ಜಿಲ್ಲೆ

ಸಾಲದ ಶೂಲಕ್ಕೆ ಹೆದರಿ ಮನೆ ತೊರೆದ ಜನ

ಸುನಿಲ್ ಪೊನ್ನೇಟಿ

ಮಡಿಕೇರಿ

ಸಾಲ ಮರುಪಾವತಿ ಮಾಡುವಂತೆ ಒತ್ತಾಯಿಸಿ ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಕೊಡುತ್ತಿರುವ ತೊಂದರೆ ಮತ್ತು ಇದರಿಂದಾಗಿ ಸಾಲಗಾರರಿಗೆ ಆಗುತ್ತಿರುವ ಸಮಸ್ಯೆಗಳ ಬಗ್ಗೆ ರಾಜ್ಯದಲ್ಲಿ ಪ್ರತಿನಿತ್ಯ ಬಗೆ ಬಗೆಯ ವರದಿಗಳು ಬರುತ್ತಿದ್ದು, ಪುಟ್ಟ ಜಿಲ್ಲೆ ಕೊಡಗು ಕೂಡ ಇದರಿಂದ ಹೊರತಾಗಿಲ್ಲ. ಮೇಲ್ನೋಟಕ್ಕೆ ಕೊಡಗು ಶ್ರೀಮಂತ ಜಿಲ್ಲೆ ಎಂದು ಕಂಡು ಬಂದರೂ ಇಲ್ಲಿರುವ ಕಾರ್ಮಿಕ ವರ್ಗ, ಅರಣ್ಯ ಮತ್ತು ಅರಣ್ಯದಂಚಿನ ಪ್ರದೇಶಗಳಲ್ಲಿ ಜೀವನ ಕಂಡುಕೊAಡಿರುವ ಆದಿವಾಸಿಗಳು ಇನ್ನೂ ಬಡತನದ ಬದುಕನ್ನೇ ಸಾಗಿಸುತ್ತಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಸಾಲ ಕೊಟ್ಟ ನಂತರ ವಸೂಲಾತಿಯ ನೆಪದಲ್ಲಿ ತೊಂದರೆ ಕೊಡುತ್ತಿರುವುದು ಕಂಡು ಬರುತ್ತಿದೆ.

ಕಾರ್ಮಿಕರು ಹೆಚ್ಚು ಇರುವ ಪ್ರದೇಶಗಳು ಮತ್ತು ಗಿರಿಜನ ಹಾಡಿಗಳನ್ನೇ ಗುರಿಯಾಗಿಸಿಕೊಂಡು ಕಾರ್ಯಾಚರಣೆ ನಡೆಸುತ್ತಿರುವ ಮೈಕ್ರೋ ಫೈನಾನ್ಸ್ಗಳು ಕಡಿಮೆ ದಾಖಲಾತಿಗಳನ್ನು ಪಡೆದುಕೊಂಡು ಸಾಲ ಕೊಡುತ್ತವೆ. ಬ್ಯಾಂಕ್‌ಗಳಲ್ಲಿ ಸಾಲಕ್ಕಾಗಿ ಅಲೆದಾಡಿಸುವ ಅಧಿಕಾರಿಗಳು, ಅವರು ಕೇಳುವ ದಾಖಲೆಗಳನ್ನು ಹೊಂದಿಸಿಕೊಳ್ಳಲು ಆಗುವ ಕಷ್ಟಕ್ಕೆ ಹೋಲಿಸಿದರೆ ಮೈಕ್ರೋ ಫೈನಾನ್ಸ್ಗಳಿಂದ ಸುಲಭವಾಗಿ ಸಾಲ ಸಿಗುವುದರಿಂದ ಹಣದ ಅಗತ್ಯ ಇರುವವರು ಕೂಡಲೇ ಇತ್ತ ಕಡೆ ಆಕರ್ಷಿತರಾಗಿ ಸಾಲದ ಬಲೆಗೆ ಬೀಳುತ್ತಾರೆ.

ಮೈಕ್ರೋ ಫೈನಾನ್ಸ್ನವರು ಸಾಲ ಕೊಡುವಾಗ ಆಕರ್ಷಕ ಮಾತುಗಳ ಮೂಲಕ ಜನರನ್ನು ಸೆಳೆಯುತ್ತಾರೆ. ಸುಲಭ ಕಂತುಗಳ ಮೂಲಕ ಸಾಲ ಮರುಪಾವತಿ ಮಾಡಬಹುದು ಎಂದು ಹೇಳುತ್ತಾರೆಯೇ ವಿನಃ ಅವರು ವಿಧಿಸುವ ಹೆಚ್ಚಿನ ಬಡ್ಡಿ ದರದ ಬಗ್ಗೆ ಮಾಹಿತಿಯನ್ನೇ ಕೊಡುವುದಿಲ್ಲ ಎನ್ನುತ್ತಾರೆ ಇಲ್ಲಿ ಸಾಲ ಪಡೆದುಕೊಂಡು ಸಮಸ್ಯೆ ಎದುರಿಸುತ್ತಿರುವವರು. ಒಂದು ಕಂತು ಕಟ್ಟಲು ತಡವಾದರೂ ಫೈನಾನ್ಸ್ ಕಡೆಯವರು ಹಿಂಸೆ ಕೊಡಲು ಆರಂಭಿಸುತ್ತಾರೆ, ಅವರು ಕೊಡುವ ಮಾನಸಿಕ ಹಿಂದೆ ತಡೆಯಲಾರದವರು ಪ್ರಾಣ ಕಳೆದುಕೊಳ್ಳುವಷ್ಟರ ಮಟ್ಟಿಗೆ ಯೋಚನೆ ಮಾಡುತ್ತಾರೆ.

ಮೈಕ್ರೋ ಫೈನಾನ್ಸ್ನವರ ಕಿರುಕುಳ ಸಹಿಸಲಾಗದೇ ಕೊಡಗಿನಲ್ಲಿ ಕೆಲವು ಗಿರಿಜನ ಹಾಡಿಗಳಲ್ಲಿ ಆದಿವಾಸಿಗಳು ತಮ್ಮ ಮನೆ ಖಾಲಿ ಮಾಡಿಕೊಂಡು ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ. ಬಹುತೇಕ ಕಡೆಗಳಲ್ಲಿ ಕಾರ್ಮಿಕರು ಊರು ಬಿಟ್ಟಿರುವ ಮಾಹಿತಿ ಇದೆ. ಈ ಎಲ್ಲಾ ವಿಷಯಗಳ ಬಗ್ಗೆ ವಿಜಯವಾಣಿ ಓದುಗರು ಲೌಡ್ ಸ್ಪೀಕರ್‌ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊAಡಿದ್ದಾರೆ.

ಆದಿವಾಸಿಗಳು, ದಲಿತರು, ಶೋಷಿತರು, ಬಡರೈತರಿಗೆ ಮೈಕ್ರೋಫೈನಾನ್ಸ್ನವರು ದೊಡ್ಡ ಹಿಂಸೆ ನೀಡುತ್ತಿದ್ದಾರೆ. ಎಷ್ಟೋ ಮಂದಿ ಮನೆ ಬಿಟ್ಟು ನಾಪತ್ತೆಯಾಗಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಎಲ್ಲೋ ಲೂಟಿ ಮಾಡಿದ ಕಪ್ಪು ಹಣವನ್ನು ಯಾವುದೇ ದಾಖಲೆಗಳನ್ನು ಪಡೆಯದೆ ಸಾಲ ಕೊಡಲಾಗುತ್ತಿದೆ. ಸರ್ಕಾರ ಕೂಡಲೇ ಮೈಕ್ರೋ ಫೈನಾನ್ಸ್ನಿಂದ ಪಡೆದ ಸಂಪೂರ್ಣ ಸಾಲವನ್ನು ಮನ್ನಾ ಮಾಡಿ ಆದೇಶ ಹೊರಡಿಸಬೇಕು. ಕಿರುಕುಳ ನೀಡುವವರನ್ನು ಜೈಲಿಗಟ್ಟಬೇಕು.

ಡಿ.ಎಸ್. ನಿರ್ವಾಣಪ್ಪ, ಆದಿವಾಸಿ ಪರ ಹೋರಾಟಗಾರ, ಸೋಮವಾರಪೇಟೆ

ಮೈಕ್ರೋ ಫೈನಾನ್ಸ್ನವರ ಕಿರುಕುಳ ಮಿತಿಮೀರಿದೆ. ಕಡಿಮೆ ಬಡ್ಡಿ ದರದಲ್ಲಿ ಸಾಲ ಕೊಡುತ್ತೇವೆ ಎಂದು ಆಸೆ ಹುಟ್ಟಿಸಿ ಸಾಲಕೊಟ್ಟು ಬಡ ಜನರನ್ನು ಸಾಲಗಾರನ್ನಾಗಿ ಮಾಡಿದ್ದಾರೆ. ಬಡ್ಡಿ ಚಕ್ರಬಡ್ಡಿ ಹಾಕಿ ಬಡವರನ್ನು ಸಂಕಷ್ಟಕ್ಕೆ ಸಿಲುಕಿಸಿದ್ದಾರೆ. ಅವರ ಕಿರುಕುಳ ತಾಳಲಾರದೆ ಬಡ ಸಾಲಗಾರರು ಆತ್ಮಹತ್ಯೆ ಮಾಡಿಕೊಳ್ಳುವಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಅಕ್ರಮ ಮೈಕ್ರೋ ಫೈನಾನ್ಸ್ಗಳ ವಿರುದ್ಧ ಸರ್ಕಾರ ನಿಷೇಧ ಹೇರಬೇಕು.

ಎ.ಆರ್. ಕುಶಾಲಪ್ಪ, ರೈತಪರ ಹೋರಾಟಗಾರ, ಯಡೂರು ಗ್ರಾಮ

ಬಡವರನ್ನು ಗುರಿಯಾಗಿರಿಸಿಕೊಂಡು ಅವರಿಗೆ ಹೆಚ್ಚು ದಾಖಲಾತಿ ಪಡೆಯದೇ ಸುಲಭವಾಗಿ ಸಾಲ ನೀಡುತ್ತಾರೆ. ಅವರಿಗೆ ಸಾಲ ಮರುಪಾವತಿ ಮಾಡುವ ಶಕ್ತಿ ಇದೆಯೇ ಇಲ್ಲವೇ ಎಂದು ಪರಿಶೀಲನೆ ಮಾಡುವುದಿಲ್ಲ. ಸುಲಭವಾಗಿ ಸಾಲ ಸಿಗುತ್ತದೆ ಎಂದು ಮನೆಯವರ ಎಲ್ಲರ ಹೆಸರಿನಲ್ಲಿ ಸಾಲ ಪಡೆಯುತ್ತಿದ್ದಾರೆ. ಇದರಿಂದ ವಾರದಲ್ಲಿ ದುಡಿಯುವ ಹಣವನ್ನೆಲ್ಲಾ ಸಾಲ ಕಟ್ಟಲು ವಿನಿಯೋಗಿಸುತ್ತಿದ್ದಾರೆ. ಪ್ರತಿ ಮನೆಯಲ್ಲೂ 3-4 ಮೈಕ್ರೋ ಪೈನಾನ್ಸ್ ನಲ್ಲಿ ಸಾಲ ಪಡೆಯುತ್ತಿದ್ದಾರೆ.

ಎ. ಎಚ್. ಜ್ಯೋತಿ, ಅಂಗನವಾಡಿ ಕಾರ್ಯಕರ್ತೆ, ಆಲೂರು ಸಿದ್ದಾಪುರ

ಈ ಹಿಂದೆ ಆದಿವಾಸಿಗಳು ಕಾಡನ್ನು ಅವಲಂಬಿಸಿ ಬದುಕುತ್ತಿದ್ದರು. ಈಗ ಸಾಲ ಮಾಡಿ ತೀರಿಸಲಾಗದೆ ಫೈನಾನ್ಸ್ನವರ ಕಿರುಕುಳಕ್ಕೆ ಹೆದರಿ ತಮ್ಮ ಮನೆ, ಮಕ್ಕಳು, ಹಾಡಿಗಳನ್ನು ಬಿಟ್ಟು ಕಾಡು ಸೇರಿದ್ದಾರೆ. ಅವರ ಭಯ ನಿವಾರಣೆ ಮಾಡಿ, ಬದುಕು ಕಟ್ಟಿಕೊಳ್ಳಲು, ನೆಮ್ಮದಿಯಾಗಿ ಬದುಕಲು ಸರ್ಕಾರ ಬಲವಾದ ಕಾನೂನು ತರಬೇಕಿದೆ.

ಚಟ್ಟಡ್ಕ ವಿಶ್ವ, ಅಧ್ಯಕ್ಷ, ಗ್ರಾಮ ಪಂಚಾಯಿತಿ, ನಂಜರಾಯಪಟ್ಟಣ

ಬೆಲೆ ಏರಿಕೆಯಿಂದಾಗಿ ಬಡವರ ಜೀವನ ನಿರ್ವಹಣೆ ಕಷ್ಟ ಸಾಧ್ಯ ಆಗುತಿದ್ದು ಹಣದ ಅವಶ್ಯಕತೆ ಬಂದಾಗ ಹಿಂದೆ ಮುಂದೆ ಯೋಚಿಸದೆ ಅನಿವಾರ್ಯವಾಗಿ ಸಾಲ ಮಾಡುತ್ತಿದ್ದಾರೆ. ಸಾಲ ಹಿಂತಿರುಗಿಸಲಾಗದ ಸಂದರ್ಭದಲ್ಲಿ ಮೈಕ್ರೋ ಫೈನಾನ್ಸ್ನವರು ಮನೆ ಬಳಿ ಬಂದು ಹಣ ವಸೂಲಿಗೆ ಮುಂದಾಗುವುದು, ಮನೆ ಮುಂದೆ ಗಲಭೆ ಮಾಡಿದಾಗ ಮನೆ ಬಿಟ್ಟು ಹೋಗುವ ಸ್ಥಿತಿ ಎದುರಾಗುತ್ತಿದೆ. ಸರ್ಕಾರ ಮತ್ತು ಅಧಿಕಾರಿಗಳು ಆದಷ್ಟು ಬಡವರು ಹಾಗೂ ಗಿರಿಜನರು ಪೈನಾನ್ಸ್ ಭೂತಕ್ಕೆ ಸಿಲುಕಿ ಬಲಿ ಆಗುವಯದನ್ನು ತಪ್ಪಿಸಬೇಕಿದೆ.

ಬಿ.ಕೆ. ರಿಶು ಕಾವೇರಪ್ಪ, ವಿರಾಜಪೇಟೆ

ಹಣಕಾಸಿನ ವಿಚಾರದಲ್ಲಿ ಜನಸಾಮಾನ್ಯರು ಬಹಳ ಎಚ್ಚರದಿಂದಿರಬೇಕಿರುವುದು ಪ್ರಸ್ತುತದ ಅಗತ್ಯ. ಬಹುತೇಕವಾಗಿ ದಿನನಿತ್ಯ ವಸ್ತುಗಳ ಬೆಲೆ ಹೆಚ್ಚಳ, ಜೀವನ ನಿರ್ವಹಣೆ ಕಷ್ಟಸಾಧ್ಯವಾಗಿರುವ ಈ ದಿನಗಳಲ್ಲಿ ಹಣಕಾಸಿನ ನೆರವಿಗೆ ಹಂಬಲಿಸುವುದು ಸಾಮಾನ್ಯ. ಹೀಗಿದ್ದಾಗ ಇದನ್ನೇ ಬಂಡವಾಳ ಮಾಡಿಕೊಂಡು ಮಧ್ಯಮ, ಕೆಳ ಮಧ್ಯಮ ಹಾಗೂ ಬಡವರನ್ನು ಹಣದ ನೆರವು ಎಂಬ ಕಬಂಧ ಬಾಹುವಿನ ಮೂಲಕ ಹಸ್ತಲಾಘವ ಮಾಡಿಕೊಂಡು, ಕೊನೆಗೆ ವಸೂಲಾತಿಯ ದಂಧೆ ಮೂಲಕ ನೇಣಿನ ಕುಣಿಕೆಗೆ ಒಡ್ಡುತ್ತಿರುವುದು ಖೇದಕರ.

ಜೀವ್ ಮಞ್ಞಂಡ್ರ, ಯವಕಪಾಡಿ ಗ್ರಾಮ

ಸ್ಥಳೀಯ ಬ್ಯಾಂಕುಗಳು ಬಡವರಿಗೆ ಸಾಲ ನೀಡಲು ಹಲವಾರು ದಾಖಲಾತಿಗಳನ್ನು ಕೇಳುವುದರಿಂದ ಸಾಲ ದೊರೆಯದೇ ಐದಾರು ಮೈಕ್ರೋ ಫೈನಾನ್ಸ್ ಕಂಪನಿಗಳಿAದ ಸಾಲ ಪಡೆದು ಗ್ರಾಮಗಳಲ್ಲಿ ಕಿರುಕುಳದಿಂದ ಜನರು ಊರು ತೊರೆಯುವ ಸ್ಥಿತಿಗೆ ಬಂದಿದ್ದಾರೆ. ಮೈಕ್ರೋ ಫೈನಾನ್ಸ್ ಕಂಪನಿಗಳ ವಸೂಲಾತಿ ಕ್ರಮಗಳು ಬಡ ಜನರ ಬದುಕು ನಾಶ ಮಾಡುತ್ತಿವೆ. ಸರ್ಕಾರ ತಕ್ಷಣವೇ ಈ ಕಿರುಕುಳಕ್ಕೆ ಅಡ್ಡ ಹಾಕಲು ಕ್ರಮ ಕೈಗೊಳ್ಳದಿದ್ದರೆ, ಇಂಥ ದುಸ್ಥಿತಿಗಳು ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ.

ಪಿ.ಆರ್. ಭರತ್, ಶಾಖಾ ಕಾರ್ಯದರ್ಶಿ, ಸಿಪಿಐ(ಎಂ), ನೆಲ್ಯಹುದಿಕೇರಿ

ಮೈಕ್ರೋ ಪೈನಾನ್ಸ್ಗಳಿಂದ ಸಾಲ ಮಾಡುವ ಮೊದಲು ಬಹಳ ಯೋಚನೆ ಮಾಡಬೇಕು. ಅವರ ಮಾತುಗಳಿಗೆ ಮರುಳಾಗಿ, ಸುಲಭ ಕಂತುಗಳು, ಕಡಿಮೆ ದಾಖಲಾತಿಯ ಆಸೆಗೆ ಬಿದ್ದು ಸಾಲ ಪಡೆದುಕೊಂಡರೆ ಖಂಡಿತ ಸಮಸ್ಯೆ ಆಗುತ್ತದೆ. ಸುಲಭವಾಗಿ ಸಾಲ ಕೊಡುವವರು ತಾವು ವಿಧಿಸುವ ಬಡ್ಡಿ ದರ ಹೇಳುವುದೇ ಇಲ್ಲ. ಯಾಕೆಂದರೆ ಅವರು ಹಾಕುವ ಬಡ್ಡಿ ಹೆಚ್ಚು ಇರುತ್ತದೆ. ಸಾಲ ತೀರಿಸುವ ಸಾಮರ್ಥ್ಯ ಇದ್ದರೆ ಮಾತ್ರ ಸಾಲ ಮಾಡಬೇಕು. ಸಾಲಕ್ಕೆ ಹೆದರಿ ಪ್ರಾಣ ಕಳೆದುಕೊಂಡರೆ ಅವರನ್ನು ನಂಬಿರುವ ಕುಟುಂಬಕ್ಕೆ ಯಾರು ದಿಕ್ಕು ?

ಫಿಲೋಮಿನಾ, ಸದಸ್ಯೆ, ಗ್ರಾ.ಪಂ. ಕೂಡು ಮಂಗಳೂರು

ಯಾವುದೇ ಖಾಸಗಿ ಹಣಕಾಸು ಸಂಸ್ಥೆಯವರು ಸಾಲ ಮರು ಪಾವತಿಗಾಗಿ ಜನರಿಗೆ ಹಲ್ಲೆ ನಡೆಸುವುದು, ಅವಾಚ್ಯ ಶಬ್ದಗಳಿಂದ ನಿಂಧಿಸುವುದು ಅಥವಾ ಮನೆಗೆ ನುಗ್ಗಿ ಹೆದರಿಸುವುದು ಕಂಡುಬAದಲ್ಲಿ ಅಂಥವರ ವಿರುದ್ಧ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು.

ಸಾಲ ಮರು ಪಾವತಿಗಾಗಿ ಹಲ್ಲೆ ಮಾಡುವುದು, ಜಗಳ ಮಾಡುವುದು ಅಥವಾ ಸಮಯವಲ್ಲದ ಸಮಯದಲ್ಲಿ ಮನೆಗೆ ನುಗ್ಗಿ ಹೆದರಿಸುವುದು ಕಂಡುಬAದಲ್ಲಿ ಸ್ಥಳೀಯ ಪೊಲೀಸ್ ಠಾಣೆ ಅಥವಾ ತುರ್ತು ಸಹಾಯವಾಣಿ-112 ಗೆ ಕರೆ ಮಾಡಿ ಮಾಹಿತಿ ನೀಡಬಹುದು. ಅಥವಾ ಕೆ.ಎಸ್.ಪಿ ತಂತ್ರಾಶದ ಮೂಲಕ ಮಾಹಿತಿ ನೀಡಬಹುದು.