ಮೈಸೂರು: ಎರಡನೇ ಹಂತದ ನಗರಗಳಲ್ಲಿ ಮೆಟ್ರೋ ರೈಲು ಸಂಚಾರಕ್ಕೆ ಕ್ರಮ ವಹಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿಕೆ ನೀಡಿದ್ದು, ಮೈಸೂರಿನಲ್ಲೂ ಮೆಟ್ರೋ ರೈಲು ಸಂಚಾರಕ್ಕೆ ಪೂರಕವಾದ ತಯಾರಿ ಮಾಡಿಕೊಳ್ಳಲಾಗುತ್ತಿದೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.
ಮೈಸೂರಿಗೆ ಮೆಟ್ರೋ ತರುವ ನಿಟ್ಟಿನಲ್ಲಿ ರೈಲ್ವೆ ಟ್ರಾೃಕ್‌ಅನ್ನು 4ಲೈನ್ ಮಾಡಲು ಸಮಗ್ರ ಯೋಜನಾ ವರದಿ (ಡಿಪಿಆರ್) ತಯಾರಿಸಲು ಆದೇಶವಾಗಿದೆ. ಇದರ ಜತೆಗೆ ಮೈಸೂರು-ಚೆನ್ನೈ ನಡುವೆ ಬುಲೆಟ್ ರೈಲು ಸಂಚಾರ ಶೀಘ್ರದಲ್ಲಿಯೇ ಪ್ರಾರಂಭವಾಗಲಿದೆ. ಮೈಸೂರಿಗೆ 2014ಕ್ಕೂ ಮುಂಚೆ ಯಾವುದೇ ಹೊಸ ರೈಲುಗಳು ಬಂದಿರಲಿಲ್ಲ. 2014ರ ನಂತರ 11 ರೈಲುಗಳನ್ನು ತಂದಿದ್ದೇನೆ, ಸದ್ಯದಲ್ಲಿಯೇ 12ನೇ ರೈಲು ಮೈಸೂರು-ತಮಿಳುನಾಡಿನ ರಾಮೇಶ್ವರಂ ನಡುವೆ ಸಂಚರಿಸಲಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಬಿ.ಎಸ್. ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದ ಸಂದರ್ಭ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರಕ್ಕೆ ಸಾಕಷ್ಟು ಅನುದಾನ ನೀಡಿದ್ದಾರೆ. ಸದ್ಯದಲ್ಲೇ ಮೈಸೂರಿನಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣವಾಗಲಿದೆ ಎಂದರು.