ತುಮಕೂರು: ಲಾಕ್‌ಡೌನ್ ಹಿನ್ನೆಲೆಯಲ್ಲಿ ನಗರದ ವಿವಿಧೆಡೆ ಆಶ್ರಯ ಪಡೆದಿದ್ದ 316 ವಲಸೆ ಕಾರ್ಮಿಕರನ್ನು ಷರತ್ತುಗಳೊಂದಿಗೆ ಸ್ವಗ್ರಾಮಗಳಿಗೆ ಕಳುಹಿಸಿಕೊಡಲಾಯಿತು.
ಕೊಪ್ಪಳ, ಬಳ್ಳಾರಿ, ರಾಯಚೂರು, ಯಾದಗಿರಿ, ಕಲಬುರಗಿ ಹಾಗೂ ವಿಜಯಪುರ ಮೂ ಲದ ಸು ಮಾರು 316 ವಲಸೆ ಕೂಲಿ, ಕಟ್ಟಡ ಕಾರ್ಮಿಕರನ್ನು ಜಿಲ್ಲಾ ಡಳಿತ ಕೆಎಸ್‌ಆರ್‌ಟಿಸಿ ಬಸ್ ಮೂಲಕ ಕಳುಹಿಸಿಕೊಟ್ಟಿತು. ಕೂಲಿ ಅರಸಿ ಬೆಂಗಳೂರಿಗೆ ಬಂದಿದ್ದ ಕಾರ್ಮಿಕರು ಲಾಕ್‌ಡೌನ್ ಜಾರಿಯಾದ ಬಳಿಕ ಮೂಲ ಸ್ಥಳಕ್ಕೆ ಕಾಲ್ನಡಿಗೆಯಲ್ಲೇ ತೆರಳುವಾಗ ಮಾರ್ಗಮಧ್ಯೆ ಅವರನ್ನು ವಶಕ್ಕೆ ತೆಗೆದುಕೊಂಡು ನಗರದ ಹನುಮಂತಪುರ ಸಮಾಜ ಕಲ್ಯಾಣ ಇಲಾಖೆ ವಸತಿ ನಿಲಯದಲ್ಲಿ ಆಶ್ರಯ ನೀಡಿ ಊಟ, ವಸತಿ ಸೌಲಭ್ಯ ಕಲ್ಪಿಸಿತ್ತು.
ಪಟ್ಟುಹಿಡಿದಿದ್ದ ಕಾರ್ಮಿಕರು: ವಲಸೆ ಕಾರ್ಮಿಕರು ತವರಿಗೆ ಕಳುಹಿಸುವಂತೆ ಬುಧವಾರ ನಿರಾಶ್ರಿತರ ಕೇಂದ್ರದಿಂದ ಹೊರಬಂದು ಪಟ್ಟುಹಿಡಿದಿದ್ದರು. ಹಾಗಾಗಿ, ಜಿಲ್ಲಾಡಳಿತ ಶುಕ್ರವಾರ ಅವರನ್ನು 15 ಬಸ್‌ಗಳಲ್ಲಿ ಕಳುಹಿಸಿ ಕೊಟ್ಟಿತು. ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಅಜಯ್, ತಹಸೀಲ್ದಾರ್ ಮೋಹನ್‌ಕುಮಾರ್, ಉಪತಹಸೀಲ್ದಾರ್ ನರಸಿಂಹರಾಜು ಮತ್ತಿತರ ಅಧಿಕಾರಿಗಳು ಇದ್ದರು.
ವಲಸೆ ಕಾರ್ಮಿಕರು ತವರಿಗೆ ಮರಳಲು ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಅವರೆಲ್ಲರನ್ನೂ ಆರೋಗ್ಯ ತಪಾಸಣೆ ಮಾಡಿ, ರೋಗ ಲಕ್ಷಣ ಕಂಡು ಬಂದಿಲ್ಲವಾದ್ದರಿಂದ ಸ್ವಗ್ರಾಮಗಳಿಗೆ ಕಳುಹಿಸಲಾಗಿದೆ. ಮನೆಯಿಂದ ಹೊರಬರದಂತೆ ಕಡ್ಡಾಯವಾಗಿ ಸೂಚನೆ ನೀಡಲಾಗಿದೆ. ಅಜಯ್ ಉಪವಿಭಾಗಾಧಿಕಾರಿ, ತುಮಕೂರು