ಸಿಂದಗಿ: ವಿಜಯಪುರ ಡಿಸಿಸಿ ಬ್ಯಾಂಕ್ ಕೃಷಿ ಕ್ಷೇತ್ರಕ್ಕೆ ಸಹಕಾರಿ ಆದ್ಯತೆ ನೀಡುತ್ತ ಬಂದರೂ ಇದೀಗ ಕೃಷಿಯೇತರ ಉದ್ದೇಶ ಮತ್ತು ಗುರಿಗಳಿಗಳಾಗಿ 1247 ಕೋಟಿ ಸಾಲ ರೂ. ನೀಡಿದೆ ಎಂದು ಸಹಕಾರ ಸಂಘಗಳ ವಿಶ್ರಾಂತ ಅಪರ ನಿಬಂಧಕ- ಬ್ಯಾಂಕಿನ ಅಭಿವೃದ್ಧಿ ಅಧಿಕಾರಿ ಎಂ.ಜಿ.ಪಾಟೀಲ ಹೇಳಿದರು.
ಪಟ್ಟಣದ ಚಿತ್ರಮಂದಿರ ರಸ್ತೆಯಲ್ಲಿನ ಡಿಸಿಸಿ ಬ್ಯಾಂಕ್ ಶಾಖೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಬ್ಯಾಂಕ್ ಗ್ರಾಹಕರ ಸಭೆಯಲ್ಲಿ ಅವರು ಮಾತನಾಡಿದರು.
ಬ್ಯಾಂಕ್ 3112 ಕೋಟಿ ರೂ. ಸಾಲ ನೀಡಿದ್ದು, ಇದರಲ್ಲಿ ಕೃಷಿಗಾಗಿ 1865 ಕೋಟಿ ರೂ. ಮತ್ತು ಕೃಷಿಯೇತರ ಉದ್ದೇಶಗಳಿಗಾಗಿ 1247 ಕೋಟಿ ರೂ. ಸಾಲ ನೀಡಿದೆ. ಬ್ಯಾಂಕ್ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, 2023-24ನೇ ಸಾಲಿನಲ್ಲಿ 20.23 ಕೋಟಿ ರೂ.ನಿವ್ವಳ ಲಾಭ ಗಳಿಸಿ ರಾಜ್ಯದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಜಿಲ್ಲಾ ಬ್ಯಾಂಕ್‌ಗಳಿಗೆ ಸಾರಥಿಯಾಗಿದೆ ಎಂದರು.
ಬ್ಯಾಂಕಿಂಗ್ ಕ್ಷೇತ್ರದಲ್ಲಾಗುತ್ತಿರುವ ಬದಲಾವಣೆಗಳನ್ನು ಬಳಸಿಕೊಂಡು, ಗ್ರಾಹಕರಿಗೆ ಸಮರ್ಪಕ ಮತ್ತು ಸಮಯೋಚಿತ ಸೇವೆಯನ್ನು ಒದಗಿಸುವಲ್ಲಿಯೂ ಈ ಬ್ಯಾಂಕ್ ಮುಂಚೂಣಿಯಲ್ಲಿದೆ. ಇದೀಗ ಬ್ಯಾಂಕಿನ ಗ್ರಾಹಕರಿಗಾಗಿ ಡಿಜಿಟಲ್ ಬ್ಯಾಂಕಿಂಗ್ ಸೇವೆಯನ್ನು ಒದಗಿಸುತ್ತಿದೆ. ಗ್ರಾಹಕರು ಬ್ಯಾಂಕಿನೊಂದಿಗೆ ನಿರಂತರವಾಗಿ ವ್ಯವಹರಿಸಿ, ಅದರ ಅಭಿವೃದ್ಧಿಗೆ ಸಹಕಾರಿಗಳಾಗಬೇಕು ಎಂದರು.
ಬ್ಯಾಂಕ್‌ನ ಉಪಪ್ರಧಾನ ವ್ಯವಸ್ಥಾಪಕ ಜೆ.ಬಿ.ಪಾಟೀಲ ಮಾತನಾಡಿ, ಈ ಬ್ಯಾಂಕ್ ಆರ್.ಬಿ.ಐದಿಂದ ಮಾನ್ಯತೆ ಹೊಂದಿದೆ ಎಂದರು.
ಸಭೆಯಲ್ಲಿ ಕೆಲವು ಗ್ರಾಹಕರು ಸಾಲ ಮಿತಿ ಹೆಚ್ಚಿಸುವ ಜತೆಗೆ ಬಡ್ಡಿದರ ಕಡಿಮೆಗೊಳಿಸಲು ಹಾಗೂ ಗ್ರಾಹಕರಿಗಾಗಿ ಸಾಲದ ವ್ಯವಹಾರಗಳಲ್ಲಿ ಸರಳತೆ ತರುವಂತೆ ಮನವಿ ಮಾಡಿದರು. ಗ್ರಾಹಕರ ಬೇಡಿಕೆಗಳಿಗೆ ಸ್ಪಂದಿಸಿದ ಎಂ.ಜಿ.ಪಾಟೀಲ ಅವರು ಸಾಲ ಧೋರಣೆ ಬದಲಾವಣೆ ಕುರಿತಂತೆ ಬ್ಯಾಂಕ್‌ನ ಆಡಳಿತ ಮಂಡಳಿ ತಿಳಿಸಿ ಪರಿಷ್ಕರಣೆಗೆ ಕ್ರಮವಹಿಸುವುದಾಗಿ ತಿಳಿಸಿದರು.
ಸಭೆಯಲ್ಲಿ ವಿ.ಬಿ.ಕುರುಡೆ, ಎಂ.ಆರ್.ಜಂಗಮಶೆಟ್ಟಿ, ಬಿ.ಬಿ.ಬಿರಾದಾರ, ಶಾಖಾ ವ್ಯವಸ್ಥಾಪಕ ಎ.ಎಸ್.ಕಲಶೆಟ್ಟಿ ತಾಲೂಕು ನೋಡಲ್ ಅಧಿಕಾರಿ ಎಂ.ಎಚ್.ಹತ್ತಿ ಇತರರಿದ್ದರು.