ಮಂಗಳೂರು : ಯುವ ನಟ, ನಿರ್ದೇಶಕ ರಾಹುಲ್ ಅಮೀನ್ ನಿರ್ದೇಶಿಸಿದ ‘ಮಿಡ್ಲ್ ಕ್ಲಾಸ್ ಫ್ಯಾಮಿಲಿ‘ ತುಳು ಚಿತ್ರದ ಪ್ರೀಮಿಯರ್ ಪ್ರದರ್ಶನದ ಟಿಕೆಟ್ ಬಿಡುಗಡೆ ಕಾರ್ಯಕ್ರಮ ದುಬೈಯಲ್ಲಿ ಜರಗಿತು.
ಚಿತ್ರ ಬಿಡುಗಡೆಯ ಮೊದಲೇ ಯುಎಇಯಲ್ಲಿ 30 ಲಕ್ಷ ರೂ. ಗಳಿಕೆಯನ್ನು ಯುಎಇ ಚಿತ್ರ ಪ್ರಸ್ತುತಿ ಪ್ರಾಯೋಜಕರ ಮೂಲಕ ಗಳಿಸಿದ್ದು ತುಳು ಚಿತ್ರರಂಗದಲ್ಲಿ ಹೊಸ ದಾಖಲೆ ಬರೆದಿದೆ. ಟಿಕೆಟ್ ಬಿಡುಗಡೆಯ ದಿನವೇ 1500ಕ್ಕೂ ಹೆಚ್ಚಿನ ಟಿಕೆಟ್ ಮಾರಾಟವಾಗಿದೆ.
ದುಬೈನ ಮಾರ್ಕೊ ಪೋಲೊ ಹೊಟೇಲ್ ನ ಸಭಾಂಗಣದಲ್ಲಿ ನಡೆದ ಟಿಕೆಟ್ ಬಿಡುಗಡೆ ಕಾರ್ಯಕ್ರಮದಲ್ಲಿ ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷ ಸರ್ವೋತ್ತಮ ಶೆಟ್ಟಿ, ಚಿತ್ರ ನಿರ್ಮಾಪಕ ಹರೀಶ್ ಶೇರಿಗಾರ್, ಹರೀಶ್ ಬಂಗೇರ, ಆತ್ಮಾನಂದ ರೈ, ದಿನೇಶ್ ಶೆಟ್ಟಿ ಕೊಟ್ಟಿಂಜ, ಸುಧಾಕರ ರಾವ್ ಪೇಜಾವರ, ಉದ್ಯಮಿಗಳಾದ ಡಾ.ಅಬ್ದುಲ್ಲ, ಗುಣಶೀಲ ಶೆಟ್ಟಿ, ರಮಾನಂದ ಶೆಟ್ಟಿ, ಸಂದೀಪ್ ರೈ ನಂಜೆ, ಡಾ.ರಶ್ಮಿ ನಂದ ಕಿಶೋರ್, ಕರ್ನಾಟಕ ಸಂಘ ದುಬೈ ಅಧ್ಯಕ್ಷ ಶಶಿಧರ್ ನಾಗರಾಜಪ್ಪ ಉಪಸ್ಥಿತರಿದ್ದರು.
ಚಿತ್ರದ ಫ್ಯಾಮಿಲಿ ವೀಡಿಯೋ ಹಾಡನ್ನು ಅಬುಧಾಬಿಯ ಉದ್ಯಮಿ ಸುಂದರ ಶೆಟ್ಟಿ ಬಿಡುಗಡೆಗೊಳಿಸಿದರು. ಸ್ವಸ್ತಿಕ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ವಿನೀತ್ ಕುಮಾರ್ ನಾಯಕ ನಟನಾಗಿ,ಸಮತಾ ಅಮೀನ್ ನಾಯಕಿಯಾಗಿ ನಟಿಸುತ್ತಿರುವ ಈ ಚಿತ್ರದಲ್ಲಿ ನವೀನ್ ಡಿ.ಪಡೀಲ್, ಅರವಿಂದ ಬೋಳಾರ್,ಬೋಜರಾಜ ವಾಮಂಜೂರು,ಪ್ರಸನ್ನ ಶೆಟ್ಟಿ, ಸಂದೀಪ್ ಶೆಟ್ಟಿ, ರವಿ ರಾಮಕುಂಜ,ಚೈತ್ರ ಶೆಟ್ಟಿ, ಕದ್ರಿ ನವನೀತ ಶೆಟ್ಟಿ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.