ಜಿಲ್ಲೆ

ಕೃಷಿಕರ ಕೈ ಹಿಡಿದ ರಾಗಿ ಬೆಳೆ

ಕೋಲಾರ ಡೆಸ್ಕ್

ಕೋಲಾರ: ಜಿಲ್ಲೆಯಲ್ಲಿ ಈ ಬಾರಿ ಮುಂಗಾರು ಕೈಕೊಟ್ಟರೂ ಹಿಂಗಾರು ಮಳೆ ಕೈಹಿಡಿದ ಕಾರಣ ರಾಗಿ, ತೊಗರಿ, ಅವರೆ ಬೆಳೆಗಳು ರೈತನ ಕೈಹಿಡಿದಿವೆ. ನೆಲಗಡಲೆ ಮಾತ್ರ ಶೇ.50 ಬೆಳೆದರೆ, ಅವರೆ ಇತ್ತೀಚೆಗೆ ಜಿಲ್ಲೆಯಲ್ಲಿ ಪ್ರಮುಖ ಬೆಳೆಯಾಗಿದ್ದು, ಮಾರುಕಟ್ಟೆ ವ್ಯವಸ್ಥೆ ಇಲ್ಲದೆ ರೈತರು ಪರದಾಡುವಂತಾಗಿದೆ.

ರಾಗಿ ಬೆಳೆ ಇನ್ನೇನು ಕಟಾವಿಗೆ ಸಿದ್ಧವಾಗಿದ್ದು, ಉಳಿದಂತೆ ತೊಗರಿ ಕಾಯಿ ಕಚ್ಚುತ್ತಿದೆ. ಅವರೆ ಹೂವು ಬಂದಿದ್ದು, 15 ದಿನದೊಳಗೆ ಕಾಯಿ ಕಚ್ಚಲಿದೆ. ಸಂಕ್ರಾಂತಿ ವೇಳೆಗೆ ಅವರೇಕಾಯಿ ಸುಗ್ಗಿಯೂ ಕಾಣಿಸಿಕೊಳ್ಳಲಿದೆ.

ಆಗಸ್ಟ್​ ಮತ್ತು ಅಕ್ಟೋಬರ್​ನಲ್ಲಿ ಮಳೆ ಕೈಕೊಟ್ಟ ಕಾರಣ ರಾಗಿ ಬೆಳೆ ಒಣಗಿತ್ತು. ಇದರಿಂದ ಪೂರ್ಣ ಪ್ರಮಾಣದ ಬೆಳೆ ಕಾಣಲು ಸಾಧ್ಯವಾಗಲಿಲ್ಲ. ಶೇ.65&70ರಷ್ಟು ಬೆಳೆ ರೈತನ ಕೈಗೆ ಸಿಗುವಂತಾಗಿದೆ. ಪ್ರಾರಂಭದಲ್ಲಿ ಬಿತ್ತಿದ ರಾಗಿ ತೆನೆ ಕೊಯ್ಯವ ಹಂತಕ್ಕೆ ಬಂದಿದ್ದು, ಕೆಲವು ರೈತರು ಈಗಾಗಲೇ ತೆನೆ ಕಟಾವು ಮಾಡುತ್ತಿದ್ದಾರೆ. ಹಿಂಗಾರು ಮಳೆಗೆ ಬಿತ್ತನೆ ಮಾಡಿರುವ ರಾಗಿ ಬೆಳೆಗೆ ಸ್ವಲ್ಪ ಹಿನ್ನಡೆಯಾಗಿದ್ದು, ಇನ್ನು ಸ್ವಲ್ಪ ಮಳೆ ಬೇಕಾಗಿದ್ದರೂ ಮಂಜು ಮತ್ತು ಚಳಿ ಬೀಳುತ್ತಿರುವುದರಿಂದ ಪೂರ್ಣಪ್ರಮಾಣದ ಬೆಳೆಯಾಗಲಿದೆ ಎಂದು ರೈತರು ಹರ್ಷ ವ್ಯಕ್ತಪಡಿಸಿದ್ದಾರೆ.

ತೊಗರಿ ಬೆಳೆಯಲ್ಲಿ ಈಗಾಗಲೇ ಕಾಯಿ ಕಾಣಿಸಿಕೊಂಡಿದ್ದು, ಮಳೆ ಇಲ್ಲದಿದ್ದರೂ ಭೂಮಿಯಲ್ಲಿ ತೇವಾಂಶ ಇರುವ ಕಾರಣ ಇರುವ ಕಾಯಿ ರೈತನ ಕೈಗೆ ಸಿಗಲಿದೆ. ಮಳೆ ಬಂದರೂ ಪರವಾಗಿಲ್ಲ, ಬರದಿದ್ದರೂ ಇರುವ ಹೂವು ಮತ್ತು ಕಾಯಿ ರೈತನ ಕೈಗೆ ಸಿಗಲಿದೆ. ಶೇ.80 ಫಸಲು ಕಾಣಬಹುದಾಗಿದೆ.

ಅವರೆ ಗಿಡಕ್ಕೆ ಮಳೆ ಇಲ್ಲದಿದ್ದರೂ ತೇವಾಂಶ, ಮಂಜು ಮತ್ತು ಚಳಿಗೆ ಹೂವು ಕಾಯಿ ಕಚ್ಚಿಕೊಳ್ಳುತ್ತದೆ. ಚಳಿ ಹೆಚ್ಚಾದಷ್ಟು ಅವರೆ ಗಿಡದಲ್ಲಿ ಹೆಚ್ಚು ಫಸಲು ನಿರೀಸಬಹುದು. ಜಿಲ್ಲೆಯಲ್ಲಿ ರಾಗಿಯಷ್ಟೇ ಅವರೇಕಾಯಿಯನ್ನೂ ಇತ್ತೀಚೆಗೆ ಹೆಚ್ಚಾಗಿ ಬೆಳೆಯುತ್ತಿರುವುದು ವಿಶೇಷ.

ಮಾರುಕಟ್ಟೆ ವ್ಯವಸ್ಥೆ ಇಲ್ಲ

ಜಿಲ್ಲೆಯಲ್ಲಿ ಅವರೆಕಾಯಿ ಹೆಚ್ಚು ಪ್ರಮಾಣದಲ್ಲಿ ಬೆಳೆಯುತ್ತಿದ್ದರೂ ಜಿಲ್ಲಾಡಳಿತ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿಲ್ಲ. ಶ್ರೀನಿವಾಸಪುರ ತಾಲೂಕಿನಲ್ಲಿ ಹೆಚ್ಚಾಗಿ ಅವರೆಕಾಯಿ ಬೆಳೆಯುತ್ತಿದ್ದು, ಹೊಸಕೋಟೆ, ಕೆಜಿಎಫ್​, ಬೆಂಗಳೂರು ಮುಂತಾದ ಕಡೆಗೆ ಅವರೇಕಾಯಿ ರ್ತು ಮಾಡಲಾಗುತ್ತದೆ. ಆದರೆ ರೈತರಿಗೆ ಮಾರುಕಟ್ಟೆ ವ್ಯವಸ್ಥೆ ಇಲ್ಲದೆ ಪರದಾಡುವಂತಾಗಿದೆ.

ಜಿಲ್ಲೆಯಲ್ಲಿ 60 ಸಾವಿರ ಹೆಕ್ಟೇರ್​ ಪ್ರದೇಶದಲ್ಲಿ ಈ ಬಾರಿ ರಾಗಿ ಬೆಳೆಯಲಾಗಿದೆ. ಅವರೆ ಬೆಳೆಯು ಸುಮಾರು 10 ಸಾವಿರ ಹೆಕ್ಟೇರ್​ ಪ್ರದೇಶದಲ್ಲಿ ಬೆಳೆಯಲಾಗಿದೆ. ಇದರ ಮಧ್ಯೆ ತೊಗರಿ 2.109 ಹೆಕ್ಟೇರ್​ ಮತ್ತು ನೆಲಗಡಲೆ ಬೆಳೆ ಬೆಳೆಯಲಾಗಿದೆ.

"ರಾಗಿ, ನೆಲಗಡಲೆ, ತೊಗರಿ ಬೆಳೆಗೆ ಆಗಸ್ಟ್​ನಲ್ಲಿ ಮಳೆ ಹಿನ್ನಡೆಯಾದ ಕಾರಣ ಪೂರ್ಣಪ್ರಮಾಣದಲ್ಲಿ ಬೆಳೆಯಾಗಲಿಲ್ಲ. ಆದರೂ ರಾಗಿ ರೈತನ ಕೈ ಹಿಡಿದಿದೆ. ಅಕ್ಟೋಬರ್​ನಲ್ಲಿ ಇಲಾಖೆಯಿಂದ ಸರ್ವೇ ಮಾಡಿದಾಗ ಶೇ.60 ಬೆಳೆಯಲಾಗಿದೆ ಎಂದು ವರದಿ ನೀಡಲಾಗಿತ್ತು. ಕೊನೇ ಮಳೆಯಿಂದ ಸ್ವಲ್ಪಮಟ್ಟಿಗೆ ರಾಗಿ ಬೆಳೆ ಚೇತರಿಸಿಕೊಂಡಿದೆ. ಈಗ ಶೇ.65&70 ಫಸಲು ರೈತನ ಕೈಗೆ ಸಿಗಲಿದೆ. ಉಳಿದಂತೆ ತೊಗರಿ ಮತ್ತು ಅವರೇ ಶೇ.80 ಬೆಳೆ ಬರುವ ನಿರೀಕ್ಷೆ ಇದೆ."

 -ನಾಗರಾಜ್​ರೆಡ್ಡಿ, ಉಪನಿರ್ದೇಶಕ, ಕೃಷಿ ಇಲಾಖೆ, ಕೋಲಾರ

"ರಾಗಿ ಬೆಳೆ ಕಟಾವಿಗೆ ಬರುತ್ತಿದೆ. ರೈತರು ಆತುರಪಡದೇ ತೆನೆ ಮಾತ್ರ ಕಟಾವು ಮಾಡಿಕೊಂಡು ಒಣಗಿಸಿ ರಾಗಿ ಮಾಡುವ ಯಂತ್ರಕ್ಕೆ ಕೊಟ್ಟರೆ ರಾಗಿ ಗುಣಮಟ್ಟವಾಗಿರುತ್ತದೆ. ಮಾರುಕಟ್ಟೆಯಲ್ಲಿ ಉತ್ತಮ ಬೆಲೆಯೂ ಬರುತ್ತದೆ. ಕಟಾವು ಮಾಡಲು ಕೂಲಿ ಹೆಚ್ಚಾಗುತ್ತದೆಂದು ಕಟಾವು ಮಾಡುವ ಯಂತ್ರಗಳ ಮೊರೆ ಹೋದರೆ ಗುಣಮಟ್ಟದ ರಾಗಿ ಪಡೆಯಲು ಸಾಧ್ಯವಾಗುವುದಿಲ್ಲ."

> -ಚಂದ್ರಶೇಖರ್​, ನೆನುಮನಹಳ್ಳಿ, ಪ್ರಗತಿಪರ ರೈತ