ಜಿಲ್ಲೆ

ಎಪಿಎಂಸಿ ಯಾರ್ಡ್‌ನಲ್ಲಿ ರಾಗಿ ಖರೀದಿ ಕೇಂದ್ರ ಆರಂಭ

ಹುಣಸೂರು: ಹುಣಸೂರು ನಗರದ ಎಪಿಎಂಸಿ ಯಾರ್ಡ್‌ನಲ್ಲಿ ರಾಜ್ಯ ಕೃಷಿ ಮಾರಾಟ ಮಂಡಳಿಯಿಂದ ಸ್ಥಾಪಿಸಿರುವ 2024-25ನೇ ಸಾಲಿನ ಮುಂಗಾರು ಹಂಗಾಮಿನ ರಾಗಿ ಕನಿಷ್ಠ ಬೆಂಬಲ ಬೆಲೆ ಖರೀದಿ ಕೇಂದ್ರವನ್ನು ಬುಧವಾರ ಉಪವಿಭಾಗಾಧಿಕಾರಿ ಎಚ್.ಬಿ.ವಿಜಯ್‌ಕುಮಾರ್ ಉದ್ಘಾಟಿಸಿದರು.

ರೈತಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್ ಮಾತನಾಡಿ, ರೈತಸಂಘದ ಸತತ ಹೋರಾಟದ ಫಲವಾಗಿ ಇದೀಗ ತಾಲೂಕಿನಲ್ಲಿ ರಾಗಿ ಖರೀದಿ ಕೇಂದ್ರ ಕಾರ್ಯಾರಂಭ ಮಾಡಲಾಗಿದೆ. ರೈತರು ತಾವು ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ ದೊರೆಯದೇ ಪರದಾಡುವುದು ಒಂದಡೆಯಾದರೆ, ಬೆಳೆಯನ್ನು ತಿಂಗಳುಗಟ್ಟಲೆ ಕಾಪಿಟ್ಟುಕೊಳ್ಳಲು ಕೂಡ ಕಷ್ಟವಾಗುತ್ತಿದೆ.

ಬೆಳೆ ನಿರ್ವಹಣೆ ಮಾಡಲಾಗದೆ ಮತ್ತು ಆರ್ಥಿಕ ಸಂಕಷ್ಟದಿಂದ ಪಾರಾಗಲು ದಲ್ಲಾಳಿಗಳಿಗೆ ಕಡಿಮೆ ಬೆಲೆಗೆ ಮಾರಾಟ ಮಾಡಿ ನಷ್ಟ ಅನುಭವಿಸುವಂತಾಗಿದೆ. ಸರ್ಕಾರಗಳು ಪ್ರತಿವರ್ಷ ಕೇಂದ್ರಗಳ ಕಾರ್ಯಚಟುವಟಿಕೆಯನ್ನು ವಿಳಂಬವಾಗಿ ಆರಂಭಿಸುವ ಮೂಲಕ ತನ್ನ ಬೇಜವಾಬ್ದಾರಿಯನ್ನು ಪ್ರದರ್ಶಿಸುತ್ತಲೇ ಇದೆ. ಇದೀಗ ಖರೀದಿ ಕೇಂದ್ರ ಆರಂಭಗೊಂಡಿದೆ.

ಯಾವುದೇ ಗೊಂದಲಗಳಿಗೆ ಅವಕಾಶವಿಲ್ಲದಂತೆ ರೈತರು ಸುಸೂತ್ರವಾಗಿ ಮಾರಾಟ ಮಾಡಿ ತೆರಳುವ ವ್ಯವಸ್ಥೆಯನ್ನು ಅಧಿಕಾರಿಗಳು ನಿರ್ಮಿಸಬೇಕು. ಭ್ರಷ್ಟಾಚಾರದಂತಹ ಪ್ರಕರಣಗಳು ಕೇಳಿಬಂದರೆ ಸಂಘವು ಉಗ್ರ ಹೋರಾಟ ನಡೆಸಲಿದೆ. ಅಲ್ಲದೆ ಕಾರ್ಮಿಕರು ಕೂಡ ತಮ್ಮ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸಬೇಕು. ರೈತರು ಟೋಕನ್ ಪಡೆದು ನಿಗದಿತ ದಿನಾಂಕದಂದು ರಾಗಿ ಮಾರಾಟ ಮಾಡುವ ಮೂಲಕ ವ್ಯವಸ್ಥೆಗೆ ಬೆಂಬಲ ನೀಡಬೇಕೆಂದು ಕೋರಿದರು.

ಉಪವಿಭಾಗಾಧಿಕಾರಿ ವಿಜಯ್‌ಕುಮಾರ್ ಮಾತನಾಡಿ, ಯಾವುದೇ ಗೊಂದಲಗಳಿಗೆ ಅವಕಾಶವಿಲ್ಲದಂತೆ ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ವ್ಯವಸ್ಥೆ ಮಾಡಲಾಗಿದೆ. ರೈತರು ಮಂಡಳಿಯೊಂದಿಗೆ ಸಹಕರಿಸಿ ರಾಗಿಯನ್ನು ಮಾರಾಟ ಮಾಡುವ ಮೂಲಕ ಯೋಜನೆ ಯಶಸ್ಸಿಗೆ ಸಹಕರಿಸಬೇಕೆಂದು ಕೋರಿದರು.

ಖರೀದಿ ಕೇಂದ್ರದ ಖರೀದಿ ಅಧಿಕಾರಿ ಸುರೇಶ್‌ಬಾಬು, ಎಪಿಎಂಸಿ ಕಾರ್ಯದರ್ಶಿ ಒ.ಹಂಪಣ್ಣ, ರೈತಸಂಘದ ತಾಲೂಕು ಅಧ್ಯಕ್ಷ ಬೆಂಕಿಪುರ ಚಿಕ್ಕಣ್ಣ, ದಲಿತ ಮುಖಂಡ ಅತ್ತಿಕುಪ್ಪೆ ರಾಮಕೃಷ್ಣ ಇತರರು ಇದ್ದರು.