ಜಿಲ್ಲೆ

ಕೊಳಚೆ ಪ್ರದೇಶಗಳ ಜನರಿಗೆ ಉಚಿತ ಹಾಲು

ತುಮಕೂರು: ಕರೊನಾ ಭೀತಿ ಹಿನ್ನೆಲೆಯಲ್ಲಿ ಲಾಕ್‌ಡೌನ್ ಜಾರಿಯಾಗಿದ್ದು, ಜಿಲ್ಲೆಯ 10 ಸ್ಥಳೀಯ ಸಂಸ್ಥೆ ವ್ಯಾಪ್ತಿಯ 129 ಕೊಳಚೆ ಪ್ರದೇಶಗಳ 25 ಸಾವಿರ ಕುಟುಂಬಗಳಿಗೆ ಶುಕ್ರವಾರದಿಂದ ತಲಾ 1 ಲೀಟರ್ ಹಾಲು ವಿತರಿಸಲಾಗಿದೆ. ನಗರವೊಂದರಲ್ಲೇ 27 ಘೋಷಿತ ಕೊಳಚೆ ಪ್ರದೇಶಗಳಲ್ಲಿ 7548 ಲೀ., ಹಾಲು ಉಚಿತವಾಗಿ ನೀಡಲಾಗಿದೆ.

ಕೊಳಚೆ ಪ್ರದೇಶದಲ್ಲಿನ ಮನೆಗಳಿಗೆ ಸರ್ಕಾರದ ಆದೇಶದನ್ವಯ ತಲಾ ಒಂದು ಲೀಟರ್ ಹಾಲನ್ನು ತುಮಕೂರು ಹಾಲು ಒಕ್ಕೂಟ (ತುಮುಲ್)ದ ವತಿಯಿಂದ ಒದಗಿಸಲಾಗುತ್ತಿದ್ದು, ಈ ಹಾಲು ವಿತರಣೆಯನ್ನು ಸಮರ್ಪಕವಾಗಿ ನಿರ್ವಹಿಸಲು ಪ್ರತೀ ನಗರ ಸ್ಥಳೀಯ ಸಂಸ್ಥೆ ವ್ಯಾಪ್ತಿಗೆ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಈ ಕಾರ್ಯಕ್ಕೆ ರೆಡ್ ಕ್ರಾಸ್, ಲಯನ್ಸ್ ಹಾಗೂ ರೋಟರಿ ಕ್ಲಬ್ ಹಾಗೂ ಸ್ವಯಂ ಸೇವಕರ ಮೂಲಕ ಪ್ರತೀ ಕೊಳಚೆ ಪ್ರದೇಶದಲ್ಲಿನ ಮನೆಗಳಿಗೆ ತಲುಪಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.

25 ಸಾವಿರ ಲೀಟರ್ ಹಾಲು: ಕರೊನಾ ಲಾಕ್‌ಡೌನ್ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಹಾಲು ಮಾರಾಟ ಕಡಿಮೆಯಾಗಿ ಪ್ರತೀದಿನದ ಹೆಚ್ಚುವರಿ ಹಾಲು ವಿಲೇವಾರಿಯಾಗದೆ ಉಳಿಯುತ್ತಿದ್ದು, ಈ ಹಾಲನ್ನು ರಾಜ್ಯದ ಘೋಷಿತ ಮತ್ತು ಅಘೋಷಿತ ಕೊಳಚೆ ಪ್ರದೇಶದಲ್ಲಿ ವಾಸಿಸಿರುವವರಿಗೆ ಪ್ರತೀ ಕುಟುಂಬಕ್ಕೆ ತಲಾ 1 ಲೀಟರ್‌ನಂತೆ ಉಚಿತವಾಗಿ ವಿತರಿಸಲು ಸರ್ಕಾರ ನಿರ್ಧಾರ ಕೈಗೊಂಡಿದೆ. ಹಾಗಾಗಿ, ತುಮುಲ್ ವತಿಯಿಂದ 25 ಸಾವಿರ ಲೀಟರ್ ಹಾಲನ್ನು ಜಿಲ್ಲೆಯ 129 ಕೊಳಚೆ ಪ್ರದೇಶಗಳಿಗೆ ಬೆಳಗ್ಗೆ 6 ರಿಂದ 9ರವರೆಗೆ ವಿತರಿಸಲಾಯಿತು.

27 ಕೊಳಚೆ ಪ್ರದೇಶಗಳಿಗೆ 7458 ಲೀ.ಹಾಲು!: ಮಹಾನಗರ ಪಾಲಿಕೆ ವ್ಯಾಪ್ತಿಯ ಘೋಷಿತ ಮತ್ತು ಅಘೋಷಿತ ಕೊಳಚೆ ಪ್ರದೇಶಗಳಲ್ಲಿ ವಾಸವಿರುವ ಪ್ರತಿ ಕುಟುಂಬಕ್ಕೆ 1 ಲೀಟರ್ ಹಾಲನ್ನು ಏಪ್ರಿಲ್ 14 ರವರೆಗೆ ವಿತರಿಸಲಾಗುವುದು. ಮೊದಲ ದಿನ 7458 ಲೀ., ಹಾಲನ್ನು 27 ಘೋಷಿತ ಕೊಳಚೆ ಪ್ರದೇಶಗಳಿಗೆ ವಿತರಿಸಲಾಯಿತು. ನಗರದ ಲೇಬರ್ ಕಾಲನಿ, ಗೂಡ್ಸ್‌ಶೆಡ್ ಕಾಲನಿ, ಜಯನಗರ (ಎಚ್‌ಎಂಎಸ್ ಪಾಲಿಟೆಕ್ನಿಕ್‌ಮುಂಭಾಗ) ಅಳಶೆಟ್ಟಿಕೆರೆಪಾಳ್ಯ, ಕುರಿಪಾಳ್ಯ, ನಜರಾಬಾದ್, ಅಂಬೇಡ್ಕರ್ ನಗರ, ಕ್ಯಾತಸಂದ್ರ, ಫಕೀರ್ ಪಾಳ್ಯ, ಜಿಸಿಆರ್ ಕಾಲನಿ, ಕ್ಯಾತಸಂದ್ರದ ಎ.ಕೆ.ಕಾಲನಿ ಸೇರಿ 27 ಘೋಷಿತ ಕೊಳಚೆ ಪ್ರದೇಶಗಳಲ್ಲಿ ಉಚಿತವಾಗಿ ನಂದಿನಿ ಹಾಲಿನ ಒಂದು ಲೀಟರ್‌ನ ಪ್ಯಾಕೇಟ್‌ಗಳನ್ನು ವಿತರಿಸಲಾಯಿತು. 27 ನೋಡಲ್ ಅಧಿಕಾರಿಗಳನ್ನಾಗಿ ಪಾಲಿಕೆ ಅಧಿಕಾರಿಗಳನ್ನು ನೇಮಿಸಲಾಗಿದೆ.

ಅರ್ಧ ಲೀಟರ್ ಪ್ಯಾಕೆಟ್ ಕೊಡಿ : ಒಂದು ಲೀಟರ್ ಬದಲಾಗಿ ಅರ್ಧ ಲೀಟರ್‌ನ ಹಾಲಿನ ಪ್ಯಾಕೇಟ್ ಇದ್ದಿದ್ದರೆ ಅನುಕೂಲವಾಗುತ್ತಿತ್ತು ಎಂಬ ಮಾತು ಕೇಳಿಬಂದಿದೆ. ಅಲ್ಲದೆ, ಅರ್ಧ ಲೀಟರ್ ಹಾಲು, ಮೊಸರು ಅಥವಾ ಮಜ್ಜಿಗೆ ನೀಡಿದ್ದರೆ ಒಳಿತು ಎಂಬ ಅಭಿಪ್ರಾಯ ಕೂಡ ಸಾರ್ವಜನಿಕರಿಂದ ಕೇಳಿಬಂದಿದೆ.

ತುಮುಲ್ ವತಿಯಿಂದ ಜಿಲ್ಲೆಯಲ್ಲಿ 25 ಸಾವಿರ ಲೀಟರ್ ಹಾಲು ಹಾಗೂ ಬೆಂಗಳೂರಿಗೆ 75 ಸಾವಿರ ಲೀಟರ್ ಹಾಲು ಒಟ್ಟು 95 ಸಾವಿರ ಲೀಟರ್ ಹಾಲನ್ನು ಕೊಳಚೆ ಪ್ರದೇಶದ ಜನರಿಗೆ ವಿತರಿಸುವ ಪೂರೈಸಲಾಗಿದೆ. ಈ ಹಣವನ್ನು ಸರ್ಕಾರವೇ ಭರಿಸಲಿದೆ. ಹಾಗಾಗಿ, ತುಮುಲ್‌ಗೆ ಆಗುವ ನಷ್ಟ ತಪ್ಪಲಿದೆ. ಸಿ.ವಿ.ಮಹಲಿಂಗಯ್ಯ ತುಮುಲ್ ಅಧ್ಯಕ್ಷ