ಗುಡಿಬಂಡೆ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘದಿಂದ ಕೆಎಂಎಫ್ ಶಿಬಿರ ಕಚೇರಿ ಮುಂದೆ ಪ್ರತಿಭಟಿಸಿ ಉಪವ್ಯವಸ್ಥಾಪಕಿ ಡಾ.ನವ್ಯಶ್ರೀ ಅವರ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಲಾಯಿತು. ರೈತ ಸಂಘದ ಜಿಲ್ಲಾಧ್ಯಕ್ಷ ಮುನಿಕೃಷ್ಣಪ್ಪ ಮಾತನಾಡಿ, ಉತ್ಪಾದಕರಿಂದ ಖರೀದಿಸುವ ಪ್ರತಿ ಲೀಟರ್ ಹಾಲಿನ ಬೆಲೆಯನ್ನು 31ರೂ.ಗಳಿಂದ 50 ರೂ.ಗಳಿಗೆ ಏರಿಕೆ ಮಾಡಬೇಕು, ಈಗಾಗಲೇ ಬಾಕಿ ಇರುವ ಪ್ರೋತ್ಸಾಹಧನ ಬಿಡುಗಡೆ ಮತ್ತು ಪ್ರೋತ್ಸಾಹಧನವನ್ನು 5ರೂ.ನಿಂದ 10 ರೂ.ಗೆ ಏರಿಕೆ, ಗೋಹತ್ಯೆ ನಿಷೇಧ ಕಾಯ್ದೆ ಹಿಂಪಡೆಯಬೇಕು, ಹಾಲು ಉತ್ಪಾದಕರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಜಿಲ್ಲೆಗೊಂದು ವಸತಿ ನಿಲಯ ಪ್ರಾರಂಭಿಸಿ ವಿದ್ಯಾರ್ಥಿವೇತನ ಸೌಲಭ್ಯ ಕಲ್ಪಿಸಬೇಕು, ಮರಣ ಹೊಂದಿರುವ ಹಸುಗಳಿಗೆ ವಿಮಾ ಸೌಲಭ್ಯದ ಹಣವನ್ನು ಕೂಡಲೇ ನೀಡಬೇಕು, ಹೈನುಗಾರಿಕೆ ಯಂತ್ರೋಪಕರಣಗಳಿಗೆ ನಿಗದಿಪಡಿಸಿರುವ ಜಿಎಸ್‌ಟಿ ವಾಪಸ್ ಪಡೆಯಬೇಕು, ರಿಯಾಯಿತಿ ದರದಲ್ಲಿ ಪಶು ಆಹಾರ ನೀಡಬೇಕು ಎಂದು ಒತ್ತಾಯಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಶಿಬಿರ ಕಚೇರಿ ಉಪ ವ್ಯವಸ್ಥಾಪಕಿ ಡಾ. ನವ್ಯಶ್ರೀ, ನಿಮ್ಮ ಮನವಿಯನ್ನು ಮೇಲಧಿಕಾರಿಗಳಿಗೆ ರವಾನಿಸಲಾಗುವುದು ಎಂದರು. ಪ್ರತಿಭಟನೆಗೂ ಮುನ್ನ ಪಟ್ಟಣದ ಮುಖ್ಯರಸ್ತೆಯಲ್ಲಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಮೆರವಣಿಗೆ ನಡೆಯಿತು.
ರೈತ ಸಂಘದ ತಾಲೂಕು ಕಾರ್ಯದರ್ಶಿ ಆದಿನಾರಾಯಣಸ್ವಾಮಿ, ಮುಖಂಡರಾದ ವೆಂಕಟರಾಜು, ರಾಜಪ್ಪ, ಸೀನಪ್ಪ, ದೇವರಾಜು, ರಮಣ, ಸೋಮಶೇಖರರೆಡ್ಡಿ, ಶಿವಪ್ಪ, ಗಂಗರಾಜು, ಪುರುಷೋತ್ತಮ, ನರೇಂದ್ರ ರೆಡ್ಡಿ ಇತರರು ಇದ್ದರು.
ಮಾರಕ ಕಾನೂನು ಹಿಂಪಡೆಯಲಿ
ಮುಖಂಡ ಜಯರಾಮರೆಡ್ಡಿ ಮಾತನಾಡಿ, ಕೃಷಿ ಉತ್ಪನ್ನ ಮಾರುಕಟ್ಟೆಗಳಿಂದ ಆಗುತ್ತಿರುವ ಅನ್ಯಾಯದಿಂದ ನಷ್ಟಕ್ಕೆ ಗುರಿಯಾಗಿರುವ ರೈತರು ಹೈನುಗಾರಿಕೆಯತ್ತ ಮುಖ ಮಾಡಿದರೆ, ಇಲ್ಲಿಯೂ ದಿನದಿಂದ ದಿನಕ್ಕೆ ಬದುಕು ಭಾರವಾಗುತ್ತಿದೆ. ಜಾನುವಾರು ಹತ್ಯೆ ನಿಷೇಧ ಕಾಯ್ದೆಯಿಂದ ಹೈನುಗಾರಿಕೆ ಮತ್ತು ಪಶುಸಂಗೋಪನೆ ಕ್ಷೇತ್ರವನ್ನು ಸರ್ಕಾರ ರೈತರಿಂದ ಕಿತ್ತು ಕಾರ್ಪೋರೇಟ್ ಕಂಪನಿಗಳಿಗೆ ಒಪ್ಪಿಸಲು ಮುಂದಾಗಿದೆ. ಈ ಕಾಯ್ದೆಯಿಂದಾಗಿ ಹಾಲು ನೀಡದ ಹಸುಗಳು, ಗಂಡು ಕರುಗಳು ಮತ್ತು ವಯಸ್ಸಾದ ದನಗಳನ್ನು ಮಾರಾಟ ಮಾಡುವಂತಿಲ್ಲ. ಇಂತಹ ಕಾನೂನುಗಳಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಕೂಡಲೇ ರೈತರಿಗೆ ಮಾರಕವಾಗಿರುವ ಕಾನೂನುಗಳನ್ನು ತೆಗೆದುಹಾಕಿ ರೈತರಿಗೆ ಅನುಕೂಲವಾಗುವಂತಹ ಕಾನೂನುಗಳನ್ನು ರೂಪಿಸಬೇಕು ಎಂದು ಒತ್ತಾಯಿಸಿದರು.