಒಂದೊಂದು ಬೆಡ್‌ಗೆ ಇಬ್ಬರು ಬಾಣಂತಿಯರನ್ನು ಮಲಗಿಸಿ ಅಮಾನವೀಯವಾಗಿ ನಡೆಸಿಕೊಳ್ಳುವುದು ಸರಿಯೇ ಎಂದು ಪ್ರಶ್ನಿಸಿದರು.

ಇದಕ್ಕೆ ದನಿಗೂಡಿಸಿದ ಶಿವಲಿಂಗಪ್ಪ, ಕರೊನಾ ಸಮಯದಲ್ಲಿ ಕೊಟ್ಟ ಬೆಡ್‌ಗಳು ಹೆಗ್ಗಣಗಳ ಪಾಲಾಗುತ್ತಿವೆ. ಖಾಸಗಿ ನರ್ಸಿಂಗ್‌ಹೋಂಗಳಿಗೆ ಅನುಕೂಲ ಮಾಡಿಕೊಡುವುದಕ್ಕಾಗಿಯೇ ಎಂಆರ್‌ಐ ಸ್ಕ್ಯಾನಿಂಗ್ ವರದಿ ನೀಡುವುದನ್ನು ವಿಳಂಬ ಮಾಡುತ್ತಿರುವಿರಾ? ಎಂದು ಕಿಡಿಕಾರಿದರು.

ಎಚ್.ಎಸ್.ಮಂಜು ಹಾಗೂ ನಹೀಂ ಮಾತನಾಡಿ, ತುರ್ತು ಚಿಕಿತ್ಸೆಗೆ ಬರುವ ಬಡ ರೋಗಿಗಳು ಐಸಿಯು ಬೆಡ್ ಕೇಳಿದರೆ ಇಲ್ಲ ಎನ್ನುತ್ತೀರಿ. ಅದೇ ನಾವು ಐಸಿಯು ಬೆಡ್ ಕೇಳಿದರೆ ಕಳುಹಿಸಿ ಎನ್ನುತ್ತೀರಿ. ಹಾಗಾದರೆ ಆಸ್ಪತ್ರೆ ಐಸಿಯು ಬೆಡ್‌ಗಳು ರಾಜಕಾರಣಿಗಳು, ಪ್ರಭಾವಿಗಳಿಗೆ ಮಾತ್ರನಾ ಇರೋದು? ಮೊದಲು ನಿಮ್ಮ ಕಾರ್ಯವೈಖರಿ ಸರಿಪಡಿಸಿ. ಬಡ ರೋಗಿಗಳಿಗೆ ಸ್ಪಂದಿಸುವ ಮಾನವೀಯ ಗುಣ ಬೆಳೆಸಿಕೊಳ್ಳಿ ಎಂದು ಸಲಹೆ ನೀಡಿದರು.

ಸಮಸ್ಯೆಗಳು ಬಂದಾಗ ನನಗೆ ಫೋನ್ ಮಾಡುವಂತೆ ಪದೇ ಪದೆ ವೆಂಕಟೇಶ್ ಹೇಳುತ್ತಿದ್ದರಿಂದ ಆಕ್ರೋಶಗೊಂಡ ಸದಸ್ಯರು, ಆಸ್ಪತ್ರೆಗೆ ಬರುವ ಸಾವಿರಾರು ಜನರು ನಿಮಗೆ ಫೋನ್ ಮಾಡಲು ಸಾಧ್ಯವೇ? ಅವರೆಲ್ಲರ ಫೋನ್‌ಗಳಿಗೆ ಸ್ಪಂದಿಸಿ ಸಮಸ್ಯೆ ಬಗೆಹರಿಸುವಿರಾ? ಎಂದು ತರಾಟೆಗೆ ತೆಗೆದುಕೊಂಡರು.

ಎಂ.ಪಿ.ಅರುಣ್‌ಕುಮಾರ್ ಮಾತನಾಡಿ, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಬರುವ ಬಹಳಷ್ಟು ರೋಗಿಗಳಿಗೆ ವೈದ್ಯರು ಔಷಧಗಳನ್ನು ಹೊರಗೆ ತೆಗೆದುಕೊಳ್ಳಲು ಬರೆದುಕೊಡುತ್ತಾರೆ. ಹಾಗಾದರೆ ಆಸ್ಪತ್ರೆಯಲ್ಲಿ ನೀಡುವ ಔಷಧಗಳು ಉಪಯೋಗಕ್ಕೆ ಬಾರದವೇ? ಅವುಗಳನ್ನು ತರಿಸುವ ಉದ್ದೇಶವಾದರೂ ಎನ್ನುವ ಪ್ರಶ್ನೆಗೆ ಮಿಮ್ಸ್ ಅಧಿಕಾರಿಯಿಂದ ಸಮರ್ಪಕ ಉತ್ತರ ಸಿಗಲಿಲ್ಲ.

ಸಭೆಯಲ್ಲಿ ಉಪಾಧ್ಯಕ್ಷೆ ಇಶ್ರತ್ ಫಾತೀಮಾ, ಪೌರಾಯುಕ್ತ ಮಂಜುನಾಥ್ ಇದ್ದರು.