ಕಾರವಾರ: ಜಿಲ್ಲೆಯ ಮೈಕ್ರೋ ಫೈನಾನ್ಸ್ಗಳು (Microfinance) ಭಾರತೀಯ ರಿಸರ್ವ್ ಬ್ಯಾಂಕ್ ಮಾರ್ಗಸೂಚಿಗಳನ್ನು ಪಾಲಿಸದೇ ಇದ್ದರೆ ಕಠಿಣ ಕ್ರಮ ವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಜಿಲ್ಲೆಯ ಮೈಕ್ರೋ ಫೈನಾನ್ಸ್ಗಳ ಪ್ರತಿನಿಧಿಗಳ ಸಭೆ ನಡೆಸಿ, ಮಾತನಾಡಿದರು.
ಮಹಿಳೆಯರ ಸ್ವಾವಲಂಬನೆಯ ಉದ್ದೇಶದಿಂದ 15 ವರ್ಷಗಳ ಹಿಂದೆ ವಿಶ್ವ ಬ್ಯಾಂಕ್ ನೆರವಿನಲ್ಲಿ ಮೈಕ್ರೋ ಫೈನಾನ್ಸ್ಗಳಿಗೆ ಅವಕಾಶ ಮಾಡಿಕೊಡಲಾಯಿತು. ಅದರಿಂದ ಹಲವರಿಗೆ ಅನುಕೂಲವಾಗಿದೆ. ಆರ್ಥಿಕಾಭಿವೃದ್ಧಿಯೂ ಆಗಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಹಲವು ದೂರುಗಳು ಕೇಳಿ ಬರುತ್ತಿವೆ.
ಫೈನಾನ್ಸರ್‌ಗಳು ಸಾಲ ಕೊಡುವ ಮುನ್ನ, ಸಾಲ ಪಡೆಯುವ ಕುಟುಂಬದ ಆದಾಯ ಪರಿಗಣಿಸಬೇಕು. ಆದಾಯದ ಶೇ.50 ರಷ್ಟು ಮಾತ್ರ ಸಾಲ ನೀಡಬೇಕು. ಮತ್ತು ಗರಿಷ್ಠ 3 ಲಕ್ಷದವರೆಗೆ ಮಾತ್ರ ಸಾಲ ನೀಡಲು ಅವಕಾಶವಿದೆ. ಶೇ16 ರಷ್ಟು ಮಾತ್ರ ಬಡ್ಡಿ ಆಕರಿಸಲು ಅವಕಾಶವಿದೆ.
ಎರಡಕ್ಕಿಂತ ಹೆಚ್ಚು ಸಂಘಗಳ ಸದಸ್ಯರಾಗಿದ್ದಲ್ಲಿ ಸಾಲ ಕೊಡಬಾರದು. ಸಾಲ ಕೊಡುವಾಗ ಅವರಿಗೆ ಮರುಪಾವತಿಯ ಅವಧಿ, ಕಂತು ಮುಂತಾದ ವಿವರಗಳನ್ನು ಸರಿಯಾಗಿ ತಿಳಿಸಬೇಕು. ಸಾಲ ವಸೂಲಿಗೆ ರಾತ್ರಿ ತೆರಳುಂತಿಲ್ಲ.
ಸಾಲಗಾರರಿಗೆ ಕಿರುಕುಳ ನೀಡುವಂತಿಲ್ಲ. ಅವರ ಸಂಬಂಧಿಕರಿಗೆ ಕರೆ ಮಾಡುವುದು, ಅವಮಾನ ಮಾಡುವಂತಿಲ್ಲ. ಅಂಥ ಯಾವುದೇ ದೂರು ಬಂದರೆ ನಿರ್ದಾಕ್ಷಿಣ್ಯವಾಗಿ ಎಫ್‌ಐಆರ್ ದಾಖಲಿಸಿ ಕ್ರಮ ವಹಿಸಲಾಗುವುದು ಎಂದರು.
ಎಸ್‌ಪಿ ಎಂ.ನಾರಾಯಣ ಮಾತನಾಡಿ, ಜಿಲ್ಲೆಯಲ್ಲಿ 201 ಅಧಿಕೃತ ನೋಂದಾಯಿತ ಮೈಕ್ರೋ ಫೈನಾನ್ಸ್ ಸಂಸ್ಥೆಗಳಿದ್ದು, ಹಳಿಯಾಳ, ಜೋಯಿಡಾ, ಮುಂಡಗೋಡ, ಸಿದ್ದಾಪುರ, ಬನವಾಸಿ ಭಾಗದಲ್ಲಿ ಮೀಟರ್ ಬಡ್ಡಿ ನಡೆಯುತ್ತಿದೆ.
ಮಿತಿಗಿಂತ ಹೆಚ್ಚು ಸಾಲ ವಿಧಿಸಲಾಗುತ್ತಿದೆ. ಅನುತ್ಪಾದಕ ಕಾರ್ಯಗಳಿಗೆ ಸಾಲ ನೀಡಲಾಗುತ್ತಿದೆ. ಸಾಲ ಕಟ್ಟಿದ ನಂತರವೂ ಋಣ ಮುಕ್ತರನ್ನಾಗಿ ಮಾಡುತ್ತಿಲ್ಲ. ಬೇರೆ ಕಡೆ ಸಾಲ ಹೊಂದಿದ್ದರೂ ಅವರಿಗೆ ಮತ್ತೆ ಸಾಲ ನೀಡಲಾಗುತ್ತಿದೆ.
ಇಂಥ ಪ್ರತಿ ವಿವರಗಳನ್ನೂ ನಾವು ಪೊಲೀಸ್ ಇಲಾಖೆಯಿಂದ ಕಲೆ ಹಾಕಿದ್ದೇವೆ. ಸಾಲ ವಸೂಲಿಗಾಗಿ ಕ್ರಿಮಿನಲ್‌ಗಳನ್ನು ಬಳಸಿಕೊಂಡಲ್ಲಿ . ನಿಯಮಗಳನ್ನು ಮೀರಿದರೆ ಕ್ರಮ ಅನಿವಾರ್ಯ ಎಂದರು.
ಜಿಲ್ಲೆಯಲ್ಲಿ ಕೆಲ Microfinance ಗಳಿಂದ ಅಕ್ರಮ ಬಡ್ಡಿ ದಂಧೆ ನಡೆಸುವ ಸಂಬಂಧ ಇದುವರೆಗೆ 7 ಪ್ರಕರಣ ದಾಖಲಿಸಿ, 37 ಲಕ್ಷ ವಶಪಡಿಸಿಕೊಳ್ಳಲಾಗಿದೆ.
ಕಾನೂನು ಉಲ್ಲಂಘಿಸಿದ್ದಲ್ಲಿ ಅಂತಹವರ ಮೇಲೆ ನಿರ್ದ್ಯಾಕ್ಷಿಣ್ಯವಾಗಿ ಕಾನೂನಿನ ಕ್ರಮ ಕೈಗೊಳ್ಳಲಾಗುವುದು ಎಂದರು. ಎಸ್‌ಪಿ ಜಗದೀಶ ಎಂ.ಲೀಡ್ ಬ್ಯಾಂಕ್ ಮೆನೇಜರ್ ಭಾರತಿ ವಸಂತ್, ಸಹಕಾರ ಇಲಾಖೆ ಸಹಾಯಕ ನಿಬಂಧಕ ಶ್ರೀನಿವಾಸ್ ಸಜ್ಜನ ವೇದಿಕೆಯಲ್ಲಿದ್ದರು.
ನಿಯಮ ಪಾಲಿಸುತ್ತಿದ್ದರೂ ಕೆಲವು ಮುಖಂಡರಿಂದ ತಮಗೆ ಅನಾವಶ್ಯಕವಾಗಿ ತೊಂದರೆಯಾಗುತ್ತದೆ. ಅಂಥ ಸಂದರ್ಭದಲ್ಲಿ ರಕ್ಷಣೆ ನೀಡಬೇಕು ಎಂದು ಫೈನಾನ್ಶಿಯರ್‌ಗಳು ಮನವಿ ಮಾಡಿದರು.
ಲೀಡ್ ಬ್ಯಾಂಕ್ ಮ್ಯಾನೇಜರ್ ಭಾರತೀ ವಸಂತ್ ಮಾತನಾಡಿ, ಜಿಲ್ಲೆಯಲ್ಲಿ 1.48 ಲಕ್ಷ ಖಾತೆಗಳು ಮೈಕ್ರೋ ಫೈನಾನ್ಸ್ಗಳಲ್ಲಿದೆ. ಒಟ್ಟಾರೆ 1,143.67 ಕೋಟಿ ರೂ. ಸಾಲವನ್ನು ವಿತರಿಸಲಾಗಿದೆ. ಅದರಲ್ಲಿ 8944 ಖಾತೆಗಳ ಸುಮಾರು 9.45 ಕೋಟಿ ರೂ. ಸಾಲ ಸಮರ್ಪಕವಾಗಿ ಮರು ಪಾವತಿಯಾಗುತ್ತಿಲ್ಲ ಎಂದು ಲೀಡ್ ಬ್ಯಾಂಕ್ ಮ್ಯಾನೇಜರ್ ಭಾರತೀ ವಸಂತ್ ತಿಳಿಸಿದರು.
ಇದನ್ನೂ ಓದಿ: https://www.vijayavani.net/mahakumbhamela-prime-minister-narendra-modi-to-take-a-dip-in-the-sangam-on-feb-5