ಜಿಲ್ಲೆ

ಕರ ಹೆಚ್ಚಳಕ್ಕೆ ಸಾರ್ವಜನಿಕರ ವಿರೋಧ

ವಿಜಯಪುರ: ಮಹಾನಗರ ಪಾಲಿಕೆ ಮನೆ ಕರವನ್ನು ಶೇ.20ರಷ್ಟು ಹೆಚ್ಚಿಸಿರುವುದನ್ನು ಖಂಡಿಸಿ ನಗರಸಭೆ ಮಾಜಿ ಸದಸ್ಯ ರವೀಂದ್ರ ಕುಲಕರ್ಣಿ ನೇತೃತ್ವದಲ್ಲಿ ಸಾರ್ವಜನಿಕರು ಜಿಲ್ಲಾಧಿಕಾರಿ ಕಚೇರಿ ಶಿರಸ್ತೆದಾರ ಎಸ್.ಆರ್. ಹಿರೇಮಠ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು.
ರವೀಂದ್ರ ಕುಲಕರ್ಣಿ ಮಾತನಾಡಿ, ಜಿಲ್ಲೆಯಲ್ಲಿ ಕಳೆದ ವರ್ಷ ಸುರಿದ ಮಳೆಯಿಂದ ಜನರ ಹೊಲಮನೆಗಳು ಹಾನಿಗೊಳಗಾಗಿವೆ. ಅವುಗಳ ದುರಸ್ತಿಗೆ ಜನರಲ್ಲಿ ಹಣವಿಲ್ಲ. ಆಯುಕ್ತರು ಮೇಲ್ದರ್ಜೆಯ ಮಹಾನಗರಗಳಾದ ಬೆಂಗಳೂರು, ಮೈಸೂರು, ಮಂಗಳೂರುಗಳಲ್ಲಿದ್ದ ಕರ ಪದ್ಧತಿಯನ್ನು ವಿಜಯಪುರ ನಗರಕ್ಕೂ ವಿಧಿಸಿದರೆ ಹೇಗೆ? ಎಂದು ಪ್ರಶ್ನಿಸಿದರು. ಜಿಲ್ಲಾಧಿಕಾರಿಗಳು ಕೂಡಲೇ ಪಾಲಿಕೆಗೆ ಆದೇಶ ಹೊರಡಿಸಿ, ಮನೆ ಕರ, ಕಸದ ವಿಲೇವಾರಿ ಹಾಗೂ ಒಳಚರಂಡಿ ಕರ ಹೆಚ್ಚಿಸಿರುವುದನ್ನು ರದ್ದುಪಡಿಗೊಳಿಸಲು ಆದೇಶಿಸಬೇಕೆಂದು ಸಾರ್ವಜನಿಕರ ಪರವಾಗಿ ಮನವಿ ಮಾಡಿದರು.
ಶಿವಕುಮಾರ ಬಿರಾದಾರ, ವಿ.ವಿ. ಉತ್ತರೇಶ್ವರ, ಜಯತೀರ್ಥ ಉತ್ತರೇಶ್ವರ, ಸಾಗರ ಪಟ್ಟಣಶೆಟ್ಟಿ, ಎಸ್.ಬಿ. ಸೊನ್ನದ, ಶಿವಾನಂದ ಸಾವಳಗಿ, ಎಸ್.ಎ. ಪಾಟೀಲ ಮತ್ತಿತರರು ಉಪಸ್ಥಿತರಿದ್ದರು.