ಜಿಲ್ಲೆ

ಜಿಲ್ಲೆಯಲ್ಲಿ ರಾಗಿ ಬೆಲೆ ಇಳಿಕೆ ; ಭರ್ಜರಿ ಬೆಳೆ ಬಂದರೂ ಪ್ರಯೋಜನವಿಲ್ಲ

ತುಮಕೂರು: ರಾಗಿ ಬೆಲೆ ತೀವ್ರ ಕುಸಿತ ಕಂಡಿರುವ ಹಿನ್ನೆಲೆಯಲ್ಲಿ ಖರೀದಿ ಕೇಂದ್ರ ಆರಂಭಿಸಬೇಕು ಎಂಬ ಒತ್ತಾಯ ಕೇಳಿ ಬಂದಿದೆ.

ಪ್ರಸ್ತುತ ಕ್ವಿಂಟಾಲ್‌ಗೆ 1800ರೂ, ಇದ್ದು, ಭರ್ಜರಿ ರಾಗಿ ಬೆಳೆದು ಬೀಗುತ್ತಿದ್ದ ರೈತರ ಮುಖದಲ್ಲಿ ಖುಷಿ ಮಾಯವಾಗಿದೆ.

ಜಿಲ್ಲೆಯ ರೈತರು ಪ್ರಸಕ್ತ ವರ್ಷ 2.10 ಲಕ್ಷ ಹೆ. ಪ್ರದೇಶದಲ್ಲಿ ರಾಗಿ ಬಿತ್ತನೆ ಮಾಡಿ ಭರ್ಜರಿ ಬೆಳೆ ಬೆಳೆದಿದ್ದಾರೆ.

ಮುಕ್ತ ಮಾರುಕಟ್ಟೆಯಲ್ಲಿ ದಲ್ಲಾಳಿಗಳ ದುರಾಸೆಗೆ ರಾಗಿ ಬೆಲೆ ಕುಸಿತ ಕಂಡಿದ್ದು, ಕೂಡಲೇ ಸಹಾಯಧನದ ಜತೆ ರಾಗಿ ಖರೀದಿ ಕೇಂದ್ರ ಆರಂಭಿಸಬೇಕು ಎಂಬ ಒತ್ತಾಯ ಕೇಳಿಬಂದಿದೆ.

ಕೇಂದ್ರ ಸರ್ಕಾರದ ಕನಿಷ್ಠ ಬೆಂಬಲ ಬೆಲೆ 3150 ರೂ. ನಿಗದಿ ಮಾಡಿದ್ದು, ಅದಕ್ಕಿಂತ ಬೆಲೆ ಕಡಿಮೆಯಾದರೆ ಸರ್ಕಾರ ಪ್ರೋತ್ಸಾಹಧನ ನೀಡಿ ರಾಗಿ ಖರೀದಿಗೆ ಮುಂದಾಗಬೇಕು. ಹಾಗಾಗಿ, ಪ್ರಸ್ತುತ ಬೆಲೆ ಕುಸಿತದ ಹಿನ್ನೆಲೆಯಲ್ಲಿ ಸರ್ಕಾರ ಕೂಡಲೇ ನೆರವಿಗೆ ಬರಬೇಕು ಎಂಬ ಒತ್ತಾಯ ಕೇಳಿಬಂದಿದೆ. ಕೆಲವು ಕಡೆಗಳಲ್ಲಿ ಅಕಾಲಿಕ ಮಳೆಯಿಂದ ಬೆಳೆ ನಷ್ಟವಾಗಿದೆ. ಬೆಳೆಗೆ ನ್ಯಾಯವಾದ ಬೆಲೆ ಸಿಗಬೇಕಾದ್ದು ಅಗತ್ಯವಾಗಿದ್ದು ಸರ್ಕಾರದಿಂದ ಕೂಡಲೇ ರಾಗಿ ಖರೀದಿ ಮಾಡಬೇಕು ಎಂಬ ಕೂಗು ಜೋರಾಗಿದೆ.

ರಾಗಿ ಕೊಯ್ಲು ನಡೆಯುತ್ತಿದ್ದು ಕೆಲವೇ ದಿನಗಳಲ್ಲಿ ಒಕ್ಕಣೆ ಆರಂಭವಾಗಲಿದೆ, ತಮಿಳುನಾಡು, ಗಂಗಾವತಿ ಭಾಗದ ಬೃಹತ್ ಯಂತ್ರಗಳು ಹೊಲದಲ್ಲಿಯೇ ಸಿದ್ಧ ರಾಗಿ ನೀಡುತ್ತಿವೆ, ಹೆಚ್ಚು ರಾಗಿ ಬೆಳೆದಿರುವ ರೈತರು ಖರ್ಚು ಸರಿದೂಗಿಸಲು ಕಣದಿಂದಲೇ ನೇರವಾಗಿ ಮಾರುಕಟ್ಟೆಗೆ ಸಾಗಿಸಲಿದ್ದು ಅಷ್ಟರಲ್ಲಿ ರಾಗಿ ಖರೀದಿ ಕೇಂದ್ರ ಆರಂಭವಾದರೆ ಅನುಕೂಲವಾಗಲಿದೆ.

ರಾಗಿ ಬೆಳೆಯುವ ಜಿಲ್ಲೆಗಳಲ್ಲಿ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ವತಿಯಿಂದ ರಾಗಿ ಖರೀದಿ ಕೇಂದ್ರ ಆರಂಭಿಸುವ ಬಗ್ಗೆ ಸರ್ಕಾರ ತೀರ್ಮಾನ ತೆಗೆದುಕೊಳ್ಳಬೇಕು. ಬೆಂಬಲ ಬೆಲೆಯಲ್ಲಿ ರಾಗಿ ಖರೀದಿಗೆ ಅವಕಾಶವಿದ್ದು ಸರ್ಕಾರದ ನಿರ್ದೇಶನಕ್ಕೆ ಕಾಯುತ್ತಿದ್ದೇವೆ, ಕೇಂದ್ರಗಳ ಆರಂಭಕ್ಕೆ ಮೂಲಸೌಕರ್ಯವಿದೆ. ಶ್ರೀನಿವಾಸಯ್ಯ ಡಿಡಿ, ಆಹಾರ ಇಲಾಖೆ ರಾಗಿ ಬೆಳೆಯುವ ಖರ್ಚು ದುಪ್ಪಟ್ಟಾದರೂ ಅದರ ಬೆಲೆ ಮಾತ್ರ ಹೆಚ್ಚಾಗಿಲ್ಲ, ಜಿಲ್ಲೆಯಲ್ಲಿ ರಾಗಿ ಪ್ರಮುಖ ಬೆಳೆಯಾಗಿದ್ದು ಕೇಂದ್ರ ಸರ್ಕಾರದ 3150 ರೂಪಾಯಿ ಬೆಂಬಲ ಬೆಲೆ ಹಾಗೂ ರಾಜ್ಯ ಸರ್ಕಾರದ ಪ್ರೋತ್ಸಾಹಧನ ನೀಡಿ ರಾಗಿ ಖರೀದಿಸಿದರೆ ರೈತರಿಗೆ ನೆರವಾಗಲಿದೆ, ಜಿಲ್ಲೆಯಲ್ಲಿ ಕೂಡಲೇ ಖರೀದಿ ಕೇಂದ್ರ ಆರಂಭಿಸಬೇಕು. ನಂಜಯ್ಯ ರೈತ, ದಂಡಿನಶಿವರ