ಜಿಲ್ಲೆ

ಜನರ ಸೇವೆ ಮುಖ್ಯ, ಕ್ರೆಡಿಟ್​ ರಾಜಕಾರಣವಲ್ಲ

ಪವನ್ ಆಚಾರ್ಯ ನೀರ್ಚಾಲು

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ಮೆಟ್ರೋ ಯೋಜನೆಗಳು ಕೇಂದ್ರ ಸರ್ಕಾರದ್ದು ಮಾತ್ರವಲ್ಲ ಇದರಲ್ಲಿ ರಾಜ್ಯ ಹಾಗೂ ಕೇಂದ್ರದ ಪಾಲುದಾರಿಕೆ ಇದೆ. ಜನರ ಸೇವೆ ಮುಖ್ಯ, ಕ್ರೆಡಿಟ್​ ರಾಜಕಾರಣವಲ್ಲ ಎಂದು ಡಿಸಿಎಂ, ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್​ ಹೇಳಿದರು.

ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ ಮಂಗಳವಾರ ಸಂಚರಿಸಿ, ಪರಿಶೀಲನೆ ನಡೆಸಿ ಮಾತನಾಡಿದರು.

ಹಳದಿ ಮಾರ್ಗವನ್ನು 7,610 ಕೋಟಿ ರೂ.ವೆಚ್ಚದಲ್ಲಿ ನಿಮಾರ್ಣ ಮಾಡಿದ್ದು, 19.15 ಕಿ.ಮೀ.ಉದ್ದ, 16 ನಿಲ್ದಾಣಗಳಿರುವ ಮೆಟ್ರೋ ಹಳದಿ ಮಾರ್ಗವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಆ.10 ರಂದು ಲೋಕಾರ್ಪಣೆಗೊಳಿಸಲಿದ್ದಾರೆ. ಆ.10ರಂದು ಐಐಎಂಬಿಯಲ್ಲಿ ಇರುವ ಸಭಾಂಗಣದಲ್ಲಿ ಸಣ್ಣದಾಗು ಚೊಕ್ಕ ಕಾರ್ಯಕ್ರಮವನ್ನು ಆಯೋಜಿಸಲು ಸಿದ್ಧತೆ ನಡೆಯುತ್ತಿದೆ. ಮೆಟ್ರೋ ರೈಲಿನಲ್ಲಿ ಪ್ರಧಾನಿಯವರು, ಮುಖ್ಯಮಂತ್ರಿಗಳು, ಸ್ಥಳಿಯ ಶಾಸಕರು ಅಂದು ಪ್ರಯಾಣ ಮಾಡಲಿದ್ದಾರೆ. ಇದೇವೇಳೆ ಡಬಲ್​ ಡೆಕ್ಕರ್​ ಯೋಜನೆ ಭೂಸ್ವಾಧಿನಕ್ಕೆ ಒಂದಷ್ಟು ಅನುದಾನದ ಕೊರತೆಯಿದೆ. ಇದರ ಬಗ್ಗೆ ಪ್ರಧಾನಮಂತ್ರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದರು.

ಬೆಂಗಳೂರಿಗೆ ಇಡೀ ದೇಶದ ವಿವಿಧ ಭಾಗದ ಜನ ಬರುತ್ತಿದ್ದಾರೆ. ಒಳ್ಳೆ ವಾತಾವರಣ, ಕಾವೇರಿ ನೀರು, ಉತ್ತಮ ಸಂಸ್ಥೆಗಳಿವೆ ಎಂಬ ಕಾರಣದಿಂದಲೇ ಯಾರೂ ಬೆಂಗಳೂರು ಬಿಟ್ಟು ಹೋಗುತ್ತಿಲ್ಲ. ಮೆಟ್ರೋ ನಿಲ್ದಾಣ ಇರುವ ಕಡೆ ವಾಹನ ನಿಲ್ದಾಣಗಳಿಗೂ ಹೆಚ್ಚುವರಿ 3-4 ಎಕರೆ ಪ್ರದೇಶಗಳನ್ನು ಸ್ವಾಧಿನ ಪಡಿಸಿಕೊಳ್ಳಬೇಕು ಎಂದು ಮೆಟ್ರೋ ಪ್ರಾಧಿಕಾರಕ್ಕೆ ಸೂಚನೆ ನೀಡಿದ್ದೇನೆ. ಕೆಳಗೆ ನಿಲ್ದಾಣ ಮಾಡಿ ಮೇಲೆ ವಾಣಿಜ್ಯ ಉದ್ದೇಶಕ್ಕೆ ಬಳಸಿಕೊಳ್ಳಲಿ. ಹಳದಿ ಮಾರ್ಗ ಮಹದೇವಪುರ ಸೇರಿ ಐಟಿ ವಲಯಕ್ಕೆ ಈ ಮಾರ್ಗ ಸಂಪರ್ಕ ಕೊಂಡಿಯಾಗಲಿದೆ. ನಗರದ ಯಾವ ಭಾಗದಿಂದ ಬೇಕಾದರೂ ಇಲ್ಲಿಗೆ ಸಂಚಾರ ಸಿಕ್ಕಿಲ್ಲದೆ ಸಂಚರಿಸಬಹುದು ಎಂದರು.

ಸಂಸದರು ಅನುದಾನ ಕೊಡಿಸಲಿ: ಈಗ ಗಲಾಟೆ ಮಾಡುತ್ತಿರುವ ಸಂಸದರುಗಳು ಯಾರೂ ಅನುದಾನದ ಬಗ್ಗೆ ಮಾತನಾಡುವುದಿಲ್ಲ. ಒಂದಷ್ಟು ಅನುದಾನ ಕೊಡಿಸಿದರೆ ಬೆಂಗಳೂರಿಗೆ ಒಳ್ಳೆಯದಾಗುತ್ತದೆ. ಬರೀ ತಪ್ಪು ಕಂಡುಹಿಡಿದು ಮಾತನಾಡುತ್ತಾರೆ. ನಗರದಲ್ಲಿ ಕಟ್ಟಡಗಳನ್ನು ಕೆಡವಿದರೆ ಹೆಚ್ಚು ಪರಹಾರ ನೀಡಬೇಕಾಗುತ್ತದೆ. ಅದಕ್ಕಾಗಿ ಡಬಲ್​ ಡೆಕ್ಕರ್​ ನಿಮಾರ್ಣ ಮಾಡಲಾಗುವುದು. ಇದಕ್ಕೆ ಭೂಸ್ವಾಧಿನ ಪಡಿಸಿಕೊಳ್ಳಲಾಗುವುದು. ಇದನ್ನು ಬಿಬಿಎಂಪಿ ಹಾಗೂ ಬಿಎಂಆರ್​ಸಿಎಲ್​ ಎರಡೂ ಸೇರಿ ಮಾಡಬೇಕು ಎಂದು ತೀಮಾರ್ನ ಮಾಡಲಾಗಿದೆ ಎಂದು ಡಿ.ಕೆ.ಶಿವಕುಮಾರ್​ ತಿಳಿಸಿದರು.

ಹೆಬ್ಬಾಳ ಮೇಲ್ಸೆತುವೆ ಉದ್ಘಾಟನೆ ಆ.15ರ ಒಳಗೆ: ಆ.15ರ ಒಳಗಾಗಿ ಹೆಬ್ಬಾಳ ಮೇಲ್ಸೆತುವೆ ಉದ್ಘಾಟನೆಯನ್ನು ನೆರವೇರಿಸಲಾಗುವುದು. ಅದಕ್ಕಾಗಿ ಮುಖ್ಯಮಂತ್ರಿಯವರ ದಿನಾಂಕ ಪಡೆದು ಮುಹೂರ್ತ ನಿಶ್ಚಯಿಸಲಾಗುವುದು. ಈಗ ಕೆ.ಆರ್​ ಪುರಂ ನಿಂದ ಮೇಖ್ರಿ ವೃತ್ತದ ಕಡೆ ಮಾತ್ರ ಲೋಕಾರ್ಪಣೆ ಮಾಡಲಾಗುವುದು. ಇನ್ನೊಂದು ಭಾಗದ ಮೇಲ್ಸೇತುವೆಯನ್ನು ಆ ಬಳಿಕ ಉದ್ಘಾಟನೆ ಮಾಡಲಾಗುವುದು. ಹೆಬ್ಬಾಳ&ನಾಗಾವರ ಕಡೆ ಎಸ್ಟೀಮ್​ ಮಾಲ್​ ನಿಂದ ವಿಶ್ವವಿದ್ಯಾಲಯದ ತನಕ ಹೊಸ ಟನಲ್​ ರಸ್ತೆ ಮಾಡಲಾಗುವುದು ಎಂದು ಡಿ.ಕೆ.ಶಿವಕುಮಾರ್​ ತಿಳಿಸಿದರು.