ಮಂಡ್ಯ: ರಕ್ತ ಸಂಗ್ರಹಕ್ಕೆ ಅನುಕೂಲವಾಗುವಂತೆ ಐ.ಸಿ.ಐ.ಸಿ.ಐ ಬ್ಯಾಂಕ್ ಸಿ.ಎಸ್.ಆರ್ ಯೋಜನೆಯಡಿ 37 ಲಕ್ಷ ರೂ ವೆಚ್ಚದ ಮೊಬೈಲ್ ರಕ್ತ ಸಂಗ್ರಹಣೆ ವಾಹನವನ್ನು ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಚ್.ಎನ್.ಗೋಪಾಲಕೃಷ್ಣ ತಿಳಿಸಿದರು.
ನಗರದ ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಮಿಮ್ಸ್)ಯ ಆವರಣದಲ್ಲಿ ವಾಹನ ಹಸ್ತಾಂತರಿಸಿ ಮಾತನಾಡಿದರು. ವಾಹನವು ಅತ್ಯಾಧುನಿಕ ತಂತ್ರಜ್ಞಾನದ ವ್ಯವಸ್ಥೆ ಹೊಂದಿದೆ. ರಕ್ತ ಸಂಗ್ರಹಣೆಗೆ ಬೇಕಾದ ಎಲ್ಲ ರೀತಿಯ ವ್ಯವಸ್ಥೆ ಮಾಡಲಾಗಿದೆ. ರೆಫ್ರಿಜಿರೇಟರ್ ವ್ಯವಸ್ಥೆ ಇದ್ದು, ರಕ್ತದಾನಿಗಳು ವಿಶ್ರಾಂತಿ ಪಡೆಯಲು ಆಸನದ ವ್ಯವಸ್ಥೆ ಮಾಡಲಾಗಿದೆ. ದಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ರಕ್ತದಾನ ಮಾಡುವಂತೆ ಮನವಿ ಮಾಡಿದರು.
ರಕ್ತದಾನ ಶಿಬಿರವನ್ನು ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಮಾತ್ರ ಆಯೋಜಿಸಲಾಗುತ್ತಿತ್ತು. ಮೊಬೈಲ್ ರಕ್ತ ಸಂಗ್ರಹಣಾ ವಾಹನವನ್ನು ಉಪಯೋಗಿಸಿಕೊಂಡು ಮುಂದಿನ ದಿನಗಳಲ್ಲಿ ರಕ್ತದಾನ ಶಿಬಿರವನ್ನು ಗ್ರಾಮ ಮಟ್ಟದಲ್ಲೂ ಆಯೋಜಿಸಬಹುದು. ಕೆಲವೆಡೆ ಶಿಬಿರ ಆಯೋಜನೆ ಮಾಡಲು ಸ್ಥಳಾವಕಾಶದ ಸಮಸ್ಯೆ ಇರುತ್ತದೆ. ಅಂತಹ ಕಡೆ ವಾಹನದ ಸೌಲಭ್ಯ ಪಡೆದುಕೊಳ್ಳಬಹುದು. ಒಂದೇ ಬಾರಿಗೆ ಮೂವರು ರಕ್ತ ಕೊಡಲು ವ್ಯವಸ್ಥೆ ಇರಲಿದೆ ಎಂದರು.
ಐಸಿಐಸಿಐ ಬ್ಯಾಂಕ್‌ನ ಅಧಿಕಾರಿ ಬಿ.ಕೆ.ವೆಂಕಟೇಶ ಮಾತನಾಡಿ, ಮೊಬೈಲ್ ರಕ್ತ ಸಂಗ್ರಹಣೆ ವಾಹನವನ್ನು ಮಿಮ್ಸ್‌ಗೆ ನೀಡಲಾಗಿದೆ. ಇದರಿಂದ ಜಿಲ್ಲೆಗೆ ಅನುಕೂಲವಾಗುತ್ತದೆ. ರಕ್ತದ ಅವಶ್ಯಕತೆ ಇದ್ದವರಿಗೆ ಸ್ಪಂದಿಸಲು ಸಹಾಯಕವಾಗುತ್ತದೆ. ಗ್ರಾಮೀಣ ಭಾಗದಲ್ಲಿ ರಕ್ತದಾನದ ಶಿಬಿರಗಳನ್ನು ಮಾಡಿದಾಗ ರಕ್ತವನ್ನು ಸಂಗ್ರಹಿಸಿಟ್ಟುಕೊಂಡು ಬರುವುದು ತುಂಬಾ ಮುಖ್ಯವಾಗುತ್ತದೆ. ಈ ಕೆಲಸಕ್ಕೆ ವಾಹನವು ನೆರವಿಗೆ ಬರಲಿದೆ ಎಂದರು.
ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು, ಮಿಮ್ಸ್ ನಿರ್ದೇಶಕ ಡಾ.ಮಹೇಂದ್ರ, ಮೆಡಿಕಲ್ ಸೂಪರಿಡೆಂಟ್ ಡಾ.ಶ್ರೀಧರ್, ಐಸಿಐಸಿಐ ಬ್ಯಾಂಕ್ ಮ್ಯಾನೇಜರ್ ಮುರಳೀಧರ್ ಇತರರಿದ್ದರು.