ಮಾಗಡಿ ; ತಾಲೂಕಿನ ಬೆಟ್ಟಹಳ್ಳಿ ಮಠದಲ್ಲಿ ಜ.5 ರಂದು ಸಂಜೆ 7ಕ್ಕೆ ಶ್ರೀ ಉರಿಲಿಂಗಶ್ರೀ ಪ್ರಶಸ್ತಿ ಪ್ರದಾನ, ಶ್ರೀಮಠದ ಹಳೇ ವಿದ್ಯಾರ್ಥಿಗಳ, ಹಿತೈಷಿಗಳ ವಾರ್ಷಿಕ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಬೆಟ್ಟಹಳ್ಳಿ ಮಠದ ಶ್ರೀಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದ ಮುಂಭಾಗ ಭಾನುವಾರ ಸಮಾವೇಶದ ಆಹ್ವಾನ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿ, ನಾಡಪ್ರಭು ಕೆಂಪೇಗೌಡರು ಬೆಟ್ಟಹಳ್ಳಿ ಮಠವನ್ನು ನಿರ್ಮಿಸಿದ್ದು, ಶ್ರೀಮಠದಿಂದ ನಾಡಿನ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿರುವ ಸಾಧಕರನ್ನು ಗುರುತಿಸಿ, ಶ್ರೀ ಉರಿಲಿಂಗಶ್ರೀ ಪ್ರಶಸ್ತಿ ಮತ್ತು ಶ್ರೀ ಗುರುರಕ್ಷೆಯನ್ನು ನೀಡಿ ಗೌರವಿಸಲಾಗುತ್ತಿದೆ. ಈ ಬಾರಿಯಿಂದ ಗ್ರಾಮೀಣ ಭಾಗದ ಹಿರಿಯ ಮುತೈದೆಯರಿಗೆ ಗೌರವ ಸಮರ್ಪಣೆ ಏರ್ಪಡಿಸಲಾಗಿದೆ. ಸಮಾಜ ಸೇವಕ ಎಲ್‌ವಿ ಟ್ರಾವಲ್ಸ್ ಮತ್ತು ಎಲ್‌ವಿ ಟ್ರಸ್ಟ್‌ನ ಸಂಸ್ಥಾಪಕ, ವ್ಯವಸ್ಥಾಪಕ ಎಲ್.ವಿ.ಪರಮಶಿವಯ್ಯ ಅವರಿಗೆ ಶ್ರೀಮಠದಿಂದ ಪ್ರಶಸ್ತಿ ನೀಡಲಾಗುವುದು ಎಂದರು.
ಶ್ರೀಬೆಟ್ಟಹಳ್ಳಿ ಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಲಿದ್ದು, ಹಿತ್ತಹಳ್ಳಿ ಮಠದ ಶ್ರೀ ಸದಾಶಿವ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸಲಿದ್ದಾರೆ. ಶಾಸಕ ಡಾ.ರಂಗನಾಥ ಅಧ್ಯಕ್ಷತೆ ವಹಿಸಲಿದ್ದು, ಶ್ರೀ ಉರಿಲಿಂಗೇಶ್ವರ ಸಮೂಹ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಹಾ.ನ.ರಾಮಕೃಷ್ಣಯ್ಯ ಪ್ರಾಸ್ತಾವಿಕ ನುಡಿಯಲಿದ್ದಾರೆ ಎಂದು ತಿಳಿಸಿದರು.
ರಾಜ್ಯ ಕಟ್ಟಡ ಮತ್ತು ಅಸಂಘಟಿತ ಕಾರ್ಮಿಕರ ಒಕ್ಕೂಟ ಅಧ್ಯಕ್ಷ ಡಾ.ಪ್ರಸನ್ನಗೌಡ ಮಾತನಾಡಿ, ಮಾಗಡಿ, ಕುಣಿಗಲ್ ಸೇರಿ ರಾಜ್ಯದ ಹಲವು ಭಾಗದಲ್ಲಿ ಬೆಟ್ಟಹಳ್ಳಿ ಮಠದಿಂದ ವಿದ್ಯಾಸಂಸ್ಥೆಗಳನ್ನು ಆರಂಭಿಸಿ, ಗ್ರಾಮೀಣ ಭಾಗದ ಲಕ್ಷಾಂತರ ವಿದ್ಯಾರ್ಥಿಗಳಿಗೆ ಶಿಕ್ಷಣ, ವಸತಿ, ದಾಸೋಹ ನೀಡಿ ಅವರ ಬದುಕಿಗೆ ಬೆಳಕಾಗಿದ್ದಾರೆ. ಶ್ರೀ ಬೆಟ್ಟಹಳ್ಳಿ ಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿಯೂ ಆ ಕಾರ್ಯವನ್ನು ಮುನ್ನಡೆಸಿಕೊಂಡು ಮಾದರಿಯಾಗಿದ್ದಾರೆ ಎಂದರು.
ನಮ್ಮ ಕರ್ನಾಟಕ ನವ ನಿರ್ಮಾಣ ವೇದಿಕೆ ಅಧ್ಯಕ್ಷ ಎನ್.ರಾಜಣ್ಣ, ಗೌರವಾಧ್ಯಕ್ಷ ಮಹಂತೇಶ್, ವಕೀಲ ಯತೀಶ್, ವಿಶ್ವಕರ್ಮ ಸಮಾಜದ ಮುಖಂಡ ಆಚಾರ್ ಮಂಜುನಾಥ್, ರಾಜ್ಯ ಕಟ್ಟಡ ಮತ್ತು ಅಸಂಘಟಿತ ಕಾರ್ಮಿಕರ ಒಕ್ಕೂಟದ ಜಿಲ್ಲಾಧ್ಯಕ್ಷ ಆನಂದ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಂಗನಾಥ್ ಇದ್ದರು.