ಜಿಲ್ಲೆ

ನರೇಗಾ ಅನುಷ್ಠಾನಕ್ಕೆ ಎಲ್ಲರ ಸಹಕಾರ ಅಗತ್ಯ : ಕೊಣ್ಣೂರು ಗ್ರಾಪಂ ಅಧ್ಯಕ್ಷೆ ಎನ್.ಮಮತಾ ಕಿರಣ್ ಅಭಿಮತ

ರೇಷ್ಮೆ ನಗರ ಡೆಸ್ಕ್

ಮಾಗಡಿ : ನರೇಗಾ ಯೋಜನೆ ಅನುಷ್ಠಾನಕ್ಕೆ ಎಲ್ಲರ ಸಹಕಾರ ಅಗತ್ಯ ಎಂದು ಕಣ್ಣೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಎನ್.ಮಮತಾ ಕಿರಣ್ ಹೇಳಿದರು.

ತಾಲೂಕಿನ ಕಣ್ಣೂರು ಗ್ರಾಪಂ ಆವರಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸಾಮಾಜಿಕ ಲೆಕ್ಕಪರಿಶೋಧನಾ ಹಾಗೂ ಮಹಿಳಾ ಮತ್ತು ಮಕ್ಕಳ ಗ್ರಾಮಸಭೆ ಉದ್ಘಾಟಿಸಿ ಮಾತನಾಡಿ, ಗ್ರಾಮಗಳ ಸರ್ವತೋಮುಖ ಅಭಿವೃದ್ಧಿಯಲ್ಲಿ ನರೇಗಾ ಯೋಜನೆಯ ಪ್ರಮುಖ ಪಾತ್ರವಹಿಸಿದೆ. ನರೇಗಾ ಇಲ್ಲದಿದ್ದರೆ ಗ್ರಾಮಗಳ ಅಭಿವೃದ್ಧಿ ಮರೀಚಿಕೆಯಾಗುತ್ತಿತ್ತು. ಆದ್ದರಿಂದ ಇದನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿದರೆ ಮಾದರಿ ಅಭಿವೃದ್ಧಿ ಗ್ರಾಮಗಳನ್ನಾಗಿ ಪರಿವರ್ತಿಸಬಹುದು ಎಂದರು.

ಶಾಲಾ ಸಿಎಂಸಿಎ ಸಂಸ್ಥೆಯ ಸದಸ್ಯೆ ಲತಾ ಮಾತನಾಡಿ, ರಾಜ್ಯದ ಪ್ರತಿ ಗ್ರಾಪಂ ಕಡ್ಡಾಯವಾಗಿ ಮಕ್ಕಳ ಗ್ರಾಮಸಭೆ ನಡೆಸಿ ಮಕ್ಕಳಿಗೆ ಸ್ಥಳೀಯ ಆಡಳಿತ ಹಾಗೂ ಮಕ್ಕಳ ಹಕ್ಕುಗಳು ಹಾಗೂ ಅವುಗಳ ಜವಬ್ದಾರಿಗಳ ಬಗ್ಗೆ ಅರಿವು ಮೂಡಿಸಬೇಕು. ರಾಮನಗರ, ತುಮಕೂರು, ಚಿಕ್ಕಮಂಗಳೂರು,ಚಿಕ್ಕಬಳ್ಳಾಪುರ, ಹಾಸನ, ಕೊಡಗು ಜಿಲ್ಲೆಗಳಲ್ಲಿ 262 ಮಕ್ಕಳ ಹಕ್ಕುಗಳ ಗ್ರಾಮಸಭೆ ನಡೆಸಿ ಕಳೆದ ವರ್ಷ 962 ಶಾಲೆಗಳಲ್ಲಿ 46,543 ಮಕ್ಕಳಿಗೆ ಜಾಗೃತಿ ಮೂಡಿಸಲಾಗಿದೆ. ಮಕ್ಕಳ ಗ್ರಾಮ ಸಭೆಯಲ್ಲಿ 4 ಸಾವಿರ ಸಮಸ್ಯೆ ಮಕ್ಕಳು ಕೇಳಿದ್ದು, 700 ಸಮಸ್ಯೆ ಬಗೆಹರಿದಿದೆ ಎಂದರು.

ವಿದ್ಯಾರ್ಥಿ ಚಿದಾನಂದ, ತನ್ಯಾಶ್ರೀ ಮಾತನಾಡಿ, ಶಾಲೆಯಲ್ಲಿನ ಸಮಸ್ಯೆಗಳ ಜತೆ ಮೂಲಸೌಕರ್ಯ ಕೊರತೆಯ ಬಗ್ಗೆ ವಿವರಿಸಿದರು.

ಪಿಡಿಒ ಕಾಂತರಾಜು ಮಾತನಾಡಿ, ಪ್ರೊಜೆಕ್ಟರ್, ಕಾಂಪೌಂಡ್, ಆಟದ ಮೈದಾನ, ಮರ ತೆರವುಗೊಳಿಸಲಾಗುವುದು, ಶೌಚಗೃಹ ಸ್ವಚ್ಛತೆಗೆ ಬೇಕಾದ ವಸ್ತುಗಳನ್ನು ನೀಡಲಾಗುವುದು. ಆಟದ ಸಾಮಾಗ್ರಿಗಳು ಸೇರಿ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡಲು ಬೇಕಾದ ಎಲ್ಲ ಮೂಲ ಸೌಕರ್ಯಗಳನ್ನು ಗ್ರಾಪಂ ಒದಗಿಸಿಕೊಡಲು ಬದ್ಧ ಎಂದರು.

ಸಿಡಿಪಿಒ ಇಲಾಖೆ ಅಧಿಕಾರಿ ವಿಜಯಲಕ್ಷ್ಮೀ ಮಾತನಾಡಿ, ಪ್ರತಿಯೊಬ್ಬರಿಗೂ ಅರೋಗ್ಯ ಬಹಳ ಮುಖ್ಯ. ಪ್ರತಿ ತಿಂಗಳು ಪೌಷ್ಠಿಕಾಂಶ ಶಿಬಿರ ಏರ್ಪಡಿಸಲಾಗಿದೆ. ಕಡ್ಡಾಯವಾಗಿ ಪೌಷ್ಠಿಕ ಆಹಾರ ಸೇವಿಸಿ, ಪೋಷಕರು ಮಕ್ಕಳನ್ನು ಉತ್ತಮವಾಗಿ ಪೋಷಿಸಿದರೆ ಈ ದೇಶದ ಭವಿಷ್ಯ ಸದೃಢವಾಗಿರುತ್ತದೆ ಎಂದರು.

ಬಾಲ್ಯ ವಿವಾಹ ಅಪರಾಧವಾಗಿದ್ದ್ದು, ಅದನ್ನು ನಿಷೇಧಿಸಲಾಗಿದೆ. ಅದರಂತೆ ಮಹಿಳೆಯರ ಮಾರಾಟದ ಹಿನ್ನೆಲೆಯಲ್ಲಿ ಗ್ರಾಪಂ ಅಧ್ಯಕ್ಷರು, ಪಿಡಿಒ ಸದಸ್ಯರು ಒಳಗೊಂಡಂತೆ ಕಾವಲು ರಕ್ಷಣೆ ರಚಿಸಲಾಗಿದೆ. ತಮ್ಮ ಸುತ್ತಮುತ ಕಂಡು ಬಂದಲ್ಲಿ ಅಂಗನವಾಡಿ ಕಾರ್ಯಕರ್ತರನ್ನು ಕೂಡಲೇ ಸಂಪರ್ಕಿಸಿ ಮಾಹಿತಿ ನೀಡಬೇಕು ಎಂದರು.

ಉಪಾಧ್ಯಕ್ಷ ಕೆ.ಜಿ. ರವೀಶ್, ಸದಸ್ಯರಾದ ಜಗದೀಶ್, ಮಹದೇವಮ್ಮ, ಲಕ್ಷ್ಮೀನರಸಿಂಹಸ್ವಾಮಿ, ಮುನಿಸ್ವಾಮಯ್ಯ, ಚಂದ್ರಕಲಾ, ಪಾರ್ವತಮ್ಮ, ಸಾಮಾಜಿಕ ಲೆಕ್ಕಪರಿಶೋದಕ ನಾಗರಾಜು, ಸಿಆರ್‌ಪಿ ಶಿವಕುಮಾರ್, ನಾಗೇಂದ್ರ, ಶೇಷಾದ್ರಿ, ಮಾಯಣ್ಣ, ಜಗದೀಶ್, ಪ್ರಕಾಶ್ ಇದ್ದರು.