ಜಿಲ್ಲೆ

ಶ್ರೀಗಂಧ ರಕ್ಷಣೆಗೆ ಮೈಕ್ರೋಚಿಪ್, ಕೃಷಿ ಉತ್ತೇಜನಕ್ಕೆ ಮುಂದಾದ ಅರಣ್ಯ ಇಲಾಖೆ* ಕಳ್ಳರು ಕೈಯಿಟ್ಟರೆ ಪೊಲೀಸರು ಹಾಗೂ ಮಾಲೀಕರಿಗೆ ಅಲರ್ಟ್

Bengaluru Rural

ಶಿವರಾಜ ಎಂ. ಬೆಂಗಳೂರು ಗ್ರಾಮಾಂತರ

ಗಂಧದ ನಾಡು ಶ್ರೀಗಂಧದ ಬೀಡು ಎನಿಸಿರುವ ಕರುನಾಡಿನಲ್ಲಿ ಶ್ರೀಗಂಧ ಕಳ್ಳರಿಗೇನೂ ಕೊರತೆಯಿಲ್ಲ. ಶ್ರೀಗಂಧ ಬೆಳೆಯುವುದೆಂದರೆ ಸೆರಗಲ್ಲಿ ಕೆಂಡ ಇಟ್ಟುಕೊಂಡಂತೆ ಎಂಬ ಆತಂಕ ಸಹಜ. ಇನ್ಮುಂದೆ ಇಂಥ ಆತಂಕ ಪಡೆಯುವ ಪ್ರಮೇಯವೇ ಇರುವುದಿಲ್ಲ. ಕಳ್ಳರು ಶ್ರೀಗಂಧ ಮರಕ್ಕೆ ಕೊಡಲಿ ಹಾಕುವಂತೆಯೂ ಇಲ್ಲ. ಮರಕ್ಕೆ ಸಣ್ಣ ಏಟು ತಗುಲಿದರೂ ಪೊಲೀಸರು ಕಳ್ಳರ ಬೆನ್ನ ಹಿಂದೆಯೇ ಇರುತ್ತಾರೆ!

ಹೌದು. ಜಿಲ್ಲೆಯಲ್ಲಿ ಶ್ರೀಗಂಧ ಕೃಷಿಗೆ ಉತ್ತೇಜನ ನೀಡುತ್ತಿರುವ ಜಿಲ್ಲಾ ಅರಣ್ಯ ಇಲಾಖೆ, ಶ್ರೀಗಂಧ ಮರಗಳ ಭದ್ರತೆಗೂ ಒತ್ತು ನೀಡಿದೆ. ಶ್ರೀಗಂಧ ಬೆಳೆಯಲು ಇಚ್ಚಿಸುವ ರೈತರ ನೆರವಿಗೆ ನಿಂತಿರುವ ಇಲಾಖೆ 7-8 ವರ್ಷಗಳ ನಂತರ ಪ್ರತಿ ಮರಗಳಿಗೆ ಮೈಕ್ರೋಚಿಪ್ ಅಳವಡಿಸುತ್ತದೆ.

ಸಂಬಂಧಪಟ್ಟವರಿಗೆ ಅಲರ್ಟ್: 7-8 ವರ್ಷಗಳ ನಂತರ ಶ್ರೀಗಂಧ ಮರದ ತೊಗಟೆ ಭಾಗ ಕೊರೆದು ಜಿಪಿಎಸ್ ಆಧಾರಿತ ಮೈಕ್ರೋ ಚಿಪ್ ಅಳವಡಿಸಲಾಗುತ್ತದೆ. ಮಾಲೀಕರಿಗೆ ಅಥವಾ ಜಮೀನಿನ ಭದ್ರತಾ ಸಿಬ್ಬಂದಿ ಜತೆಗೆ ಸಂಬಂಧಪಟ್ಟ ಪೊಲೀಸ್ ಠಾಣೆ, ಅರಣ್ಯ ಇಲಾಖೆಗೂ ಜಿಪಿಎಸ್ ಸಂದೇಶದ ಸಂಪರ್ಕ ಕಲ್ಪಿಸಲಾಗಿರುತ್ತದೆ. ಒಂದು ವೇಳೆ ಯಾರಾದರೂ ಮರ ಕಡಿಯಲು ಪ್ರಯತ್ನಿಸಿದರೆ ತಕ್ಷಣ ಅಲರ್ಟ್ ಮಾದರಿಯಲ್ಲಿ ಮೈಕ್ರೋಚಿಪ್ ಸಂದೇಶ ರವಾನಿಸುತ್ತದೆ. ಇದರಿಂದ ಕಳ್ಳರು ಯಾವುದೇ ಮಾರ್ಗದಲ್ಲೂ ಮರಗಳಿಗೆ ಕೊಡಲಿ ಪೆಟ್ಟು ತಗುಲಿಸುವಂತಿಲ್ಲ ಎಂಬುದು ಅರಣ್ಯ ಇಲಾಖೆ ಅಧಿಕಾರಿಗಳ ಅಭಯವಾಗಿದೆ.

ಮಿಶ್ರಬೆಳೆ: ಶ್ರೀಗಂಧ ಬೆಳೆಗೆ ಗ್ರಾಮಾಂತರ ಜಿಲ್ಲೆಯ ಭೂಮಿ ಉತ್ತಮವಾಗಿದೆ. ಈಗಾಗಲೇ ಜಿಲ್ಲೆಯಲ್ಲಿ ನೀಲಗಿರಿ ತೆರವು ಕಾರ್ಯಾಚರಣೆ ಚುರುಕುಗೊಂಡಿರುವುದರಿಂದ ಇದೇ ಜಾಗದಲ್ಲಿ ಶ್ರೀಗಂಧ ಬೆಳೆಯಬಹುದು. ಜತೆಗೆ ಶ್ರೀಗಂಧ ಬೆಳೆಯಲು ಇದ್ದ ಕೆಲವು ಕಾನೂನು ತೊಡಕುಗಳನ್ನು ಸಡಿಲಗೊಳಿಸಲಾಗಿದೆ. ರೈತರು ಪರವಾನಗಿಯೊಂದಿಗೆ ಮರಗಳನ್ನು ಬೆಳೆಸಬಹುದು. ಜತೆಗೆ ತಾವೇ ನೇರವಾಗಿ ಮಾರಾಟ ಮಾಡಬಹುದು. ತೋಟಗಾರಿಕೆ ಬೆಳೆಗಳೊಂದಿಗೂ ಶ್ರೀಗಂಧ ಬೆಳೆಯಬಹುದು. ಈಗಾಗಲೇ ಹೆಬ್ಬೇವು ಬೆಳೆಗೆ ಪ್ರೋತ್ಸಾಹಿಸುತ್ತಿರುವ ಇಲಾಖೆ ಇದರೊಂದಿಗೆ ಶ್ರೀಗಂಧ ಬೆಳೆಯುವ ತರಬೇತಿ ನೀಡುತ್ತಿದೆ. ಶ್ರೀಗಂಧ ಮರಗಳು ಸಹಜವಾಗಿ ಪರಾವಲಂಬಿಗಳಾಗಿವೆ. ಟೀಕ್, ಹೆಬ್ಬೇವು ಜಾತಿಯ ಮರಗಳೊಂದಿಗೆ ಶ್ರೀಗಂಧ ಬೆಳೆದರೆ ಉತ್ತಮ. ಬೇರೆ ಬೆಳೆಗಳನ್ನು 5 ರಿಂದ 10 ವರ್ಷಕ್ಕೆ ಕಟಾವು ಮಾಡಬಹುದು, ಶ್ರೀಗಂಧ ಮರ 20 ವರ್ಷಕ್ಕೆ ಕಟಾವು ಸೂಕ್ತ. ಈ ಹಿನ್ನೆಲೆಯಲ್ಲಿ ರೈತರಿಗೆ ಮಧ್ಯಾವಧಿಯ ಲಾಭಗಳಿಗೆ ಇದು ಸೂಕ್ತ.

ಸಹಾಯಧನವೂ ಲಭ್ಯ: ಶ್ರೀಗಂಧ ಬೆಳೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸರ್ಕಾರದಿಂದ ಪ್ರೋತ್ಸಾಹ ಧನವೂ ಲಭ್ಯವಾಗಲಿದೆ. ನರೇಗಾ ಯೋಜನೆಯಡಿ ಕೂಲಿ ದೊರೆಯುತ್ತದೆ. ಕೇಂದ್ರ ಸರ್ಕಾರದ ಕೃಷಿ ಅರಣ್ಯ ಉತ್ತೇಜನ ಯೋಜನೆಯಡಿ ಸರ್ಕಾರದ ಸಹಭಾಗಿತ್ವದಲ್ಲಿ ಪ್ರೋತ್ಸಾಹಧನ ದೊರೆಯಲಿದೆ. ಇತರ ಬೆಳೆಗಳೊಂದಿಗೆ ಬೆಳೆಯುವುದರಿಂದ ನಿರ್ವಹಣೆಯೂ ಸುಲಭ, ಜಮೀನುಗಳ ಬದುಗಳಲ್ಲೂ ಶ್ರೀಗಂಧ ಬೆಳೆಸಬಹುದು, ಹೆಕ್ಟೇರ್‌ಗೆ 500ರಿಂದ 1 ಸಾವಿರ ಸಸಿಗಳನ್ನು ಪೋಷಿಸಬಹುದು, ಶ್ರೀಗಂಧ ಕೃಷಿ ಬಗ್ಗೆ ಆಸಕ್ತರು ಆಯಾ ವಲಯ ಅರಣ್ಯಾಧಿಕಾರಿಗಳನ್ನು ಸಂಪರ್ಕಿಸಬಹುದು. ಜಿಲ್ಲೆಯ ನಾಲ್ಕೂ ತಾಲೂಕುಗಳ ನರ್ಸರಿಗಳಲ್ಲಿ ಶ್ರೀಗಂಧ ಸಸಿಗಳು ಲಭ್ಯವಿದ್ದು, ರೈತರು ಯೋಜನೆ ಸದ್ಬಳಕೆ ಮಾಡಿಕೊಳ್ಳಬಹುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಶ್ರೀಗಂಧ ಬೆಳೆಯಲು ಇದ್ದ ಕೆಲವು ಕಾನೂನು ತೊಡಕುಗಳನ್ನು ಇದೀಗ ಸಡಿಲಗೊಳಿಸಲಾಗಿದೆ. ಜತೆಗೆ ಶ್ರೀಗಂಧ ರಕ್ಷಣೆಗೆ ಮೈಕ್ರೋಚಿಪ್ ಅಭಿವೃದ್ಧಿಪಡಿಸಲಾಗುತ್ತಿದ್ದು, ಪ್ರಾಯೋಗಿಕ ಹಂತದಲ್ಲಿದೆ. ಜಿಲ್ಲೆಯಲ್ಲಿ ಶ್ರೀಗಂಧ ಕೃಷಿಗೆ ಇಲಾಖೆಯಿಂದ ಎಲ್ಲ ಬಗೆಯ ಉತ್ತೇಜನ ನೀಡಲಾಗುತ್ತಿದ್ದು, ಈಗಾಗಲೇ ರಿಯಾಯಿತಿ ದರದಲ್ಲಿ 40 ಸಾವಿರ ಸಸಿ ವಿತರಿಸಲಾಗಿದೆ. ಭಾಸ್ಕರ್, ಉಪ ಅರಣ್ಯ ಸಂರಕ್ಷಣಾಧಿಕಾರಿ, ಸಾಮಾಜಿಕ ಅರಣ್ಯ ಇಲಾಖೆ