ಜಿಲ್ಲೆ

ಮಧ್ಯರಾತ್ರಿ ‘ನಿರ್ಭಯ’ ಓಡಾಟ: ಬಿಇಒ ಜಯಲಕ್ಷ್ಮೀ ಅಭಿಪ್ರಾಯ

ಹರ್ಷ ನ.ಪುರೋಹಿತ

ಮೊಳಕಾಲ್ಮೂರು: ಸಮಾಜದಲ್ಲಿ ಹೆಣ್ಣನ್ನು ಪುರುಷರು ಅತ್ಯಂತ ವಾತ್ಸಲ್ಯ, ಗೌರವದಿಂದ ಕಾಣಬೇಕು. ಆಗ ಮಾತ್ರ ಮಹಾತ್ಮರು ಕಂಡ ಸಮ ಸಮಾಜದ ಕನಸು ನನಸಾಗಲಿದೆ ಎಂದು ಬಿಇಒ ಜಯಲಕ್ಷ್ಮೀ ಹೇಳಿದರು.

ಪಟ್ಟಣದ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘದ ಸಹಯೋಗದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪೋಕ್ಸೋ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿ, ಮಧ್ಯರಾತ್ರಿ ಹೆಣ್ಣು ನಿರ್ಭಯವಾಗಿ ಓಡಾಡುವ ವಾತಾವರಣ ನಿರ್ಮಿಸಿದಾಗ ಮಾತ್ರ ದೇಶಕ್ಕೆ ಗೌರವ ಲಭಿಸಲಿದೆ ಎಂದರು.

ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯನ್ನು ಈಗಲೂ ಶೋಷಣೆ ಮಾಡಲಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಿ ಅವಳಿಗೆ ಸ್ವತಂತ್ರ ಕಲ್ಪಿಸಬೇಕು.

ಮಹಾತ್ಮ ಗಾಂಧೀಜಿ, ಡಾ.ಬಿ.ಆರ್.ಅಂಬೇಡ್ಕರ್ ಸೇರಿ ಅನೇಕರ ಆಶಯಗಳನ್ನು ಅನುಷ್ಠಾನಕ್ಕೆ ತರಲು ಬಹುಮುಖ್ಯವಾಗಿ ಪುರುಷರು ಮನಸ್ಸು ಮಾಡಬೇಕು ಎಂದು ತಿಳಿಸಿದರು.

ವಕೀಲರ ಸಂಘದ ತಾಲೂಕಾಧ್ಯಕ್ಷ ಆರ್.ಆನಂದ್ ಮಾತನಾಡಿ, ಮಹಿಳೆಯರಿಗೆ ಸಮಾನ ಆವಕಾಶ ಕಲ್ಪಿಸಿಕೊಡಲು ಜಾರಿಯಲ್ಲಿರುವ ಕಠಿಣ ಕಾನೂನು-ಕಾಯ್ದೆಗಳನ್ನು ತಿಳಿದುಕೊಳ್ಳುವ ಜತೆಗೆ ಬಳಸಿಕೊಳ್ಳಬೇಕು.

ಆಗ ಮಾತ್ರ ಜೀತ ಪದ್ಧತಿ, ಬಾಲ್ಯ ವಿವಾಹ, ವರದಕ್ಷಿಣೆ ಪಿಡುಗು, ದೌರ್ಜನ್ಯ, ಅತ್ಯಾಚಾರ, ಲೈಂಗಿಕ ದೌರ್ಜನ್ಯಕ್ಕೆ ಕಡಿವಾಣ ಹಾಕಲು ಸಾಧ್ಯ ಎಂದರು.

ಮುಖ್ಯಶಿಕ್ಷಕ ಸುಬ್ರಮಣ್ಯ ಜೋಯಿಸ್, ವಕೀಲರ ಸಂಘದ ಉಪಾಧ್ಯಕ್ಷ ಜಿ.ಮಂಜುನಾಥ, ಕಾರ್ಯದರ್ಶಿ ಕುಮಾರಸ್ವಾಮಿ, ವಕೀಲರಾದ ಕೆ.ಎಂ.ಆಂಜನೇಯ, ವಿ.ಡಿ.ರಾಘವೇಂದ್ರ, ಶಿಕ್ಷಕರಾದ ಒ.ಟಿ.ನಾಗರಾಜ್, ಜಗಲೂರು ಪಾಪಯ್ಯ ಇದ್ದರು.