* ಸಂಕಷ್ಟದಲ್ಲಿ ಅನ್ನದಾತ * ಬೆಳೆ ಪರಿಹಾರಕ್ಕೆ ಒತ್ತಾಯ
* ಮೇವೂ ಸಿಗದ ಸ್ಥಿತಿ ನಿರ್ಮಾಣ
ವಿಭೂತಿಕೆರೆ ಶಿವಲಿಂಗಯ್ಯ ರಾಮನಗರ
ಜಿಲ್ಲೆಯ ರೈತರ ಪಾಲಿಗೆ ರಾಗಿ ಬೆಳೆ ಆಶಾದಾಯಕವಾಗಿದ್ದ ಸಂದರ್ಭದಲ್ಲಿ ಹಿಂಗಾರು ಮಳೆಯು ನಷ್ಟದ ಆತಂಕ ಸೃಷ್ಟಿಸಿದೆ.
ಜಿಲ್ಲೆಯಲ್ಲಿ ರಾಗಿ ಬಿತ್ತನೆಯಾದ ನಂತರ ಕಾಲಕಾಲಕ್ಕೆ ಮಳೆಯಾಗಿದ್ದರಿಂದ ಬೆಳೆ ಉತ್ತಮವಾಗಿತ್ತು. ವಾರದಿಂದ ಸುರಿದ ಮಳೆಗೆ ಕೈಲಾಂಚ ಹೋಬಳಿಯ ಅಂಜನಾಪುರ, ಬನ್ನಿಕುಪ್ಪೆ, ಅಂಕನಹಳ್ಳಿ, ನೆಲಮಲೆ, ನಂಜಾಪುರ, ವಿಭೂತಿಕೆರೆ, ನಾಗಲಾಪುರ, ಕೈಲಾಂಚ, ತುಂಬೇನಹಳ್ಳಿ, ಹೊಸದೊಡ್ಡಿ, ಲಕ್ಕೋಜನಹಳ್ಳಿ, ಕೂಟಗಲ್ ಹೋಬಳಿಯ ದೊಡ್ಡಗಂಗವಾಡಿ, ಚಿಕ್ಕಗಂಗವಾಡಿ, ಲಕ್ಷ್ಮೀಪುರ, ವಿರುಪಸಂದ್ರ, ಅಕ್ಕೂರು ಕಸಬಾ ಹೋಬಳಿಯ ಕೆಲವು ಭಾಗಗಳಲ್ಲಿ ರಾಗಿ ಪೈರು ನೆಲ ಕಚ್ಚಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬರದ ಸನ್ನಿವೇಶ ಎದುರಾಗಿದೆ.
ಉತ್ತಮ ಮಳೆಯಾದ ಕಾರಣ ರಾಗಿ ಪೈರು ಹುಲುಸಾಗಿ ಬಂದು ತೆನೆಗಳು ನಳನಳಿಸುತ್ತಿದ್ದವು. ಕೆಲವು ರೈತರ ಜಮೀನಿನಲ್ಲಿ ರಾಗಿ ತೆನೆಗಳಲ್ಲಿ ಕಾಳುಗಳು ಬಂದಿದ್ದರೆ ಮತ್ತೆ ಕೆಲವು ತೆನೆ ಕಚ್ಚುತ್ತಿವೆ. ಇಂತಹ ಸಂದರ್ಭದಲ್ಲೇ ಮಳೆ ಆರ್ಭಟದ ಕಾರಣ ಪೈರು ಬಾಗಿ ತೆನೆ ಮಣ್ಣುಪಾಲಾಗಿ ಮೊಳಕೆ ಬಂದು ವ್ಯರ್ಥವಾಗುತ್ತಿದೆ. ಇದೇ ರೀತಿ ಮಳೆ ಮುಂದುವರಿದರೆ ಫಸಲು ಕೈ ಸೇರುವುದಿಲ್ಲ ಎಂಬುದು ರೈತರ ಆತಂಕವಾಗಿದೆ.
ರಾಮನಗರ ಜಿಲ್ಲೆಯಲ್ಲಿ 2024&25ನೇ ಸಾಲಿನಲ್ಲಿ ಜನವರಿಯಿಂದ ಅಕ್ಟೋಬರ್ವರೆಗೆ ಒಟ್ಟು ವಾಡಿಕೆ ಮಳೆ 750 ಮಿಮೀ ಇದ್ದು, ವಾಸ್ತವ 761 ಮಿ.ಮೀ ಮಳೆಯಾಗಿದೆ. ಅ.1 ರಿಂದ 25 ವರೆಗೆ ಒಟ್ಟು ವಾಡಿಕೆ ಮಳೆ 136.4 ಮಿ.ಮೀ ಇದ್ದು, ವಾಸ್ತವ 241.9 ಮಿ.ಮೀ ಮಳೆಯಾಗಿದೆ.
ಜಿಲ್ಲೆಯಲ್ಲಿ 2024&25ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಒಟ್ಟು 70,113 ಹೆಕ್ಟೇರ್ ರಾಗಿ ಬಿತ್ತನೆ ಮಾಡಲಾಗಿತ್ತು. ಈ ಪೈಕಿ ರಾಮನಗರ 6460 ಹೆ., ಚನ್ನಪಟ್ಟಣ&4788 ಹೆ. ಕನಕಪುರ 17785 ಹೆ, ಹಾರೋಹಳ್ಳಿ&7580 ಹೆ. ಹಾಗೂ ಮಾಗಡಿ&33500 ಹೆಕ್ಟೇರ್ನಲ್ಲಿ ಬಿತ್ತನೆಯಾಗಿದೆ.
ರಾಗಿ ತೆನೆಗಳು ಹೊಲಗಳಲ್ಲಿ ಕೈ ಬೀಸಿ ಕರೆದಂತಿದ್ದವು. ಇನ್ನೇನು ಕೆಲವೇ ದಿನಗಳಲ್ಲಿ ಕಟಾವಿಗೆ ಬರುವ ಅಂದಾಜಿತ್ತು. ಆದರೆ, ಮಹಾಮಳೆ ರಾಗಿ ಫಸಲಿಗೆ ಸಮಸ್ಯೆ ಉಂಟುಮಾಡಿದೆ. ಪೈರು ನೆಲಕಚ್ಚಿದ್ದು, ಜಾನುವಾರಿಗೆ ಮೇವೂ ಸಿಗದ ಸನ್ನಿವೇಶ ಎದುರಾಗಿದೆ. ಸರ್ಕಾರ ರೈತರಿಗೆ ಬೆಳೆ ಪರಿಹಾರ ನೀಡಬೇಕು. ಚನ್ನಮಾನಹಳ್ಳಿ ಅಪ್ಪಾಜಣ್ಣ, ತಾಲೂಕು ಕೃಷಿಕ ಸಮಾಜ ಅಧ್ಯಕ್ಷಮಳೆಹಾನಿಯಿಂದ ರಾಗಿ ಫಸಲು ಹಾಳಾಗಿದೆ ಎಂದು ರೈತರಿಂದ ದೂರು ಬರುತ್ತಿವೆ. ಹೊಲಗಳಿಗೆ ಭೇಟಿ ನೀಡಿ ಕಂದಾಯ ಮತ್ತು ಕೃಷಿ ಇಲಾಖೆಯ ಅಧಿಕಾರಿಗಳಿಂದ ಜಂಟಿ ಸಮೀೆ ನಡೆಸಿ ಸರ್ಕಾರಕ್ಕೆ ವರದಿ ನೀಡಲಾಗುತ್ತದೆ.> ಎಚ್.ಆರ್. ಪ್ರಮೋದ್ಕುಮಾರ್, ಸಹಾಯಕ ನಿರ್ದೇಶಕ, ಕೃಷಿ ಇಲಾಖೆ, ರಾಮನಗರ.