ಹುಣಸೂರು: ಖರೀದಿ ಕೇಂದ್ರಗಳಲ್ಲಿ ರೈತರು ರಾಗಿ ಮಾರಾಟ ಮಾಡಿ ಮೂರು ತಿಂಗಳು ಕಳೆದರೂ ಹಣ ನೀಡದೆ ಸರ್ಕಾರ ರೈತವಿರೋಧಿ ಧೋರಣೆ ಹೊಂದಿದ್ದು, ಇನ್ನೊಂದು ವಾರದಲ್ಲಿ ರೈತರಿಗೆ ಹಣ ನೀಡದಿದ್ದರೆ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ರೈತರು ಪ್ರತಿಭಟನೆ ನಡೆಸಲಿದ್ದಾರೆ ಎಂದು ರೈತಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್ ಎಚ್ಚರಿಸಿದ್ದಾರೆ.
ಮೂರು ತಿಂಗಳಾದರೂ ರಾಗಿ ಖರೀದಿ ಮಾಡಿದ ಸರ್ಕಾರವು ರೈತರಿಗೆ ಹಣ ಕೊಡದೆ ರೈತರನ್ನು ಶೋಷಣೆ ಮಾಡುತ್ತಿರುವ ಸರ್ಕಾರದ ರೈತ ವಿರೋಧಿ ನೀತಿ ಖಂಡನೀಯ. ಪ್ರತಿ ವರ್ಷವೂ ರಾಗಿ ಖರೀದಿ ಕೇಂದ್ರವನ್ನು ಸರಿಯಾದ ಸಮಯಕ್ಕೆ ತೆರೆಯದೆ ದಲ್ಲಾಳಿಗಳ ಪಾಲಾಗುತ್ತದೆ. ಈ ನಡುವೆ ರೈತ ಸಂಘಟನೆಗಳು ಖರೀದಿ ಕೇಂದ್ರ ತೆರೆಯಲು ಆಗ್ರಹಿಸಿ ಪ್ರತಿಭಟನೆ, ಧರಣಿ ನಡೆಸಿದ ನಂತರ ಖರೀದಿ ಕೇಂದ್ರಗಳನ್ನು ಸರ್ಕಾರ ತೆರೆಯುತ್ತದೆ. ಇಷ್ಟಕ್ಕೇ ಸರ್ಕಾರದ ವಿಳಂಬ ನೀತಿ ಅಥವಾ ರೈತ ವಿರೋಧಿ ಧೋರಣೆ ನಿಲ್ಲುವುದಿಲ್ಲ. ಇದೀಗ ರೈತರಿಂದ ರಾಗಿ ಖರೀದಿಸಿ ಮೂರು ತಿಂಗಳಾಯಿತು. ಇಂದಿಗೂ ರೈತರ ಖಾತೆಗೆ ಹಣ ಬಂದಿಲ್ಲ ಎಂದು ವಿಜಯವಾಣಿಯೊಂದಿಗೆ ತಮ್ಮ ಬೇಸರ ಹಂಚಿಕೊಂಡರು.
ಕೋಟಿಗಟ್ಟಲೆ ಹಣ ಸರ್ಕಾರದ ಬಳಿ: ಮೈಸೂರು ಜಿಲ್ಲೆಯಲ್ಲಿರುವ 12 ಖರೀದಿ ಕೇಂದ್ರಗಳಲ್ಲಿ ರಾಗಿ ಮಾರಾಟ ಮಾಡಿದ್ದ ಒಟ್ಟು 34321 ರೈತರು ನೋಂದಣಿ ಮಾಡಿಸಿಕೊಂಡಿದ್ದರು. ಈ ಪೈಕಿ 29415 ರೈತರು ರಾಗಿ ಮಾರಾಟ ಮಾಡಿದ್ದು, ಗುಣಮಟ್ಟದ 88,682 ಕ್ವಿಂಟಾಲ್ ಕೆಜಿ ರಾಗಿ ಖರೀದಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು 193 ಕೋಟಿ 32 ಲಕ್ಷದ 43,455 ರೂ.ಗಳ ಬಾಕಿಯನ್ನು ರೈತರಿಗೆ ನೀಡಬೇಕಿದೆ. ಹುಣಸೂರು ತಾಲೂಕಿನ ಎಪಿಎಂಸಿ ಯಾರ್ಡ್‌ನಲ್ಲಿ ಸ್ಥಾಪಿಸಿದ್ದ ಖರೀದಿ ಕೇಂದ್ರ ಮತ್ತು ರತ್ನಪುರಿ ಯಾರ್ಡ್‌ನಲ್ಲಿ ಸ್ಥಾಪಿಸಿದ್ದ ಕೇಂದ್ರದಲ್ಲಿ ಒಟ್ಟು 6183 ಜನ ನೋಂದಾಯಿಸಿಕೊಂಡಿದ್ದರು. ಈ ಪೈಕಿ 5349 ಜನ ರಾಗಿ ಮಾರಾಟ ಮಾಡಿದ್ದು, ಎರಡೂ ಕೇಂದ್ರಗಳಿಂದ ಒಟ್ಟು 38 ಕೋಟಿ, 4 ಲಕ್ಷದ 45 ಸಾವಿರದ 785 ರೂ.ಗಳ ಬಾಕಿ ಉಳಿದುಕೊಂಡಿದೆ. ಮೂರು ತಿಂಗಳುಗಳೇ ಸಂದರೂ ರೈತರ ಖಾತೆಗೆ ನಯಾ ಪೈಸೆಯನ್ನು ವರ್ಗಾಯಿಸಿಲ್ಲ. ರೈತರ ಪರವಾಗಿ ಸರ್ಕಾರವು ಕಾಳಜಿ ವಹಿಸದ ಕಾರಣ ಸರ್ಕಾರದ ಮೇಲೆ ರೈತರು ತಮ್ಮ ನಂಬಿಕೆಯನ್ನು ಕಳೆದುಕೊಂಡಿದ್ದಾರೆ.
ಜನಪ್ರತಿನಿಧಿಗಳು ಸಹ ರೈತರ ಈ ಸಮಸ್ಯೆಯ ಬಗ್ಗೆ ಕಾಳಜಿ ವಹಿಸದಿರುವುದು ಬೇಸರದ ಸಂಗತಿ. ರೈತ ಸಂಘದಿಂದ ತಾಲೂಕು ದಂಡಾಧಿಕಾರಿಗಳಿಗೆ ಮತ್ತು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರೂ ಕೂಡ ಹಣ ಬಿಡುಗಡೆ ಮಾಡಿಲ್ಲ. ರೈತರು ಕಳೆದ ಮೂರು ತಿಂಗಳಿಂದ ಹಣಕಾಸಿನ ತೊಂದರೆಯಿಂದಾಗಿ ಕೃಷಿ ಚಟುವಟಿಕೆಗಳಿಗೆ ಹಣದ ಅವಶ್ಯಕತೆ ಬೇಕಾಗುವ ಸಂದರ್ಭದಲ್ಲಿ ರೈತರಿಗೆ ಹಣ ಬಿಡುಗಡೆ ಮಾಡದೇ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದು ಖಂಡನೀಯ. ಇನ್ನೊಂದು ವಾರದೊಳಗಾಗಿ ರಾಗಿ ಖರೀದಿ ಕೇಂದ್ರಗಳಿಗೆ ಸಹಾಯಧನ ಬಿಡುಗಡೆ ಮಾಡದಿದ್ದರೆ ಮೈಸೂರು ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ನಡೆಸಲಾಗುವುದು ಎಂದು ಹೇಳಿಕೆಯಲ್ಲಿ ಎಚ್ಚರಿಸಿದ್ದಾರೆ.