ನಂಜನಗೂಡು: ಮೈಕ್ರೋ ಫೈನಾನ್ಸ್‌ಗಳ ಹಾವಳಿಯಿಂದ ಗುಳೇ ಹೋಗಿ ಊರು ಬಿಟ್ಟವರನ್ನು ಪತ್ತೆ ಹಚ್ಚಿ ಮರಳಿ ಗ್ರಾಮಕ್ಕೆ ತರಲಾಗುವುದು. ಜತೆಗೆ ಮೈಕ್ರೋ ಫೈನಾನ್ಸ್‌ಗಳ ವಿರುದ್ಧ ನೇರ ಹೋರಾಟ ಮಾಡಲು ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ನಿರ್ಧರಿಸಿದೆ.
ತಾಲೂಕಿನ ಹುಲ್ಲಹಳ್ಳಿ ಪ್ರವಾಸಿ ಮಂದಿರದಲ್ಲಿ ಸೋಮವಾರ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯ ಆಂತರಿಕ ಸಭೆಯಲ್ಲಿ ಮೇಲಿನ ನಿರ್ಧಾರ ತೆಗೆದುಕೊಳ್ಳಲಾಯಿತು.
ಸಂಘದ ರಾಜ್ಯ ಕಾರ್ಯದರ್ಶಿ ಮಂಜು ಕಿರಣ್ ಮಾತನಾಡಿ, ಫೆ.13ರಂದು ಪ್ರೊ.ನಂಜುಂಡಸ್ವಾಮಿ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಹಲವು ವೈಶಿಷ್ಟ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಇತ್ತೀಚೆಗೆ ಮೈಕ್ರೋ ಫೈನಾನ್ಸ್ ಹಾವಳಿ ಜಾಸ್ತಿಯಾಗಿದ್ದು, ಫೈನಾನ್ಸ್ ಕಂಪನಿಗಳು ಕಾನೂನುಬಾಹಿರ ಚಟುವಟಿಕೆ ನಡೆಸಿರುವ ಉದಾಹರಣೆಗಳಿವೆ. ಇವುಗಳನ್ನು ಪಟ್ಟಿ ಮಾಡಿ ಇಟ್ಟುಕೊಂಡಿದ್ದೇವೆ. ನಂತರ ಹೋರಾಟ ಆರಂಭಿಸಲಾಗುವುದು ಎಂದು ತಿಳಿಸಿದರು.
ರಾಜ್ಯಪಾಲರು ಸುಗ್ರೀವಾಜ್ಞೆಗೆ ಸಹಿ ಹಾಕದೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಕಾನೂನು ಜಾರಿ ತಂದರೆ ಮೈಕ್ರೋ ಫೈನಾನ್ಸ್ ಕಂಪನಿಗಳು ದುಡ್ಡು ಕೊಡಲ್ಲ ಎಂಬುದು ಇದರ ಉದ್ದೇಶವಾಗಿದೆ. ಆದರೆ ಇವರಿಗೆ ಸಾಮಾನ್ಯ ಜನರನ್ನು ಕಾಪಾಡಬೇಕೋ ಅಥವಾ ಮೈಕ್ರೋ ಫೈನಾನ್ಸ್ ಕಂಪನಿಗಳನ್ನು ಕಾಪಾಡಬೇಕೋ ಎಂಬುದು ತಿಳಿಯುತ್ತಿಲ್ಲ. ಬಿಜೆಪಿ ಉಳ್ಳವರ ಪಕ್ಷ ಹಾಗೂ ಬಂಡವಾಳಶಾಹಿಗಳ ಪಕ್ಷ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ರಾಜ್ಯಪಾಲರು ಸಹಿ ಹಾಕದೆ ಇರುವುದು ಇದಕ್ಕೆ ಮತ್ತಷ್ಟು ನಿಜ ಎನ್ನುವಂತೆ ಕಾಣುತ್ತಿದೆ ಎಂದು ತಿಳಿಸಿದರು.
ಸಭೆಯಲ್ಲಿ ಮೋಹನ್‌ಕುಮಾರ್ ಸಿದ್ದಲಿಂಗಪುರ, ಎಚ್.ವೆಂಕಟೇಶ್, ದುಗ್ಗಹಳ್ಳಿ ಸತೀಶ್, ಸೂರಹಳ್ಳಿ ಮಹೇಶ್, ರತ್ನಮ್ಮ, ಚಿಕ್ಕಯ್ಯ, ಹೇಮಾ ನಂದೀಶ್, ಧರ್ಮ, ಮೂರ್ತಿ, ರಾಜಣ್ಣ, ಶಿವಕುಮಾರ್, ಮಲ್ಲಿಕಾರ್ಜುನ, ಬಸವಣ್ಣ, ಡಿ.ಎಂ.ಬಸವಣ್ಣ, ನಾಗರಾಜಣ್ಣ, ಕೇಬಲ್ ಬಸಪ್ಪ, ಡಿ.ವಿ.ಪ್ರಕಾಶ್, ಮಹೇಶ್, ಪಾಪಣ್ಣ, ಕೂಸಣ್ಣ, ಗೋಪಾಲ್‌ರಾಜ್, ಪ್ರಕಾಶ್, ಗೀತಾ, ಚಿಕ್ಕಣ್ಣ, ಪ್ರಕಾಶ್‌ಶೆಟ್ಟಿ, ಮಾದಪ್ಪ ಇತರರು ಇದ್ದರು.