ಪಾಂಡವಪುರ: ಮನ್‌ಮುಲ್ ಒಕ್ಕೂಟವು ಹಾಲು ಮಾರುಕಟ್ಟೆಯನ್ನು ದೆಹಲಿ ಮಾರುಕಟ್ಟೆಯವರೆಗೂ ವಿಸ್ತರಣೆ ಮಾಡಲು ಮುಂದಾಗಿದ್ದೇವೆ ಎಂದು ಮನ್‌ಮುಲ್ ಅಧ್ಯಕ್ಷ ಬೋರೇಗೌಡ ಹೇಳಿದರು.
ತಾಲೂಕಿನ ಕ್ಯಾತನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಬಿಎಂಸಿ ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹಾಲಿನ ಗುಣಮಟ್ಟವನ್ನು ಕಾಪಾಡುವ ಉದ್ದೇಶದಿಂದ ಡೇರಿಗಳಲ್ಲಿ ಬಿಎಂಸಿ ಕೇಂದ್ರಗಳನ್ನು ಆರಂಭಿಸಲಾಗಿದೆ. ಒಕ್ಕೂಟಕ್ಕೆ 11 ಲಕ್ಷ ಲೀ.ಗೂ ಅಧಿಕ ಹಾಲು ಪೂರೈಕೆಯಾಗುತ್ತಿದ್ದು, ಮಾರುಕಟ್ಟೆ ವಿಸ್ತರಣೆ ಮಾತ್ರ ಕಡಿಮೆ ಇದೆ. ಇದರಿಂದಾಗಿ ಒಕ್ಕೂಟಕ್ಕೆ ನಷ್ಟವಾಗುತ್ತಿದೆ. ಆದ್ದರಿಂದ ಮನ್‌ಮುಲ್ ಒಕ್ಕೂಟವು ಹಾಲು ಮಾರುಕಟ್ಟೆಯನ್ನು ದೆಹಲಿ ಮಾರುಕಟ್ಟೆವರೆಗೂ ವಿಸ್ತರಣೆ ಮಾಡಲು ಮುಂದಾಗಿದೆ. ಮುಂದಿನ ತಿಂಗಳಿಂದ ನಮ್ಮ ಹಾಲನ್ನು ದೆಹಲಿ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುವುದು ಎಂದರು.
ಡೇರಿಗಳಲ್ಲಿ ಆನ್‌ಲೈನ್ ಅವಳಡಿಕೆ ಮಾಡಿಕೊಳ್ಳಬೇಕು, ರೈತರಿಗೆ ಹಾಲಿನ ಫ್ಯಾಟ್ ಮೇಲೆ ದರ ನಿಗದಿಪಡಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕು. ಕಾಮನ್ ಸಾಫ್ಟ್‌ವೇರ್ ಅಳವಡಿಕೆ ಮಾಡಿಕೊಂಡರೆ ಯಂತ್ರವೇ ಹಾಲಿನ ಫ್ಯಾಟ್, ದರ ನಿಗದಿಪಡಿಸಲಿದೆ. ರೈತರು ಕಡ್ಡಾಯವಾಗಿ ರಾಸುಗಳಿಗೆ ವಿಮೆ ಮಾಡಿಸಬೇಕು. ಡೇರಿಗಳಲ್ಲಿ ರಾಸು ಅಭಿವೃದ್ಧಿಯಲ್ಲಿ ಹಣವಿದ್ದರೆ ಆ ಹಣದಲ್ಲಿ ರಾಸುಗಳಿಗೆ ವಿಮೆ ಮಾಡಿಸಿ ಎಂದು ತಿಳಿಸಿದರು.
ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಾತನಾಡಿ, ಹಾಲು ಪೂರೈಕೆಯಲ್ಲಿ ಡಿಂಕಾ ಡೇರಿ ತಾಲೂಕಿಗೆ ಮೊದಲ ಸ್ಥಾನದಲ್ಲಿದೆ. ಕ್ಯಾತನಹಳ್ಳಿ ಗ್ರಾಮ ತಾಲೂಕಿಗೆ ದೊಡ್ಡ ಗ್ರಾಮವಾಗಿದ್ದರೂ ಹಾಲು ಉತ್ಪಾದನೆ ಕಡಿಮೆ ಇದೆ. ಮುಂದಿನ ದಿನಗಳಲ್ಲಿ ರೈತರು ಅಧಿಕ ಹಾಲು ಉತ್ಪಾದನೆ ಕಡೆಗೆ ಗಮನಹರಿಸಬೇಕು ಎಂದರು.
ಮನ್‌ಮುಲ್ ನಿರ್ದೇಶಕ ಕಾಡೇನಹಳ್ಳಿ ರಾಮಚಂದ್ರು ಮಾತನಾಡಿ, ನಾನು ನಿರ್ದೇಶಕನಾದ ಬಳಿಕ 11 ಹೊಸ ಬಿಎಂಸಿ ಕೇಂದ್ರಗಳನ್ನು ಆರಂಭಿಸಿದ್ದೇನೆ. ಕೊನೆ ಸ್ಥಾನದಲ್ಲಿ ಹಾಲಿನ ಗುಣಮಟ್ಟವನ್ನು ಜಿಲ್ಲೆಗೆ ಎರಡನೇ ಸ್ಥಾನಕ್ಕೆ ತಂದಿದ್ದೇನೆ. ತಾಲೂಕಿನಲ್ಲಿರುವ 147 ಡೇರಿಗಳು ಸಹ ನನ್ನ ಕುಟುಂಬ ಇದ್ದಂತೆಯೇ. ಡೇರಿಗೆ ಪ್ರತಿಯೊಬ್ಬರೂ ಗುಣಮಟ್ಟದ ಹಾಲು ಪೂರೈಕೆ ಮಾಡಬೇಕು. ಕಡ್ಡಾಯವಾಗಿ ಫ್ಯಾಟ್ ಮೇಲೆ ದರ ನಿಗದಿಪಡಿಸಿ, ಕಳಪೆ ಗುಣಮಟ್ಟದ ಹಾಲು ಯಾರೇ ಹಾಕಿದರೂ ವಾಪಸ್ ಕಳುಹಿಸಿ ಎಂದು ಸಲಹೆ ನೀಡಿದರು.
ವ್ಯವಸ್ಥಾಪಕ ನಿರ್ದೇಶಕ ಪಿ.ಆರ್.ಮಂಜೇಶ್ ಮಾತನಾಡಿ, ಜಿಲ್ಲೆಯ ಹಲವು ಉತ್ತಮ ಡೇರಿಗಳಲ್ಲಿ ಕ್ಯಾತನಹಳ್ಳಿ ಡೇರಿಯೂ ಒಂದಾಗಿದೆ. ಡೇರಿಗಳಲ್ಲಿ ಎಲ್ಲರೂ ಕಡ್ಡಾಯವಾಗಿ ಆನ್‌ಲೈನ್ ವ್ಯವಸ್ಥೆ ಮಾಡಿಕೊಳ್ಳಬೇಕು. ಜಿಲ್ಲೆಯ 200 ಡೇರಿಗಳಲ್ಲಿ ಡಿಜಿಟಲ್ ವ್ಯವಸ್ಥೆ ಮಾಡಲಾಗಿದ್ದು ಪಾಂಡವಪುರ ತಾಲೂಕಿನ ಚಿಕ್ಕಬ್ಯಾಡರಹಳ್ಳಿ ಡೇರಿ ಮೂಲಕವೇ ಡಿಜಿಟಲ್ ವ್ಯವಸ್ಥೆಗೆ ಚಾಲನೆ ನೀಡಲಾಗಿದೆ. ಹಾಲಿನ ಪೌಡರ್‌ಗೆ ಮಾರುಕಟ್ಟೆಯಲ್ಲಿ ಬೆಲೆ ಕಡಿಮೆಯಾಗಿರುವುದರಿಂದ ಒಕ್ಕೂಟಕ್ಕೆ ನಷ್ಟವಾಗುತ್ತಿದೆ. ಅದಕ್ಕಾಗಿಯೇ ಒಕ್ಕೂಟವು ಹಾಲನ್ನು ದೆಹಲಿ ಮಾರುಕಟ್ಟೆಗೂ ತೆಗೆದುಕೊಂಡು ಹೋಗಲು ನಿರ್ಧರಿಸಿದೆ ಎಂದು ತಿಳಿಸಿದರು.
ಮನ್‌ಮುಲ್ ಉಪವ್ಯವಸ್ಥಾಪಕ ಆರ್.ಪ್ರಸಾದ್, ಸಹಾಯಕ ವ್ಯವಸ್ಥಾಪಕ ಪ್ರಪೂಲ್, ಮಾರ್ಗವಿಸ್ತರಣಾಧಿಕಾರಿಗಳಾದ ಉಷಾ, ನಾಗೇಂದ್ರ, ಟಿಕ್ನಿಷಿಯನ್ ಆನಂದ್, ಡೇರಿ ಅಧ್ಯಕ್ಷ ಮಹದೇವು, ಉಪಾಧ್ಯಕ್ಷ ಎಲ್.ಮೋಹನ್‌ಕುಮಾರ್, ರೈತ ಮುಖಂಡ ದಯಾನಂದ, ಡಾ.ಕೆ.ವೈ.ಶ್ರೀನಿವಾಸ್, ನಿರ್ದೇಶಕರಾದ ಚೇತನ್, ಕೆ.ವಿನೋದ್, ಆನಂದಮೂರ್ತಿ, ಕೆ.ಎಸ್.ಗಿರೀಶ್, ಕೆ.ಎಸ್.ರವಿ, ಕೆ.ಎಂ.ದೇವರಾಜು, ಎಂ.ಸೋಮಶೇಖರ್, ಬಿ.ಎನ್.ಆಶಾ, ಲಕ್ಷ್ಮಮ್ಮ, ಕೆ.ಪಿ.ಅನಿಲ್‌ಕುಮಾರ್, ಕಾರ್ಯದರ್ಶಿ ಕೆ.ಆರ್.ವಿಶ್ವನಾಥ್, ಸಿಬ್ಬಂದಿ ಕೆ.ಪಿ.ಸಚ್ಚಿನ್, ಸಂಜಯ್‌ಗೌಡ, ಶ್ರೀಧರ ಸೇರಿದಂತೆ ಹಲವರು ಇದ್ದರು.