ಜಿಲ್ಲೆ

ಸಾಲ ಮರುಪಾವತಿಗೆ ಮೈಕ್ರೋ ಫೈನಾನ್ಸ್ ಒತ್ತಡ

ರಾಣೆಬೆನ್ನೂರ: ಕರೊನಾ ಲಾಕ್​ಡೌನ್ ಸಮಯದಲ್ಲಿ ಮೈಕ್ರೋ ಫೈನಾನ್ಸ್​ನವರು ಸಾಲ ಮರುಪಾವತಿಗೆ ಒತ್ತಾಯಿಸಿ ಮಹಿಳೆಯರಿಗೆ ಕಿರುಕುಳ ನೀಡುತ್ತಿದ್ದಾರೆ. ಕೂಡಲೆ ಅಂಥವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ತಾಲೂಕು ಸ್ತ್ರೀ ಶಕ್ತಿ ಹಾಗೂ ಸ್ವ-ಸಹಾಯ ಸಂಘಗಳ ಹಿತರಕ್ಷಣಾ ಸಮಿತಿ ವತಿಯಿಂದ ತಹಸೀಲ್ದಾರ್ ಶಂಕರ ಜಿ.ಎಸ್. ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಸಮಿತಿಯ ಅಧ್ಯಕ್ಷ ರವೀಂದ್ರಗೌಡ ಪಾಟೀಲ ಮಾತನಾಡಿ, ಕರೊನಾ ಸಂಕಷ್ಟದ ಕಾಲದಲ್ಲಿ ಮೈಕ್ರೋ ಫೈನಾನ್ಸ್​ನವರು ಶಹರ ಹಾಗೂ ಗ್ರಾಮೀಣ ಭಾಗದಲ್ಲಿ ಮನೆ ಮನೆಗೆ ತೆರಳಿ ಸಾಲ ಮರುಪಾವತಿ ಮಾಡುವಂತೆ ಮಹಿಳೆಯರಿಗೆ ಒತ್ತಾಯಿಸುತ್ತಿದ್ದಾರೆ. ಆದರೆ, ಕರೊನಾ ಲಾಕ್​ಡೌನ್​ನಿಂದ ಜನತೆಗೆ ದುಡಿಮೆಯಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಈ ಸಮಯದಲ್ಲಿ ನಿತ್ಯದ ತುತ್ತಿನ ಚೀಲ ತುಂಬಿಸಿಕೊಳ್ಳುವುದೇ ಸವಾಲಿನ ಕೆಲಸವಾಗಿದೆ. ಇಂಥ ಸಮಯದಲ್ಲಿ ಸಾಲದ ಕಂತು ತುಂಬಲು ಬಡವರಿಗೆ ಹೇಗೆ ಸಾಧ್ಯ? ಆದ್ದರಿಂದ ರಾಜ್ಯ ಸರ್ಕಾರ ಕೂಡಲೆ ಸೂಕ್ತ ಕ್ರಮ ಕೈಗೊಂಡು ಆಗಸ್ಟ್ 30ರವರೆಗೆ ಯಾವುದೇ ಸಾಲದ ಕಂತು ಪಡೆದುಕೊಳ್ಳದಂತೆ ಮೈಕ್ರೋ ಫೈನಾನ್ಸ್​ನವರಿಗೆ ಆದೇಶಿಸಬೇಕು ಎಂದು ಒತ್ತಾಯಿಸಿದರು.

ಪ್ರಮುಖರಾದ ಚಂದ್ರಣ್ಣ ಬೇಡರ, ಮೆಬೂಬಿ ಸೌಧಗಾರ, ಮೈತ್ರಾ ಹದಡಿ, ಲಕ್ಷ್ಮೀ ಮೇದರ, ಲತಾ ಕೋಗಳೆ, ಹನುಮಂತಪ್ಪ ಕಬ್ಬಾರ, ಕೇಶವ ಹದಡಿ, ಬಸವರಾಜ ಬಣಕಾರ, ಗೋವಿಂದರೆಡ್ಡಿ ಚಳಗೇರಿ, ಮಂಜುನಾಥ ದುಗ್ಗತ್ತಿ ಮತ್ತಿತರರಿದ್ದರು.