ಜಿಲ್ಲೆ

ಬಾಡಲಾರಂಭಿಸಿದೆ ರಾಗಿ ಬೆಳೆ

ನಾಗೇಶ ಎಸ್

ಹಿರೀಸಾವೆ: ಬಿತ್ತನೆಗೊಂಡ ಪ್ರಾರಂಭದಿಂದಲೂ ಇದುವರೆಗೂ ವಾಡಿಕೆಯಂತೆ ಮಳೆಯಾಗದ ಪರಿಣಾಮ ರಾಗಿ ಬೆಳೆ ಬಾಡಲಾರಂಭಿಸಿದ್ದು, ರೈತ ವರ್ಗ ಸಂಕಷ್ಟಕ್ಕೆ ಸಿಲುಕಿದೆ.

ಪೂರ್ವ ಮುಂಗಾರಿನಿಂದಲೂ ವಾಡಿಕೆಯಂತೆ ಮಳೆಯಾಗದ ಕಾರಣ ಮುಂಗಾರು ಹಂಗಾಮಿನ ಯಾವುದೇ ಬೆಳೆಗಳು ಬಿತ್ತನೆ ಕಾಣಲಿಲ್ಲ. ಜುಲೈ ತಿಂಗಳಲ್ಲಿ ತಕ್ಕಮಟ್ಟಿಗೆ ಮಳೆ ಸುರಿದು ಭೂಮಿ ತಕ್ಕಮಟ್ಟಿಗೆ ಹದವಾಗಿದ್ದ ಹಿನ್ನೆಲೆಯಲ್ಲಿ ರೈತರು ಆಶಾಭಾವನೆಯಿಂದ ರಾಗಿ ಬಿತ್ತನೆ ಮಾಡಿದ್ದರು. ಆದರೆ, ನಂತರ ಮಳೆರಾಯನ ಕಣ್ಣಾಮುಚ್ಚಾಲೆಯಿಂದ ರಾಗಿ ಬೆಳೆ ಬೆಳವಣಿಗೆ ಕಾಣಲಿಲ್ಲ. ಸದ್ಯ ಮಳೆಯ ಕೊರತೆಯಿಂದ ಒಣಗುತ್ತಿದೆ.

ಕಳೆದ ವರ್ಷ ಪೂರ್ವ ಮುಂಗಾರಿನಿಂದಲೂ ಸತತ 5-6 ತಿಂಗಳ ಕಾಲ ಮಳೆ ಸುರಿದಿದ್ದರಿಂದ ಅತಿವೃಷ್ಟಿ ಎದುರಾಗಿ ಯಾವುದೇ ಬೆಳೆಗಳು ರೈತನ ಕೈ ಸೇರಲಿಲ್ಲ. ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದು, ಬೆಳೆ ನೀರು ಪಾಲಾಯಿತು. ಆದರೆ ಈ ಬಾರಿ ಬರ ಬಲಗಾಲಿಟ್ಟು ಬರುತ್ತಿದೆ. ಹೋಬಳಿಯು ಸುಮಾರು 5,200 ಹೆಕ್ಟೇರ್ ಕೃಷಿ ಪ್ರದೇಶ ಹೊಂದಿದೆ. ಇತ್ತೀಚಿನ ವರ್ಷಗಳಿಂದ ಬೋರೆ ಪ್ರದೇಶಗಳಲ್ಲಿಯೂ ಕೊಳವೆಬಾವಿಗಳ ಆಶ್ರಯದಲ್ಲಿ ತೆಂಗಿನ ಸಸಿಗಳನ್ನು ನೆಡಲಾಗುತ್ತಿದ್ದು, ರಾಗಿ ಬೆಳೆಯುವ ಖುಷ್ಕಿ ಜಮೀನು ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ.

ಜುಲೈ ತಿಂಗಳ ಕೊನೆಯ ವಾರ ಹಾಗೂ ಆಗಸ್ಟ್ ಮೊದಲ ವಾರ ಶೇ.55 ರಷ್ಟು ಕೃಷಿ ಪ್ರದೇಶದಲ್ಲಿ ರಾಗಿ ಬಿತ್ತನೆ ಕಂಡಿತ್ತು. ಬಳಿಕ ಮಳೆ ಕೊರತೆ ಎದುರಾಯಿತು. ಸೆಪ್ಟೆಂಬರ್ ತಿಂಗಳ ಕೊನೆಯಲ್ಲಿ ಸುರಿದ ತಕ್ಕಮಟ್ಟಿನ ಮಳೆಯ ಹದದಲ್ಲಿ ಶೇ.25 ರಷ್ಟು ಜಮೀನಿನಲ್ಲಿ ರಾಗಿ ಬಿತ್ತನೆಗೊಂಡಿತು. ನಂತರವೂ ಮಳೆಯ ಕಣ್ಣಾಮುಚ್ಚಾಲೆ ಮುಂದುವರಿದಿದ್ದರಿಂದ ಉಳಿದ ಶೇ.20 ರಷ್ಟು ಜಮೀನಲ್ಲಿ ಇಬ್ಬನಿ ಜೋಳ, ಸಂಬಾರ, ಕಡ್ಲೆ ಹಾಗೂ ಕಡಿಮೆ ಅವಧಿಯ ವಿವಿಧ ಬೆಳೆಗಳು ತಡವಾಗಿ ಬಿತ್ತನೆ ಕಂಡಿವೆ.

ಮೊದಲ ಹಂತದಲ್ಲಿ ಬಿತ್ತನೆ ಕಂಡಿದ್ದ ರಾಗಿಬೆಳೆ ಈಗಾಗಲೇ ಫಸಲು ಹಿಡಿದಿದ್ದು, ಮಳೆ ಕೊರತೆ ಎದುರಾಗಿರುವ ಪರಿಣಾಮ ಹುಲ್ಲು ಸಮೇತ ತೆನೆ ಬಾಡಲಾರಂಭಿಸಿದೆ. ಎರಡನೇ ಹಂತದಲ್ಲಿ ಬಿತ್ತನೆಗೊಂಡಿದ್ದ ರಾಗಿ ಬೆಳೆ ಇನ್ನೂ ಫಸಲು ಹಿಡಿಯಲು ಸಮಯದ ಜತೆಗೆ ಸಾಕಷ್ಟು ಮಳೆ ಬೇಕಿದೆ.
ಇನ್ನು ಕೊಳವೆಬಾವಿ ಹೊಂದಿರುವ ರೈತರು ಜೆಟ್ ಸಿಸ್ಟಂ(ತುಂತುರು ನೀರಾವರಿ ವ್ಯವಸ್ಥೆ) ಅಳವಡಿಸಿ ರಾಗಿ ಬೆಳೆಗೆ ನೀರಾಯಿಸಿರುವುದರಿಂದ ನಿರೀಕ್ಷೆ ಮೀರಿದಂತೆ ಬೆಳವಣಿಗೆ ಕಂಡು ಉತ್ತಮ ಫಸಲು ಹಿಡಿದು ನಳನಳಿಸುತ್ತಿದೆ. ಆದರೆ ಕೊಳವೆಬಾವಿ ಇಲ್ಲದೆ ಮಳೆ ಆಶ್ರಯದಲ್ಲಿ ಬಿತ್ತನೆ ಕಂಡಿರುವ ಹಲವು ರೈತರ ಬೆಳೆಗಳು ತೇವಾಂಶದ ಕೊರತೆಯಿಂದ ನೆಲ ಹಿಡಿದಿವೆ.

ಪೂರ್ವ ಮುಂಗಾರಿನಿಂದಲೂ ಮಳೆ ಕಣ್ಣಾಮುಚ್ಚಾಲೆಯಾಡಿದ ಹಿನ್ನೆಲೆಯಲ್ಲಿ ಬಹುತೇಕ ಮಂದಿ ರೈತರು ಮುಂಜಾಗ್ರತೆ ವಹಿಸಿ ರಾಗಿ ಬೆಳೆಗೆ ವಿಮೆ ಮಾಡಿಸುವ ಮೂಲಕ ಸದ್ಯ ಮಾಡಿರುವ ಖರ್ಚು-ವೆಚ್ಚದ ಸುಮಾರು ಒಂದಷ್ಟು ಪರಿಹಾರದ ಹಣ ಮುಂದೊಂದು ದಿನ ಸಿಗಬಹುದೆಂದು ನಿಟ್ಟುಸಿರು ಬಿಟ್ಟಿದ್ದಾರೆ.

ಪೂರ್ವ ಮುಂಗಾರಿನಿಂದಲೂ ಮಳೆ ಸಂಪೂರ್ಣವಾಗಿ ಕೈಕೊಟ್ಟಿರುವ ಪರಿಣಾಮ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲನೆಯೊಂದಿಗೆ ಸರ್ಕಾರದ ಗಮನ ಸೆಳೆದು ರಾಗಿ ಹಾಗೂ ಇತರ ಬೆಳೆಗಳಿಗೆ ಅಗತ್ಯ ಪರಿಹಾರ ಕಲ್ಪಿಸಲು ಮುಂದಾಗಬೇಕು ಎಂಬುದು ಹೋಬಳಿ ವ್ಯಾಪ್ತಿಯ ರೈತರ ಆಗ್ರಹವಾಗಿದೆ.