ಗಂಗೊಳ್ಳಿ: ಬುಧವಾರ ರಾತ್ರಿ ಹಾಗೂ ಗುರುವಾರ ಬೆಳಗ್ಗೆ ಬೀಸಿದ ಭಾರಿ ಗಾಳಿ-ಮಳೆಗೆ ಕುಂದಾಪುರ ತಾಲೂಕಿನ ಹಲವು ಗ್ರಾಮಗಳು ತತ್ತರಿಸಿದ್ದು, ಹಲವೆಡೆ ಮನೆ ಹಾಗೂ ಜಾನುವಾರು ಕೊಟ್ಟಿಗೆಗಳಿಗೆ ಹಾನಿಯಾಗಿದೆ. ಮರಗಳು ಉರುಳಿ ಬಿದ್ದು ವಿದ್ಯುತ್ ಕಂಬ ತುಂಡಾಗಿದ್ದು, ಲಕ್ಷಾಂತರ ರೂ. ನಷ್ಟ ಸಂಭವಿಸಿದೆ.
ಗಂಗೊಳ್ಳಿ ರಥಬೀದಿ ಜಿ.ಮನೋಹರ ಶೆಣೈ ಮನೆ ಮೇಲ್ಛಾವಣಿ ಗಾಳಿಗೆ ಹಾರಿ ರಸ್ತೆ ಮೇಲೆ ಬಿದ್ದಿದೆ. ಗುಡ್ಡೆಕೇರಿ ನೇತ್ರಾವತಿ ಹಾಗೂ ಗಂಗೊಳ್ಳಿ ಸಾಂತಯ್ಯನಕೇರಿ ಪದ್ಮಾವತಿ ಮನೆ ಮೇಲೆ ತೆಂಗಿನ ಮರ, ಸುಲೋಚನಾ ಶೇರುಗಾರ್ ಮನೆ ಮೇಲೆ ಮರ ಬುಡ ಸಮೇತ ಉರುಳಿದ ಪರಿಣಾಮ ಮನೆ ಸಂಪೂರ್ಣ ಹಾನಿಯಾಗಿದೆ.
ಗುಜ್ಜಾಡಿ ಗ್ರಾಮ ಬೆಣ್ಗೆರೆ ಅಣ್ಣಪ್ಪ ಶೇರುಗಾರ್ ಮನೆ, ಮಲ್ಯರಬೆಟ್ಟು ಸಾರ್ವಜನಿಕ ಸ್ಮಶಾನದ ಮೇಲ್ಛಾವಣಿ ಸಿಮೆಂಟ್ ಶೀಟ್ ಹಾರಿ ಹೋಗಿದೆ. ಗಿರಿಜಾ ಮನೆ ಮೇಲೆ ಮರ ಬಿದ್ದು ಹಾನಿಯಾಗಿದೆ. ಗುಜ್ಜಾಡಿ ಗ್ರಾಮ ಜನತಾ ಕಾಲನಿ ನಿವಾಸಿ ಶೀನ ಮನೆ ಮೇಲೆ ಅಡಕೆ ಮರ ಉರುಳಿದೆ. ಮುತ್ತು ಮನೆ ಮೇಲ್ಛಾವಣಿಗೆ ಹಾನಿಯಾಗಿದೆ. ಮುಕಾಂಬು ಮನೆ ಮೇಲೆ ಮರ ಬಿದ್ದು ಮನೆ, ಗುಜ್ಜಾಡಿ ಕಂಚುಗೋಡು ಅಕ್ಕಮ್ಮರವರ ದನದ ಕೊಟ್ಟಿಗೆ ಭಾಗಶಃ ಹಾನಿಯಾಗಿದೆ. ಗುಜ್ಜಾಡಿ ಗ್ರಾಮದ ಮಾವಿನಕಟ್ಟೆ ಕೃಷ್ಣ ಕಾರಂತ ಮನೆ ಹಾಗೂ ದನದ ಕೊಟ್ಟಿಗೆ ಮೇಲೆ ಮರ ಉರುಳಿದೆ.
ಗಂಗೊಳ್ಳಿ ಬಂದರು ಬಸ್ ನಿಲ್ದಾಣ ಸಮೀಪ ಜಿ.ನಿತ್ಯಾನಂದ ಶೆಣೈ ಅಂಗಡಿ ಮೇಲೆ ಮರದ ಕೊಂಬೆ ಬಿದ್ದು ಹಾನಿಯಾಗಿದೆ. ಬಂದರು ಬೇಲಿಕೇರಿಯಲ್ಲಿ ಮರ ಮುರಿದು ಬಿದ್ದು ನಾಲ್ಕು ವಿದ್ಯುತ್ ಕಂಬಗಳು ತುಂಡಾಗಿವೆ. ಗಂಗೊಳ್ಳಿ ಗ್ರಾಮದ ದಾಕುಹಿತ್ಲು ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ಜೆ.ಎಂ.ರಸ್ತೆಯಲ್ಲಿ ಭಾರಿ ಗಾತ್ರದ ಮಾವಿನ ಮರ ತುಂಡಾಗಿ ಬಿದ್ದು ಐದು ವಿದ್ಯುತ್ ಕಂಬ ಮತ್ತು ವಿದ್ಯುತ್ ತಂತಿಗಳಿಗೆ ಹಾನಿಯಾಗಿದೆ. ಗಂಗೊಳ್ಳಿ ಗ್ರಾಮದ ಬಂದರು ಬೇಲಿಕೇರಿ ಮತ್ತು ಲೈಟ್‌ಹೌಸ್ ರಸ್ತೆ ಮೇಲೆ ಭಾರಿ ಗಾತ್ರದ ಮರ ಉರುಳಿ ಬಿದ್ದು ಲೈಟ್‌ಹೌಸ್ ರಸ್ತೆ ಹಾಗೂ ಬೇಲಿಕೇರಿ ಪರಿಸರದ ರಸ್ತೆ ಸಂಪರ್ಕ ಕಡಿತಗೊಂಡಿದೆ.