ಜಿಲ್ಲೆ

ಸಮರ ಸಂಘರ್ಷ ನಿಲ್ಲಬೇಕು

ವಿಶ್ವಶಾಂತಿ ದಿನಾಚರಣೆಯಲ್ಲಿ ಡಾ. ಕೆ.ವಿ. ಪ್ರಕಾಶ್ ಅನಿಸಿಕೆ


ಗೌರಿಬಿದನೂರು: ಜಾಗತಿಕ ಕದನಗಳಿಗೆ ವಿರಾಮ ನೀಡಿ, ಶಾಂತಿಯ ಸಂಸ್ಕೃತಿಯನ್ನು ಬೆಳೆಸಬೇಕು ಎಂದು ತೀರ್ಥ ಶಾಲೆ ಅಧ್ಯಕ್ಷ ಡಾ.ಕೆ.ವಿ.ಪ್ರಕಾಶ್ ಹೇಳಿದರು.
ನಗರದ ಮುನೇಶ್ವರ ಬಡಾವಣೆಯ ತೀರ್ಥ ಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ವಿಶ್ವ ಶಾಂತಿ ದಿನಾಚರಣೆಯಲ್ಲಿ ಮಾತನಾಡಿ, ಪ್ರತಿವರ್ಷ ಸೆ.21ರಂದು ವಿಶ್ವ ಶಾಂತಿ ದಿನ ಆಚರಿಸಲಾಗುತ್ತದೆ. ಸಮರ ಸಂಘರ್ಷ ನಿಲ್ಲಿಸಿ, ವಿಶ್ವದಲ್ಲಿ ಶಾಂತಿ ಸೌಹಾರ್ದತೆ ನೆಲೆಸಬೇಕು. ಇಡೀ ವಿಶ್ವವೇ ಒಂದು ಕುಟುಂಬ ಎಂದು ಪ್ರಗತಿ ಪಥದತ್ತ ಕೊಂಡೊಯ್ಯಬೇಕು. ಸಾಮರಸ್ಯವೇ ಸಾಧನವಾಗಬೇಕು. ಶಾಂತಿಯುತ ಜಗತ್ತನ್ನು ನಿರ್ಮಿಸುವುದು ಈ ದಿನದ ಘೋಷವಾಕ್ಯ ಎಂದು ತಿಳಿಸಿದರು.
ಮುಖ್ಯ ಶಿಕ್ಷಕಿ ಎಂ.ಶೋಭಾ ಮಾತನಾಡಿ, ಶಿಕ್ಷಣದ ಮೂಲಕ ಮಕ್ಕಳು ಮತ್ತು ಸಮುದಾಯಗಳ ಮನಸ್ಸಿನಲ್ಲಿ ಶಾಂತಿಯ ಮೌಲ್ಯಗಳನ್ನು ಬೆಳೆಸಬೇಕಾಗಿದೆ. ಮಾನವೀಯತೆಯಿಂದ ಬದುಕು ಬದಲಿಸಿಕೊಳ್ಳಬೇಕು. ಭವ್ಯ ಭವಿಷ್ಯದ ಭರವಸೆಗಳು ಮತ್ತು ಶಾಂತಿಯ ಕನಸುಗಳು ಮಕ್ಕಳ ಧ್ವನಿಯಲ್ಲಿ ವರ್ಧಿಸಬೇಕು. ಶಾಂತಿ, ತಾಳ್ಮೆ, ಸಂಯಮ, ಸಹಕಾರ, ಸಹಬಾಳ್ವೆ ಸೌಹಾರ್ದತೆ ಇತ್ಯಾದಿ ಮೌಲ್ಯಗಳನ್ನು ಪ್ರಾಥಮಿಕ ಹಂತದಲ್ಲಿ ಮಕ್ಕಳಲ್ಲಿ ಬಿತ್ತಬೇಕು ಎಂದು ತಿಳಿಸಿದರು.
ಶಾಲೆಯ ಮಕ್ಕಳು ಜಾಥಾ ನಡೆಸಿ, ವಿಶ್ವ ಶಾಂತಿಯನ್ನು ಸಾರುವ ಘೋಷವಾಕ್ಯಗಳ ಫಲಕಗಳನ್ನು ಪ್ರದರ್ಶಿಸಿದರು. ಶಿಕ್ಷಕಿಯರಾದ ಸಾಯಿಪ್ರಿಯಾ, ಭಾರ್ಗವಿ, ಸಂಧ್ಯಾ ಮತ್ತು ಚಂದ್ರಮ್ಮ ಉಪಸ್ಥಿತರಿದ್ದರು.

.