ವಿಜಯವಾಣಿ: ದಕ್ಷಿಣ ಕೊಡಗಿನಲ್ಲಿ ಕಳೆದ ಹಲವು ತಿಂಗಳಿನಿಂದ ನಿರಂತರವಾಗಿ ಗೋವುಗಳ ಮೇಲೆ ದಾಳಿ ಮಾಡಿ ಬಲಿ ಪಡೆಯುತ್ತಿದ್ದ ಹಾಗೂ ಸ್ಥಳೀಯ ರೈತರು ಹಾಗೂ ನಾಗರಿಕರಿಗೆ ಆತಂಕ ಮೂಡಿಸಿದ್ದ ಹೆಬ್ಬುಲಿಯನ್ನು ಅರಣ್ಯ ಇಲಾಖೆ ಮಂಗಳವಾರ ಮಧ್ಯರಾತ್ರಿ ಕಾರ್ಯಚರಣೆ ನಡೆಸಿ ಹುದಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಳ್ಳೂರು ಗ್ರಾಮದಲ್ಲಿ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದೆ.
ಸೆರೆಯಾದ ಹುಲಿಯನ್ನು ಮೈಸೂರಿನ ಕೂರ್ಗಳ್ಳಿಯಲ್ಲಿರುವ ಹುಲಿ ಪುನಶ್ಚೇತನ ಕೇಂದ್ರಕ್ಕೆ ಸಾಗಿಸಲಾಗಿದೆ. ಸೆರೆಯಾದ ಹೆಬ್ಬುಲಿ ಗಂಡಾಗಿದ್ದು, 6 ರಿಂದ 8 ವರ್ಷ ವಯಸ್ಸಾಗಿರಬಹುದೆಂದು ಅಂದಾಜಿಸಲಾಗಿದೆ.
ಮಧ್ಯರಾತ್ರಿ ಕಾರ್ಯಾಚರಣೆ ನಡೆಸಲು ಮಂಗಳವಾರ ಸಂಜೆಯಿಂದಲೇ ಅರಣ್ಯ ಇಲಾಖೆ ಸಿದ್ಧತೆ ನಡೆಸಿತು. ಬೆಳ್ಳೂರು ಗ್ರಾಮದ ಕಳ್ಳಂಗಡ ದಿನೇಶ್ ದೇವಯ್ಯ ಅವರ ಹಸುವನ್ನು ಭಾನುವಾರ ಹಾಡಹಗಲೇ ಹುಲಿ ದಾಳಿ ನಡೆಸಿ ಕೊಂದು ಹಾಕಿತ್ತು. ಅದೇ ಸ್ಥಳವನ್ನು ಹುಲಿ ಸೆರೆಗೆ ಆಯ್ಕೆ ಮಾಡಿಕೊಂಡ ಅರಣ್ಯ ಇಲಾಖೆ ಅಧಿಕಾರಿಗಳು ಹುಲಿಗೆ ಅರಿವಳಿಕೆ ಚುಚ್ಚುಮದ್ದು ನೀಡಿ ಸೆರೆ ಹಿಡಿಯಲು ಎಲ್ಲ ಸಿದ್ಧತೆ ಮಾಡಿಕೊಂಡಿದ್ದರು.
ಕಾರ್ಯಾಚರಣೆ ನಡೆದ ರೀತಿ: ಹುಲಿ ಸೆರೆಗೆ ಬೆಳ್ಳೂರು ಗ್ರಾಮದಲ್ಲಿ ಹಸು ಹಿಡಿದ ಸ್ಥಳದಿಂದ 20 ಅಡಿ ದೂರದಲ್ಲಿ 8 ಅಡಿ ಎತ್ತರದ ಅಟ್ಟಣಿಗೆ ನಿರ್ಮಿಸಿ ರಾತ್ರಿ ಪೂರ್ತಿ ಹುಲಿ ಬರುವುದನ್ನು ಕಾದು ಅರಿವಳಿಕೆ ನೀಡಲು ಅರಣ್ಯ ಇಲಾಖೆಯ ಅಧಿಕಾರಿಗಳು ಯೋಜನೆ ರೂಪಿಸಿದರು.
ಇದರಂತೆ ಅಟ್ಟಣಿಗೆಯಲ್ಲಿ ಡಾ.ಸನತ್ ಮತ್ತು ಡಿಆರ್‌ಎಫ್‌ಒ ಕನ್ನಂಡ ರಂಜನ್ ದೇವಯ್ಯ ಅವರು ರಾತ್ರಿ 8 ಗಂಟೆಯಿಂದ ಕಾದು ಕೂತರು. ಡಿಎಫ್‌ಒ, ಎಸಿಎಫ್, ಆರ್‌ಎಫ್‌ಒ, ಅರಣ್ಯ ಇಲಾಖೆ ಸಿಬ್ಬಂದಿ ಮೂರು ಸಾಕಾನೆಗಳು ಸೇರಿದಂತೆ ಇತರರು ಅನತಿ ದೂರದಲ್ಲಿದ್ದು, ಪರಿಸ್ಥಿತಿಯ ಬಗ್ಗೆ ನಿಗಾ ವಹಿಸಿದರು.
ಮಧ್ಯರಾತ್ರಿ 1 ಗಂಟೆ ವೇಳೆಗೆ ಹುಲಿ ಅಟ್ಟಣಿಗೆಯ ಸಮೀಪ ಹಸುವಿನ ಕಳೇಬರವನ್ನು ತಿನ್ನಲು ಆಗಮಿಸಿತು. ಈ ಸಂದರ್ಭ ರಂಜನ್ ದೇವಯ್ಯ ಅವರ ಅನುಮತಿ ಮೇರೆಗೆ ಡಾ.ಸನತ್ ಅವರು ಅರಿವಳಿಕೆಯ ಮದ್ದು ಹಾರಿಸಿದರು.
ನಂತರ ಹುಲಿಯು ಗುಂಡು ಹೊಡೆದ ಸ್ಥಳದಿಂದ 15 ಮೀ. ದೂರದಲ್ಲಿ ಪ್ರಜ್ಞೆ ತಪ್ಪಿ ಬೀಳುತ್ತಿದ್ದಂತೆ ಬಲೆಯ ಮೂಲಕ ಹಿಡಿದು ಕ್ಷಿಪ್ರ ಕಾರ್ಯಪಡೆಯ ವಾಹನದ ಮೂಲಕ ಮೈಸೂರಿನ ಕೂರ್ಗಳ್ಳಿಯಲ್ಲಿರುವ ಹುಲಿ ಪುನಶ್ಚೇತನ ಕೇಂದ್ರಕ್ಕೆ ಬಿಡಲಾಗಿದ್ದು, ಅದು ಸಹಜ ಸ್ಥಿತಿಗೆ ಬಂದು ಆರೋಗ್ಯವಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.