ಹುಬ್ಬಳ್ಳಿ: ಇಲ್ಲಿಯ ಶ್ರೀಸಿದ್ಧಾರೂಢ ಸ್ವಾಮಿ ಮಠದಲ್ಲಿ ಖ್ಯಾತ ಹಿಂದೂಸ್ತಾನಿ ಗಾಯಕ ಜಯತೀರ್ಥ ಮೇವುಂಡಿ ಇವರ ಸಂಗೀತ ಸಂದ್ಯಾ ಕಾರ್ಯಕ್ರಮ ಮಂಗಳವಾರ ನಡೆಯಿತು.
ಆಕಾಶವಾಣಿ ನಿಲಯ ನಿರ್ದೇಶಕ ಶರಣಬಸವ ಚೋಳಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸದ್ಗುರು ಸಿದ್ಧಾರೂಢರು ಭಜನೆ, ಕೀರ್ತನೆ, ಸಂಗೀತಕ್ಕೆ ವಿಶಿಷ್ಟ ಕೊಡುಗೆ ನೀಡಿದ್ದಾರೆ. ದೊಡ್ಡ ದೊಡ್ಡ ಕಲಾವಿದರು ಶ್ರೀಗಳ ಆಶೀರ್ವಾದ ಪಡೆದುಕೊಂಡು ಪ್ರಖ್ಯಾತಿ ಗಳಿಸಿ ತಮ್ಮ ಜೀವನ ಸಾರ್ಥಕಪಡಿಸಿಕೊಂಡಿದ್ದಾರೆ ಎಂದರು.
ಪಂಡಿತ ಜಯತೀರ್ಥ ಮೇವುಂಡಿ ಮಾತನಾಡಿ, ನನ್ನ ಹಾಡುಗಾರಿಕೆಯ ಜೀವನವನ್ನು 34 ವರ್ಷಗಳ ಹಿಂದೆ ಶ್ರೀ ಸಿದ್ಧಾರೂಢರ ಸನ್ನಿಧಾನದಲ್ಲಿ ನೆರವೇರಿಸಿದ್ದು ನನ್ನ ಪೂರ್ವಜನ್ಮದ ಪುಣ್ಯ ಎಂದು ಭಾವಿಸಿದ್ದೇನೆ. ಏನಾದರೂ ಸಾಧನೆ ಮಾಡುತ್ತಿದ್ದರೆ ಅದು ಸಿದ್ಧಾರೂಢರ ಆಶೀರ್ವಾದ ಎಂದು ಅನುಭವ ಹಂಚಿಕೊಂಡರು.
ಕಾಡರಕೊಪ್ಪದ ನ್ಯಾಯ ವೇದಾಂತಾಚಾರ್ಯ ಶ್ರೀ ದಯಾನಂದ ಸರಸ್ವತಿ ಸ್ವಾಮೀಜಿ, ಚಿಕ್ಕನಂದಿ- ಮಹಾಲಿಂಗಪುರದ ಶ್ರೀ ಸಿದ್ಧಾರೂಢರ ದರ್ಶನ ಪೀಠದ ಸದ್ಗುರು ಸಹಜಯೋಗಿ ಶ್ರೀಸಹಜಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಅತಿಥಿಗಳಾಗಿದ್ದ ಧರ್ಮದರ್ಶಿ ಕೆ.ಎಲ್. ಪಾಟೀಲ ಮಾತನಾಡಿದರು. ಶ್ರೀಮಠದ ಚೇರ್ಮನ್ ಚನ್ನವಿರ ಮುಂಗುರವಾಡಿ ಅಧ್ಯಕ್ಷತೆ ವಹಿಸಿದ್ದರು.
ಟ್ರಸ್ಟ್ ಕಮೀಟಿ ಗೌರವ ಕಾರ್ಯದರ್ಶಿ ರಮೇಶ ಬೆಳಗಾವಿ, ಧರ್ಮದರ್ಶಿಗಳಾದ ಡಾ. ಗೋವಿಂದ ಮಣ್ಣೂರ, ಬಾಳು ಮಗಜಿಕೊಂಡಿ, ಸಿದ್ದನಗೌಡ ಪಾಟೀಲ, ಗೀತಾ ಕಲಬುರ್ಗಿ, ವ್ಯವಸ್ಥಾಪಕ ಈರಣ್ಣ ತುಪ್ಪದ ಮತ್ತು ಭಕ್ತರು ಉಪಸ್ಥಿತರಿದ್ದರು.
ಧರ್ಮದರ್ಶಿ ಉದಯಕುಮಾರ ನಾಯಕ ಕಾರ್ಯಕ್ರಮ ನಿರೂಪಿಸಿದರು. ತುಕಾರಾಮ ಕಠಾರೆ ಪ್ರಾರ್ಥನೆ ಹಾಡಿದರು.